ಕಾಂಗ್ರೆಸ್‌ಗೆ ಠೇವಣಿ ಉಳಿಸಿಕೊಳ್ಳಲು ಆಗದಂತಹ ದಯನೀಯ ಸ್ಥಿತಿ
ಚಿಕ್ಕನಾಯಕನಹಳ್ಳಿ: 150 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ಚುನಾವಣೆಗಳಲ್ಲಿ ಠೇವಣಿ ಉಳಿಸಿಕೊಳ್ಳಲಾರದಂತಹ ದಯನೀಯ ಸ್ಥಿತಿ ತಲುಪಿರುವುದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಶಾಸಕ ಬಿ.ಲಕ್ಕಪ್ಪ ನುಡಿದರು.
ಅವರು ಶನಿವಾರ ಪಕ್ಷದ ಕಚೇರಿಯಲ್ಲಿ ಮಾತನಾಡುತ್ತಾ ಸಂಘಟನೆಯ ದೃಷ್ಟಿಯಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಸಭೆ ಕರೆದಿರುವುದಾಗಿ ನುಡಿದರು. ಈ ಸಭೆ ಯಾರ ವಿರುದ್ಧವೂ ಅಲ್ಲ,ಪಕ್ಷದಲ್ಲಿ ಎಲ್ಲರನ್ನು ಒಟ್ಟಿಗೆ ಕರೆದೊಯ್ಯುವ ಪ್ರಯತ್ನವಾಗಿ ಸಭೆ ಕರೆಯಲಾಗಿದೆ. ಮುಂಬರುವ ಲೋಕಸಭಾ ಚುನಾವಣೆಯ
ಹಿನ್ನೆಲೆಯಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸ ಬೇಕಾಗಿದ್ದು, ಕಳೆದ 4 ಚುನಾವಣೆಗಳಿಂದ ಪಕ್ಷ ಕ್ಷೇತ್ರದಲ್ಲಿ ಠೇವಣಿ ಗಳಿಸಲು ಸಾಧ್ಯವಾಗಿಲ್ಲ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲು ನಮ್ಮ ಸಾಧನೆ ಶೂನ್ಯವಾಗಿದೆ. ಯಾವ ಪುರುಷಾರ್ಥಕ್ಕಾಗಿ ಕಿತ್ತಾಡ ಬೇಕು. ಹೈಕಮಾಂಡ್‌ನವರು ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ತಪ್ಪು ನಿರ್ಧಾರ ತಳೆದಿರುವುದೇ ಪಕ್ಷದ ಸೋಲಿಗೆ ಕಾರಣ. ಪಕ್ಷದ ಪ್ರಾಥಮಿಕ ಸದಸ್ಯತ್ವವೂ ಇಲ್ಲದವರನ್ನು ಅಭ್ಯರ್ಥಿಗಳನ್ನಾಗಿ ಮಾಡಿ ಪಕ್ಷದ ಹೀನಾಯ ಸೋಲುಂಟಾಗಿದೆ. ವೈಯ್ಯಕ್ತಿಕ ಹಿತಾಸಕ್ತಿಗೆ ಪಕ್ಷವನ್ನು ಬಲಿಗೊಡುವ ಪ್ರಕ್ರಿಯೆ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಆಡಳಿತ ನಡೆಸುತ್ತಿರುವ ಸಂದರ್ಭದಲ್ಲಿ ಎಲ್ಲರು ಒಟ್ಟಾಗಿ ಕಾರ್ಯಕರ್ತರಿಗೆ ಶಕ್ತಿತುಂಬುವು ಕೆಲಸ ಮಾಡದೆ, ಗುಂಪು ರಾಜಕೀಯದಿಂದಾಗಿ ಹಲವಾರು ಪಟ್ಟಿ ಕಳುಹಿಸವುದರಿಂದಾಗಿ ಪ್ರಕ್ರಿಯೆ ನಿಂತಿದೆ. ಇದರಿಂದ ಕಾರ್ಯಕರ್ತರಲ್ಲಿ ನಿರಾಸೆ ಮೂಡಿದೆ. ಬ್ಲಾಕ್ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಗೊಂದಲ ಉಂಟಾಗಿದ್ದು, ಸೀಮೆಎಣ್ಣೆ ಕೃಷ್ಣಯ್ಯನವರು ಪಕ್ಷದ ಸಭೆ ಕರೆದು ತೀರ್ಮಾನ ಕೈಗೊಳ್ಳದೆ ಏಕಾಏಕಿ ಹೈಕಮಾಂಡಿನಿಂದ ಆದೇಶ ತಂದು ಗೊಂದಲ ಮೂಡಿಸುವುದಕ್ಕೆ ಕಾರಣರಾದರು. ಇದರಿಂದ ಏನನ್ನು ಸಾಧಿಸಿದಂತಾಯಿತು.
8 ತಿಂಗಳಿಂದ ಬರೀ ಕಿತ್ತಾಟದಲ್ಲೇ ಕಾಲ ಕಳೆದುದು ಬಿಟ್ಟರೆ ಒಂದು ಸಭೆಯನ್ನು ಕರೆದಿಲ್ಲ. ಪಕ್ಷದ ಕಾರ್ಯಕ್ರಮಗಳನ್ನು ಕಾರ್ಯಕರ್ತರಗೆ ತಿಳಿಸಿಲ್ಲ. ಇದರಿಂದ ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನೆಡೆಯುಂಟಾಗುತ್ತದೆ. ಆದ್ದರಿಂದ ಈಗಲಾದರೂ ಎಲ್ಲರೂ ಸಂಘಟಿತರಾಗಿ ಹಳೆಯದನ್ನು ಮರೆತು ಸಂಘಟನೆಗಾಗಿ ದುಡಿಯೋಣ ಎಂದರು.
ಪಕ್ಷದ ಹಿರಿಯ ಉಪಾಧ್ಯಕ್ಷ ನಿಜಾನಂದ ಮೂರ್ತಿಯವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಎಚ್.ಬಿ.ಎಸ್.ನಾರಾಯಣಗೌಡ, ಧರಣಿ ಭಾವನಹಳ್ಳಿ ಮಹಾಲಿಂಗಯ್ಯ, ಹಿಂದುಳಿದ ವರ್ಗದ ತಾಲೂಕು ಅಧ್ಯಕ್ಷ ತೀರ್ಥಪುರ ವಾಸು, ಪ್ರಧಾನ ಕಾರ್ಯದರ್ಶಿ ಕೆ.ಜಿ. ಕೃಷ್ಣೇಗೌಡ, ಸಾದರಹಳ್ಳಿ ಮಲ್ಲಿಕಾರ್ಜುನಯ್ಯ, ಚಂದ್ರಯ್ಯ, ಗೋವಿಂದರಾಜು, ಮುದ್ದುವೀರಯ್ಯ ಮುಂತಾದವರಿದ್ದರು.