ವಾಲ್ಮೀಕಿ ಬ್ಯಾಂಕ್ ಅಧ್ಯಕ್ಷರಾಗಿ ಜಿ.ಆರ್.ರವೀಶ್ ಆಯ್ಕೆ
ಗುಬ್ಬಿ: ಪಟ್ಟಣದ ಶ್ರೀ ವಾಲ್ಮೀಕಿ ಪತ್ತಿನ ಸಹಕಾರ ಬ್ಯಾಂಕ್ ಆಡಳಿತ ಮಂಡಳಿ ನೂತನ ಅಧ್ಯಕ್ಷರಾಗಿ ಜಿ.ಆರ್.ರವೀಶ್, ಉಪಾಧ್ಯಕ್ಷರಾಗಿ ಕೆ.ನಾಗರಾಜು ಅವಿರೋಧ ಆಯ್ಕೆಯಾದರು.
2 ತಿಂಗಳ ಹಿಂದೆ ಸ್ಥಾಪಿತವಾದ ಈ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಜಿ.ಎನ್.ಶಾಂತ, ಕೆ.ಎಸ್.ಹೇಮಲತಾ, ಎ.ನರಸಿಂಹಮೂರ್ತಿ, ಕೃಷ್ಣಮೂರ್ತಿ, ಬಿ.ಎಸ್.ನರಸಿಂಹಮೂರ್ತಿ, ರಾಘವೇಂದ್ರ, ಡಿ.ದೇವರಾಜು, ಜಿ.ಎನ್.ಅಣ್ಣಪ್ಪಸ್ವಾಮಿ, ಎನ್.ಲಕ್ಷ್ಮೀರಂಗಯ್ಯ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷ ಜಿ.ಆರ್.ರವೀಶ್ ಮಾತನಾಡಿ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ನಾಯಕ ಸಮುದಾಯದ ಆರ್ಥಿಕ ಸಬಲತೆಗೆ ಸಂಘ ದುಡಿಯಲಿದೆ. ಈ ಮಹತ್ತರ ಕಾರ್ಯಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಸಂಘದ ಮೂಲಕ ಹಮ್ಮಿಕೊಳ್ಳುವುದಾಗಿಯೂ ತಿಳಿಸಿದರು.
ಮಾದಾಪುರದಲ್ಲಿ ಸಮುದಾಯ ಭವನ ಉದ್ಘಾಟನೆ
ಗುಬ್ಬಿ: ತಾಲೂಕಿನ ಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಿಪಂ ಅನುದಾನದ 37 ಲಕ್ಷ ರು.ಗಳಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಜಿಪಂ ಸದಸ್ಯ ಪಿ.ಬಿ.ಚಂದ್ರಶೇಖರಬಾಬು ಉದ್ಘಾಟಿಸಿದರು.
ಮಾದಾಪುರದಲ್ಲಿ 3.5 ಲಕ್ಷ ರು.ನಲ್ಲಿ ನಿರ್ಮಿತ ಸಮುದಾಯ ಭವನ ಉದ್ಘಾಟಿಸಿದ ಅವರು ಬೋರಗೊಂಡನಹಳ್ಳಿ ರಸ್ತೆಗೆ ಡಾಂಬರೀಕರಣ 3.8 ಲಕ್ಷ ರು. ಕಗ್ಗೆರೆ ಗ್ರಾಮದಲ್ಲಿ ಒವರ್ಹೆಡ್ ಟ್ಯಾಂಕ್ಗೆ 25 ಲಕ್ಷ ರು. ಹಾಗೂ ಗ್ರಾಮದ ಎ.ಕೆ.ಕಾಲೋನಿಯಲ್ಲಿ ಕೊಳವೆಬಾವಿ, ಸಿಸ್ಟನ್ ಅಳವಡಿಕೆಗೆ 5 ಲಕ್ಷ ರು. ವ್ಯಯ ಮಾಡಲಾಗಿದೆ ಎಂದು ತಿಳಿಸಿದರು. ಚೇಳೂರು ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಸಂಪೂರ್ಣವಾಗಿ ಸ್ಪಂದಿಸಿ ಕೊಳವೆಬಾವಿ, ಸಿಸ್ಟನ್ ಅಳವಡಿಕೆ ಮಾಡಲಾಗಿದೆ. ಶಿಕ್ಷಣಕ್ಕೆ ಪೂರಕವಾಗಿ ಶಾಲಾ ಕೊಠಡಿ ನಿರ್ಮಾಣ ಕೆರೆ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ ಎಂದರು.