ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕಾಲದ ಹೆಸರಲ್ಲಿ ಹಣ ಮಾಡಲಾಗುತ್ತಿದೆ: ಶಿವಪ್ರಸಾದ್

Vishwanath S
Updated On : 9 Mar 2014, 1:24 am

ತುಮಕೂರು: ಕಾಲದ ಹೆಸರಲ್ಲಿ ಕೆಲವರು ಹಣ ಮಾಡುತ್ತಿದ್ದಾರೆ. ರಾಹುಕಾಲ, ಗುಳಿಕ ಕಾಲ, ಯಮಗಂಡ ಕಾಲ ಎಂಬ ನಿಯಮ ಪ್ರಕೃತಿಗೆ ಇಲ್ಲದ್ದು ಎಂದು ತುಮಕೂರಿನಲ್ಲಿ ನೆಲೆಸಿರುವ ಖ್ಯಾತ ಚಿತ್ರಕಲಾವಿದ ಕೆ.ಟಿ. ಶಿವಪ್ರಸಾದ್ ಮಾರ್ಮಿಕವಾಗಿ ನುಡಿದರು.
ಅವರು ತುಮಕೂರಿನ ರವೀಂದ್ರ ಕಲಾನಿಕೇತನದಲ್ಲಿ ಏರ್ಪಾಟಾಗಿದ್ದ ಕೋಟೆ ಕುಮಾರ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಹೊರಜಗತ್ತಿಗೆ ಕಾಲವೆಂಬುದಿಲ್ಲ. ಅದನ್ನು ನಾವು ಮಾಡಿಕೊಂಡಿರುವ ವ್ಯವಸ್ಥೆಯಷ್ಟೇ. ಇಲ್ಲಿಯತನಕ ಸೂರ್ಯನ ಸುತ್ತ ಸುತ್ತುತ್ತಿದ್ದ ಮನುಷ್ಯ ಇಂದು ಸೌರಮಂಡಲ ಬಿಟ್ಟು ಮುಂದೆ ಹೋಗುತ್ತಿದ್ದಾನೆ. ಇಂತಹ ವೈಜ್ಞಾನಿಕ ಯುಗದಲ್ಲಿ, ಕಲಾವಿದ ಪ್ರಕೃತಿಯ ನಡೆಯನ್ನರಿತು ತಮ್ಮ ಕೃತಿಗಳಲ್ಲಿ ಪ್ರಸ್ತುತ ಏನಾಗುತ್ತಿದೆ. ಮುಂದೇನಾಗಬೇಕು ಎಂದು ಚಿಂತಿಸಿ, ಚಿತ್ರಿಸಿದರೆ ಕಲಾಕೃತಿಗಳು ಕಾಲಾತೀತವಾಗಿ ನಿಲ್ಲುತ್ತವೆ ಎಂದ ಶಿವಪ್ರಸಾದ್, ಕಾಲವೆಂಬುದು ಸುಳ್ಳು, ಕಲೆಯೊಂದೇ ಸತ್ಯ ಎಂದು ಪ್ರತಿಪಾದಿಸಿದರು.
ಹೊರಜಗತ್ತಿಗೆ ತನ್ನದೇ ಆದ ನೋಟವಿಲ್ಲ. ನೋಟವೇನಿದ್ದರೂ ನೋಡುಗನಲ್ಲಿ ಮಾತ್ರ ಇರುತ್ತದೆ. ಈ ಜಗತ್ತು ಪ್ರತಿಯೊಬ್ಬರಿಗೂ, ಪ್ರತಿಕ್ಷಣಕ್ಕೂ, ಬೇರೆ-ಬೇರೆ ರೀತಿಯಾಗಿಯೇ ಕಾಣುತ್ತದೆ. ಹಾಗೆಯೇ ಚಿತ್ರವೆಂಬುದು ಎರಡು ಆಯಾಮಗಳಿಂದ ಕೂಡಿದ್ದು, ಇದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಸಾಮರ್ಥ್ಯ ಕಲಾವಿದನಿಗೆ ಇರಬೇಕೆಂದರು. ಕೋಟೆ ಕುಮಾರ್ ಅವರ ಕಲೆಯ ಕುರಿತು ಪ್ರಶಂಸಿದರು.
ತುಮಕೂರು ವಿವಿ ಕುಲಪತಿ ಡಾ.ಎ.ಎಚ್. ರಾಜಾಸಾಬ್ ಮಾತನಾಡಿ, ಭಾಷೆ, ಜಾತಿ, ಧರ್ಮದಿಂದ ಹೊರಬಂದವನೇ ಕಲಾವಿದ. ಕೋಟೆ  ಕುಮಾರ್ ಅವರ ಕೃತಿಗಳಲ್ಲಿ ಸೌಂದರ್ಯ ಮತ್ತು ಪ್ರಜ್‌ಞೆಗಳೆರಡು ಮೇಳೈಸಿದ್ದು, ಜನಪದ ಶೈಲಿಯ ಮೂಲ ಆಶಯಗಳನ್ನು ಚನ್ನಾಗಿ ಬಳಸಿಕೊಂಡಿದ್ದಾರೆ ಎಂದು ಪ್ರಶಂಶಿಸಿದರು.
ತುಮಕೂರು ಜಿಲ್ಲೆಯ ಚಿತ್ರಶಿಲ್ಪಗಳಿಂದ ಕೂಡಿದ ಪರಂಪರೆಯನ್ನು ಸಾರುವ ಆಕರ್ಷಕ ಕಮಾನು ರಚಿಸುವ ಆಲೋಚನೆ ವಿವಿಗಿದೆ ಎಂದು ಇದೇ ಸಂದರ್ಭದಲ್ಲಿ ರಾಜಾಸಾಬ್ ತಿಳಿಸಿದರು.
ರವೀಂದ್ರ ಕಲಾನಿಕೇತನದ ಪ್ರಾಚಾರ್ಯ ಬಾಬುರಾವ್ ಕುಂದಗೋಳ್ ಮಾತನಾಡಿ, ಸಾಹಿತ್ಯ, ಚಿತ್ರಕಲೆರಡನ್ನೂ ಮೈಗೂಡಿಸಿಕೊಂಡಿರುವ ಕಲಾವಿದರಲ್ಲಿ ಹಡಪದ್, ಶಿವಪ್ರಸಾದ್ ಮುಖ್ಯರು. ತುಮಕೂರಿನಲ್ಲಿ ನೆಲಿಸಿರುವ ಶಿವಪ್ರಸಾದ್ ಅವರ ಜ್ಞಾನವನ್ನು ಬಳಸಿಕೊಳ್ಳುವಂತೆ ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಭೂಮಿ ಬಳಗದ ಸೋಮಣ್ಣ ಮಾತನಾಡಿ, ಶಿವಪ್ರಸಾದ್ ಎಂಬ ಅಪರೂಪದ, ಶ್ರೇಷ್‌ಠ ವಜ್ರ ತುಮಕೂರಿನ ಕಲಾಲೋಕಕ್ಕೆ ಸೇರ್ಪಡೆಯಾಗಿದೆ. ಇವರ ಜ್ಞಾನ ಸದ್ಬಳಕೆ ಮಾಡಿಕೊಳ್ಳುವ ಕೆಲಸ ಆಗಬೇಕಿದೆ ಎಂದರು.
ಜಿಲ್ಲಾ ಚಿತ್ರಕಲಾ ಸಂಘದ ಕಾರ್ಯದರ್ಶಿ ಬಿ. ಭೂತಯ್ಯ ಉಪಸ್ಥಿತರಿದ್ದರು. ಕಲಾವಿದ ಕೋಟೆ ಕುಮಾರ್ ಸ್ವಾಗತಿಸಿ, ಪ್ರಭು ಹರಸೂರ್ ಕಾರ್ಯಕ್ರಮ ನಿರೂಪಿಸಿ, ಆರ್. ಶಾಂತಮೂರ್ತಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement