ಕೇವಲ ಅಂಕಿ ಅಂಶಗಳ ಸಾಧನೆ ಕೈಬಿಡಿ
ತಿಪಟೂರು: ಸರ್ಕಾರಿ ಅಧಿಕಾರಿಗಳು ಕೇವಲ ಅಂಕಿ ಅಂಶಗಳ ಸಾಧನೆಗಳನ್ನು ಮುದ್ರಿಸಿ ಶಾಸಕರ ಪ್ರಗತಿ ಪರಿಶೀಲನಾ ಸಭೆಗೆ ಮಂಡಿಸುವುದನ್ನು ಬಿಟ್ಟು ತಮ್ಮ ಇಲಾಖೆ ಅಥವಾ ತಾವು ವೈಯಕ್ತಿಕವಾಗಿ ಯಾವ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿದ್ದೇವೆಂಬುದನ್ನು ಇನ್ನು ಮುಂದಾದರೂ ತಿಳಿಸಲಿ. ಸಣ್ಣಪುಟ್ಟ ಕಾನೂನು ಅಥವಾ ಬೇರಾವುದೇ ಉದ್ದೇಶದಿಂದ ಮಾನವೀಯತೆ ಮತ್ತು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿಕೊಡಲು ಕೇವಲ ಸಬೂಬು ಹೇಳುವುದನ್ನು ಈಗಿನಿಂದಲೇ ನಿಲ್ಲಿಸಿ ಎಂದು ಶಾಸಕ ಕೆ.ಷಡಕ್ಷರಿ ಅಧಿಕಾರಿಗಳನ್ನು ಉದ್ದೇಶಿಸಿ ತುಸು ಖಾರವಾಗಿಯೇ ಹೇಳಿದರು.
ನಗರದ ತಾಪಂ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು.
ಅರ್ಹ ಫಲಾನುಭವಿಗಳಿಗೆ ಸವಲತ್ತು ತಲುಪಿಸುವಲ್ಲಿ ವಿಳಂಬವಾಗಬಾರದು. ಸಾಮಾಜಿಕ ಭದ್ರತೆ ಯೋಜನೆಗಳಾದ ವೃದ್ಯಾಪ್ಯ, ಸಂಧ್ಯಾ ಸುರಕ್ಷಾ,ಅಂಗವಿಕಲ ಮತ್ತು ವಿಧವಾ ವೇತನಗಳನ್ನು ತುಸು ಮಾನವೀಯತೆ ಆಧಾರದಲ್ಲೂ ಪರಿಶೀಲಿಸಿ ನೀಡುವತ್ತ ಮುಂದಾಗಬೇಕೆಂದು ತಹಸೀಲ್ದಾರ್ಗೆ ತಿಳಿಸಿದರು.
ಕಂದಾಯ ಇಲಾಖೆಯ ಕೆಲ ಅಧಿಕಾರಿಗಳು ಇಲ್ಲ ಸಲ್ಲದ ಸಬೂಬೂ ಹೇಳಿ ಅರ್ಜಿಗಳನ್ನು ವಜಾಗೊಳಿಸುತ್ತಿರುವ ಸಾಕಷ್ದು ದೂರುಗಳು ಕೇಳಿಬಂದಿದ್ದು, ಇಂತಹ ಸಮಸ್ಯೆಗಳನ್ನು ಸರಿಪಡಿಸುವಂತೆ ತಿಳಿಸಿದರು.
ಪಡಿತರ ಕಾರ್ಡ್ಗಳ ವಿತರಣೆಯಲ್ಲಿ ಸಾಕಷ್ಟು ವಿಳಂಬವಾಗಿದ್ದು ಕೂಡಲೆ ನೀಡಲು ಶಾಸಕರು ತಾಕೀತು ಮಾಡಿದರು. ತಾಲೂಕಿನಲ್ಲಿರುವ ಒಟ್ಟು ಕುಟುಂಬಗಳ ಲೆಕ್ಕಕ್ಕೂ ವಿತರಣೆ ಮಾಡಿರುವ ಕಾರ್ಡ್ಗಳ ಲೆಕ್ಕದ ತಾಳೆಯಲ್ಲಿ ಸಾಕಷ್ಟು ಲೋಪ ಕಾಣುತ್ತಿದ್ದು, ಈ ಬಗ್ಗೆ ಕೂಡಲೆ ವರದಿ ನೀಡಬೇಕೆಂದು ತಿಳಿಸಿದರು. ಕೆಲ ಅಂಗನವಾಡಿಗಳಲ್ಲಿ ವಿತರಿಸಲಾಗುವ ಆಹಾರ ಪದಾರ್ಥಗಳು ಮಾರಾಟವಾಗುತ್ತಿದ್ದು, ಈ ಬಗ್ಗೆ ಇಲಾಖಾ ಮುಖ್ಯಸ್ಥರು ದಿಢೀರ್ ಪರಿಶೀಲನೆ ನಡೆಸಬೇಕೆಂದು ಸೂಚಿಸಿದರು.
ಬೇಜವಾಬ್ದಾರಿ ನಗರಸಭೆ: ನಗರಸಭಾ ವತಿಯಿಂದ ಕೊರೆದಿರುವ ಬೋರ್ವೆಲ್ಗಳಿಗೆ ಕಾನೂನು ರೀತಿ ವಿದ್ಯುತ್ ಸಂಪರ್ಕ ಪಡೆದಿಲ್ಲವಾದ್ದರಿಂದ ಬೆಸ್ಕಾಂ ಅಧಿಕ ದಂಡ ವಿಧಿಸಿರುವ ಬಗ್ಗೆ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಇಂಜಿನಿಯರ್ರನ್ನು ತರಾಟೆಗೆ ತೆಗೆದುಕೊಂಡರು.
ಬೆಸ್ಕಾಂ ರೈತರಿಗೆ ಅಗತ್ಯವಿರುವ ಟಿ.ಸಿಗಳು ಸುಟ್ಟಲ್ಲಿ ಕೂಡಲೆ ಬದಲಾಯಿಸಿಕೊಡಬೇಕು. ಹಾಗೆಯೇ ಯಾವ ಕಾರಣಕ್ಕೂ ರೈತರಿಗೆ ನೀಡಬೇಕಾಗಿರುವ ವಿದ್ಯುತ್ ಕಡಿತಗೊಳಿಸಬಾರದು ಎಂದು ಎಚ್ಚರಿಸಿದರು.
ತಾಲೂಕಿನಲ್ಲಿ ರೇಷ್ಮೆ ಕೃಷಿ ವಿಸ್ತರಣೆಯಾಗದಿರುವುದನ್ನು ಗಮನಿಸಿದ ಶಾಸಕರು ತೆಂಗು ಹಾಳಾಗಿದ್ದು ಹೆಚ್ಚಿನ ರೈತರಿಗೆ ರೇಷ್ಮೆ ಬೆಳೆಯಲು ಉತ್ತೇಜಿಸಿ, ಸುಳ್ಳು ಅಂಕಿ ಅಂಶ ನೀಡುವುದನ್ನು ನಿಲ್ಲಿಸಿ ರೇಷ್ಮೆ ಬೆಳೆಯಲು ಇರುವ ಸರ್ಕಾರಿ ಸವಲತ್ತು ಬಗ್ಗೆ ಮನವರಿಕೆ ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕಳಪೆ ಕಾಮಗಾರಿ: ತಾಲೂಕಿನ ಇಂಜಿನಿಯರಿಂಗ್ ವಿಭಾಗದಲ್ಲಿ ಕಳಪೆ ಕಾಮಗಾರಿಗಳಿಗೆ ಹಣ ನೀಡುತ್ತಿರುವುದು ಗಮನಕ್ಕೆ ಬಂದಿದ್ದು, ಅಂತಹ ಅಧಿಕಾರಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು. ತಾಪಂ ಅಧ್ಯಕ್ಷೆ ಶಿವಗಂಗಮ್ಮ, ಉಪಾಧ್ಯಕ್ಷ ರಾಜು, ತಹಸೀಲ್ದಾರ್ ಮಂಜುನಾಥ್, ಇಓ ದಿಬ್ಬದಮನಿ ಇದ್ದರು.