ಜಿಪಂ ಎಂಜಿನಿಯರ್, ಗ್ರಾಪಂ ಕಾರ್ಯದರ್ಶಿ ಅಮಾನತು
ಪಾವಗಡ: ತಾಲೂಕಿನ ಚಿಕ್ಕಹಳ್ಳಿ ಗ್ರಾಪಂ ವಿವಿಧ ಯೋಜನೆಗಳ ದುರುಪಯೋಗದ ಹಿನ್ನೆಲೆಯಲ್ಲಿ ಶುಕ್ರವಾರ ಜಿಪಂ ಎಂಜಿನಿಯರ್ ಕೃಷ್ಣಪ್ಪ ಹಾಗೂ ಗ್ರಾಪಂ ಕಾರ್ಯದರ್ಶಿ ಶಿವರಾಮ್ ಅವರನ್ನು ಅಮಾನತು ಪಡಿಸಿ ಜಿಪಂ ಸಿಇಒ ಆದೇಶಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ತಾಲೂಕಿನ ಚಿಕ್ಕಹಳ್ಳಿ ಗ್ರಾಪಂನಲ್ಲಿ ಕಾರ್ಯದರ್ಶಿ ಶಿವರಾಮ್ ವಿವಿಧ ಯೋಜನೆಗಳ ಅಡಿಯಲ್ಲಿ ಕೋಟ್ಯಂತರ ರು.ಗಳ ಭ್ರಷ್ಟಾಚಾರ ಎಸಗಿದ್ದಾರೆಂದು ಚಿಕ್ಕಹಳ್ಳಿ ಗ್ರಾಮದ ಮುಖಂಡ ಅದಿನಾರಾಯಣರೆಡ್ಡಿ ಹಾಗೂ ಬಸವರಾಜ್ ತನಿಖೆ ನಡೆಸುವಂತೆ ಜಿಪಂ ಸಿಇಒ ಅವರಿಗೆ ದೂರು ಸಲ್ಲಿಸಿ ಒತ್ತಾಯಪಡಿಸಿದ್ದರು.
ಸಾರ್ವಜನಿಕ ದೂರನ್ನು ಗಂಭೀರವಾಗಿ ಪರಿಗಣಿಸಿದ ಜಿಪಂ ಸಿಇಒ ಗೋವಿಂದರಾಜ್ ಕೂಡಲೇ ತನಿಖೆ ಮಾಡಿ ವರದಿ ಸಲ್ಲಿಸಲು ತಾಪಂ ಇಒ ತಿಪ್ಪೇಸ್ವಾಮಿ ಅವರಿಗೆ ಆದೇಶಿಸಿದ್ದರು.
ಜಿಪಂ ಸಿಇಒ ಆದೇಶದ ಮೇರೆಗೆ ತಾ. ಚಿಕ್ಕಹಳ್ಳಿ ಗ್ರಾಪಂಗೆ ಭೇಟಿ ಕೊಟ್ಟ ತಾಪಂ ಇಒ ತಿಪ್ಪೇಸ್ವಾಮಿ ಪ್ರಸಕ್ತ ಸಾಲಿನ ಚಿಕ್ಕಹಳ್ಳಿ ಗ್ರಾಪಂನ ವಿವಿಧ ಯೋಜನೆಯ ದಾಖಲೆಗಳ ಪರಿಶೀಲನೆ ನಡೆಸಿದ್ದರು.
ಖಾತ್ರಿ ಯೋಜನೆ ಸೇರಿದಂತೆ ಬಸವ ವಸತಿ, ಇಂದಿರಾ ಅವಾಸ್ 13ನೇ ಹಣಕಾಸು ಹಾಗೂ ಇತರೆ ಗ್ರಾಪಂ ಯೋಜನೆಗಳಲ್ಲಿ ಜಿಪಂ ಎಂಜಿನಿಯರ್ ಕೃಷ್ಣಪ್ಪ ಹಾಗೂ ಕಾರ್ಯದರ್ಶಿ ಗುಮ್ಮಘಟ್ಟ ಶಿವರಾಮ್ 3 ತಿಂಗಳಲ್ಲಿಯೇ ಸುಮಾರು 19 ಲಕ್ಷ ರು.ಗಳ್ಟು ಭ್ರಷ್ಟಾಚಾರ ಎಸಗಿರುವ ಬಗ್ಗೆ ಸಾಬೀತಾಗಿ ವರದಿಯನ್ನು ಜಿಪಂ ಸಿಇಒ ಅವರಿಗೆ ಸಲ್ಲಿಸಿದ್ದರು.
ಇಒ ತಿಪ್ಪೇಸ್ವಾಮಿ ಸಲ್ಲಿಸಿದ್ದ ವರದಿಯನ್ನು ಪರಿಗಣಿಸಿದ ಸಿಇಒ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದ ಎಂಜಿನಿಯರ್ ಕೃಷ್ಣಪ್ಪ ಮತ್ತು ಕಾರ್ಯದರ್ಶಿ ಶಿವರಾಮ್ರನ್ನು ಅಮಾನತು ಪಡಿಸಿ ಆದೇಶ ಜಾರಿಮಾಡಿದ್ದಾರೆ.