ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕೊಳಾಯಿಯಲ್ಲಿ ಕೊಳಚೆ ನೀರು : ಪುರಸಭೆ ವಿರುದ್ಧ ಗೃಹಿಣಿಯರ ಆಕ್ರೋಶ

Vishwanath S
Updated On : 7 Mar 2014, 12:24 pm

ಕುಣಿಗಲ್: ಪುರಸಭೆಯ ಮೂರು, ನಾಲ್ಕು ಮತ್ತು ಒಂಭತ್ತನೆ ವಾರ್ಡ್‌ನಲ್ಲಿ ಗುರುವಾರ ಕುಡಿಯಲು ಪೂರೈಸಿದ ಕೊಳಾಯಿ ನೀರು ಸಂಪೂರ್ಣ ಕೊಳಚೆ ಮತ್ತು ವಾಸನೆಯಿಂದ ಕೂಡಿದ್ದ ಹಿನ್ನೆಲೆಯಲ್ಲಿ ಗೃಹಿಣಿಯರು ಪುರಸಭೆ ಕಾರ್ಯವೈಖರಿಗೆ ಹಿಡಿಶಾಪ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ರಮಣಬ್ಲಾಕ್, ಉಪ್ಪಾರರ ಬೀದಿ, ಬೈರಾಗಿಮಠದ ಬೀದಿಗಳು 9,3,4ನೇ ವಾರ್ಡ್ ಪ್ರದೇಶಕ್ಕೆ ಸೇರಿದ್ದು, ಈ ಭಾಗದ ಸುಮಾರು ಎಂಟುನೂರಕ್ಕೂ ಹೆಚ್ಚುಮನೆಗಳಿಗೆ ಕಳೆದ ಎರಡು ವಾರಗಳಿಂದಲೂ ಕುಡಿಯಲು ನೀರು ಪೂರೈಸಿರಲಿಲ್ಲ. ನಾಗರಿಕರ ಒತ್ತಾಯದ ಮೇರೆಗೆ ಗುರುವಾರ ಮಧ್ಯಾಹ್ನ ಕುಡಿವ ನೀರು ಪೂರೈಸಿದ್ದು, ಗೃಹಿಣಿಯರು ಪಾತ್ರೆಗಳನ್ನು ಬೆಳಗಿ, ಕುಡಿವ ನೀರು ಸಂಗ್ರಹಿಸಲು ಮುಂದಾದಾಗ, ಕೊಳಾಯಿಯಲ್ಲಿ ಕುಡಿಯುವ ನೀರು ಬರುವ ಬದಲು, ವಾಸನೆಯುಕ್ತ ಚರಂಡಿನೀರು ಬಂದಿದ್ದು, ಗೃಹಿಣಿಯರು ಬೆಚ್ಚಿ ಬೀಳುವಂತಾಯಿತು.
ಕೆಲವರು ನೀರನ್ನು ಮನೆಯಲ್ಲಿ ನೀರು ಸಂಗ್ರಹಕ್ಕೆ ಅಳವಡಿಸಿದ್ದ ಸಂಪ್‌ಗಳಿಗೆ ಬಿಟ್ಟಿದ್ದು, ಕೆಲವೆ ಕ್ಷಣಗಳಲ್ಲಿ ಮನೆ ಪೂರ್ತಿ ಕೆಟ್ಟವಾಸನೆ ಬರಲಾರಂಭಿಸಿತು. ಸಂಪ್ ತೆಗೆದು ನೋಡಿದಾಗ ಪುರಸಭೆ ಪೂರೈಸಿದ ಚರಂಡಿ ನೀರಿನಿಂದ ಮೊದಲೆ ಸಂಗ್ರಹಿಸಿದ್ದ ನೀರು ಸಹ ಮಲೀನಗೊಂಡು ಗೃಹಿಣಿಯರು, ನಾಗರಿಕರು ಪರದಾಡುವಂತಾಯಿತು.ಪುರಸಭೆಯ ಕಾರ್ಯವೈಖರಿಗೆ ಹಿಡಿಶಾಪ ಹಾಕಿದ ವಾರ್ಡ್‌ನ ವಿಜಯಮ್ಮ, ರೇಣುಕಮ್ಮ, ಭಾಗ್ಯಮ್ಮ,ನಾಗಮ್ಮ, ಯಶೋದಮ್ಮ, ಮುಖಂಡ ರಾಜು ಇತರರು, ಹದಿನೈದು ದಿನವಾದರೂ ನೀರು ಬಿಡೊಲ್ಲ ಕೇಳಿದರೆ ಇವತ್ತುನಾಳೆ ಅಂತಾರೆ. ಪುರಸಭೆ ಸದಸ್ಯರು ಮತ ಕೇಳಿ ಹೋದವರು ಇತ್ತ ತಲೆಹಾಕಿಲ್ಲ.
ಕೊಳಚೆ ನೀರು ಬರ್ತಾ ಇದೆ ಅಂತ ಹೇಳಿದರೆ, ಅರ್ಧಗಂಟೆ ಬಿಟ್ಟು ನೀರು ಹಿಡಿಯಿರಿ ಎಂದು ನೀರು ಪೂರೈಕೆ ಸಿಬ್ಬಂದಿ ಹೇಳ್ತಾರೆ. ಹೇಳೋರು ಇಲ್ಲ ಕೇಳೊರು ಇಲ್ಲ. ಮೊದಲೆ ಬೇಸಿಗೆಕಾಲ ಏನಾದರೂ ಸಾಂಕ್ರಾಮಿಕ ರೋಗಗಳು ಬಂದರೆ ಯಾರು ಹೊಣೆ. ಜಾನುವಾರುಗಳು ಈ ನೀರನ್ನು ಮೂಸಿ ನೋಡಲ್ಲಾ, ಅಂತ ನೀರನ್ನು ಪುರಸಭೆ ಜನತೆಗೆ ಪೂರೈಸಿದೆ.ಕೊಳಚೆ ನೀರು ಬಿಟ್ಟಕಾರಣ ಸಂಗ್ರಹಿಸಿದ್ದ ನೀರು ಸಹ ಮಲೀನಗೊಂಡು ಎಲ್ಲಾ ನೀರು ಚೆಲ್ಲಿದ್ದೇವೆ ಈಗ ನೀರಿಗಾಗಿ ಖಾಸಗಿ ಟ್ಯಾಂಕರ್ ಮೊರೆ ಹೋಗಬೇಕು ಎಂದು ಅಳಲು ತೋಡಿಕೊಂಡರು. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ, ಕ್ರಮ ಕೈಗೊಂಡು ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement