ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕೋಟೆ ಕುಮಾರ್ ಅಪರೂಪದ ಕಲಾವಿದ: ಕಂದಗೋಳ್

Vishwanath S
Updated On : 9 Mar 2014, 1:24 am

ತುಮಕೂರು: ಕೋಟೆ ಕುಮಾರ್ ಉತ್ತಮ ಚಿತ್ರಕಾರ, ಕಲಾವಿದ. ಜನಪದ ಕಲೆಯನ್ನು ಚೆನ್ನಾಗಿ ಅರ್ಥೈಸಿ, ಮೈಗೂಡಿಸಿಕೊಂಡು, ದುಡಿಸಿಕೊಂಡ ಅಪರೂಪದ ವ್ಯಕ್ತಿ ಎಂದು ರವೀಂದ್ರ ಕಲಾನಿಕೇತನ ಕಾಲೇಜು ಪ್ರಿನ್ಸಿಪಾಲ್ ಬಾಬುರಾವ್ ಕಂದಗೋಳ್ ಶ್ಲಾಘಿಸಿದರು. ಅವರು ತುಮಕೂರಿನ ರವೀಂದ್ರ ಕಲಾನಿಕೇತನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಏರ್ಪಾಟಾಗಿದ್ದ ಕೋಟೆ ಕುಮಾರ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಕೋಟೆ ಕುಮಾರ್ 1982-83 ನೇ ಸಾಲಿನ ಇದೇ ಕಾಲೇಜಿನ ವಿದ್ಯಾರ್ಥಿ ಎಂಬುದು ಹೆಮ್ಮೆಯ ವಿಷಯ. ಅವರು ಕಲಿತ ಶಾಲೆಯಲ್ಲೇ ಅವರ ಚಿತ್ರಕಲಾ ಪ್ರದರ್ಶನ ಏರ್ಪಡಿಸಿರುವುದು ಮರೆಯಲಾಗದ, ಹೆಮ್ಮೆಯ ಸಂಗತಿ. ಚಿತ್ರಕಾರ ಆರಿಸಿಕೊಂಡ ವಿಷಯದ ಮೇಲೆ ಮಾನಸಿಕ ಬೆಳವಣಿಗೆ ನಿಂತಿರುತ್ತದೆ ಎಂದು ಹೇಳಿದರು.

ವಿಶ್ವ ಸಂವಿಧಾನಡಿಯಲ್ಲಿ ಕಲಾವಿದರು: ಸೋಮಣ್ಣ
ತುಮಕೂರು: ಕಲಾವಿದರಿಗೆ, ಕ್ರೀಡಾಪಟುಗಳಿಗೆ ದೇಶ, ಜಾತಿ, ಮತ, ಧರ್ಮದ ಹಂಗಿಲ್ಲ. ಅವರೆಲ್ಲಾ ನಿಜವಾಗಿಯೂ ವಿಶ್ವ ಸಂವಿಧಾನಡಿಯಲ್ಲಿ ಬರುವ ಮಾನವರು ಎಂದು ಭೂಮಿ ಬಳಗದ ಅಧ್ಯಕ್ಷ ಜಿ.ಎಸ್. ಸೋಮಶೇಖರ್ ಪ್ರತಿಪಾದಿಸಿದರು. ಅವರು ತುಮಕೂರಿನ ರವೀಂದ್ರ ಕಲಾನಿಕೇತನದಲ್ಲಿ ಏರ್ಪಾಟಾಗಿದ್ದ ಕೋಟೆ ಕುಮಾರ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೋಟೆ ಕುಮಾರ್ ಕರ್ನಾಟಕ ಲಲಿತಾಕಲಾ ಅಕಾಡೆಮಿಯ ಸದಸ್ಯರಾಗಿದ್ದವರು. ಚಿತ್ರಕಲೆಯನ್ನು ತಲುಪಿಸುವ ನಿಟ್ಟಿನಲ್ಲಿ ಮನೆಗೊಂದು ಕಲಾಕೃತಿ ಎಂಬ ಯೋಜನೆ ರೂಪಿಸಿ, ಯಶಸ್ವಿಯಾಗಿದ್ದರು. ಕಲಾವಿದನಿಗೆ ಪರಂಪರೆಯ ಅರಿವು, ಜನಸಂಪರ್ಕ ಮುಖ್ಯ. ಕೋಟೆ ಕುಮಾರ್‌ಗೆ ಇವೆರಡೂ ಇವೆ. ಕಲಾವಿದನಿಗೆ ತ್ಯಾಗ ಮನೋಭಾವ ಮುಖ್ಯ. ಕೋಟೆ ಕುಮಾರ್ ಅವರಿಗೆ ಟೀಂ ಇದೆ. ತುಮಕೂರಿನ ಕಲಾವಿದರಾದ ಶಾಂತಮೂರ್ತಿ, ಪ್ರಭು ಹರಸೂರ್, ಅಶೋಕ್, ಪ್ರಾಚಾರ್ಯಾ ಬಾಬುರಾವ್ ಕಂದಗೋಳ್, ಕೋಟೆ ಕುಮಾರ್ ತುಮಕೂರಿನ ಆಸ್ತಿ. ಆಸ್ತಿ ಎಂದರೆ ಕೇವಲ ದೊಡ್ಡ ದೊಡ್ಡ ಕಟ್ಟಡಗಳಲ್ಲ. ಮಾನವೀಯ ಮೌಲ್ಯವುಳ್ಳವರೇ ನಿಜವಾದ ಮನುಕುಲದ ಆಸ್ತಿ ಎಂದು ಸೋಮಣ್ಣ ಮಾರ್ಮಿಕವಾಗಿ ನುಡಿದರು.

ಹುಲಿನಾಯ್ಕರ್‌ಗೆ ಟಿಕೆಟ್ ನೀಡಲು ಮನವಿ
ತುಮಕೂರು: ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಾ. ಎಂ.ಆರ್. ಹುಲಿನಾಯ್ಕರ್‌ಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಬೇಕೆಂದು ಪಕ್ಷದ ಪ್ರಮುಖರು ಒತ್ತಾಯಿಸಿದ್ದಾರೆ. ಹುಲಿನಾಯ್ಕರ್ ಅವರು ಸರಳ ಹಾಗೂ ಸುಸಂಸ್ಕೃತ ವ್ಯಕ್ತಿ. ಇವರ ಅಧ್ಯಕ್ಷತೆಯ ಅವಧಿಯಲ್ಲಿ ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಸಮಾವೇಶ ಯಶಸ್ವಿಯಾಗಿದೆ. ಅಲ್ಲದೇ ಪಕ್ಷದ ಕಾರ್ಯಕರ್ತರಿಗೆ ಮಣೆಹಾಕುತ್ತಾರೆ. ಎಲ್ಲಕ್ಕೂ ಮಿಗಿಲಾಗಿ ಜಿಲ್ಲಾ ಮತ್ತು ರಾಜ್ಯ ನಾಯಕರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ. ಜಾತ್ಯತೀತ ಹಾಗೂ ಪಕ್ಷಾತೀತ ವ್ಯಕ್ತಿಯಾಗಿ ಜಿಲ್ಲೆಯಲ್ಲಿ ಹುಲಿನಾಯ್ಕರ್ ಹೊರ ಹೊಮ್ಮಿದ್ದಾರೆ. ಸರಳ ಸಜ್ಜನಿಕೆಯ ವ್ಯಕ್ತಿತ್ವದ ಇವರಿಗೆ ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ನೀಡಿದರೆ ತುಮಕೂರು ಲೋಕಸಭಾ ಕ್ಷೇತ್ರ ಜೆಡಿಎಸ್ ಪಕ್ಷದ ವಶವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ತಿಳಿಸಿದ್ದಾರೆ.

ಸೊಗಡು ಹೇಳಿಕೆಗೆ ರಫೀಕ್ ಆಕ್ಷೇಪ
ತುಮಕೂರು: ತುಮಕೂರು ಆರೋಗ್ಯ ಇಲಾಖೆಯ ಆಸ್ತಿಯನ್ನು ವಕ್ಫ್ ಬೋರ್ಡ್‌ಗೆ ನೀಡಲು ಶಾಸಕರು ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಮಾಜಿ ಸಚಿವ ಸೊಗಡು ಶಿವಣ್ಣ ಅವರ ಹೇಳಿಕೆಗೆ ಶಾಸಕ ರಫೀಕ್ ಅಹಮದ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಸತ್ಯಕ್ಕೆ ದೂರವಾದುದು. ಈ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ. ಈ ಹಿಂದೆ ಕೆಲ ಸಂದರ್ಭಗಳಲ್ಲಿ ಹಾಗೂ ಚುನಾವಣೆಗಳು ನಡೆಯುವ ಸಮಯದಲ್ಲಿ ಆಧಾರ ರಹಿತ ಹೇಳಿಕೆಗಳನ್ನು ನೀಡುತ್ತಾ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದರು. ಮಾಜಿ ಸಚಿವರು ಯಾವುದೇ ಲಿಖಿತ ಆಧಾರಗಳಲ್ಲಿದೆ ಏಕಾಏಕಿ ಇನ್ನೊಬ್ಬರ ಮೇಲೆ ದೂರುವುದು ಅವರ ಸ್ಥಾನಕ್ಕೆ ಕ್ಷೋಬೆ ತರುವಂತದ್ದಲ್ಲ ಎಂದಿದ್ದಾರೆ. ಅವರು ದೂರಿರುವಂತೆ ಯಾವುದಾದರೂ ದಾಖಲೆ ಇದ್ದರೆ ನೀಡಬೇಕೆಂದು ಶಾಸಕ ರಫೀಕ್ ಅಹಮದ್ ಪ್ರತಿ ಸವಾಲು ಹಾಕಿದ್ದಾರೆ.

ಜೆಡಿಎಸ್ ಪದಗ್ರಹಣ ಇಂದು
ತುಮಕೂರು: ಇಲ್ಲಿನ ಜೆಡಿಎಸ್ ಕಚೇರಿಯಲ್ಲಿ ಇದೇ ತಿಂಗಳ 9 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಯುವ ಜನತಾದಳ ಸಮಾವೇಶ ಹಾಗೂ ಪದಗ್ರಹಣ ಸಮಾರಂಭ ಆಯೋಜಿಸಲಾಗಿದೆ. ರಾಜ್ಯಾಧ್ಯಕ್ಷ ಎ. ಕೃಷ್ಣಪ್ಪ ಗೌರವ ಉಪಸ್ಥಿತಿಯಲ್ಲಿ ನಡೆಯುವ ಕಾರ್ಯಕ್ರಮವನ್ನು ಯುವ ಜನತಾದಳ ಅಧ್ಯಕ್ಷ ಎಸ್. ಮಧು ಬಂಗಾರಪ್ಪ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಸದಸ್ಯ ಡಾ. ಎಂ.ಆರ್. ಹುಲಿನಾಯ್ಕರ್ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ನಾರಾಯಣರಾವ್, ಅಬ್ದುಲ್ ಅಜೀಂ, ಸಿ. ಚನ್ನಿಗಪ್ಪ, ಬಿ. ಸತ್ಯನಾರಾಯಣ,ಎಸ್.ಆರ್. ಶ್ರೀನಿವಾಸ್, ಎಂ.ಟಿ. ಕೃಷ್ಣಪ್ಪ, ಸಿ.ಬಿ. ಸುರೇಶ್‌ಬಾಬು, ಕೆ.ಎಂ. ತಿಮ್ಮರಾಯಪ್ಪ, ಪಿ.ಆರ್. ಸುಧಾಕರಲಾಲ್, ಗೌರಿಶಂಕರ್, ಡೇವಿಯ್ ಸೆಮಿಯೋನ್, ವೀರಭದ್ರಯ್ಯ, ಗಂಗಣ್ಣ, ಸಾಕಮ್ಮ ನಾಗರಾಜ್, ಕೆ.ಬಿ. ಬೋರೇಗೌಡ, ಗೋವಿಂದರಾಜು, ರವೀಶ್ ಜಹಾಂಗೀರ್, ಹನುಮಂತರಾಯಪ್ಪ ನರಸೇಗೌಡ ಮುಂತಾದವರು ಭಾಗವಹಿಸುವರು.

ತಾ. ರೈತ ಸಂಘ, ಹಸಿರು ಸೇನೆ ಪದಾಧಿಕಾರಿಗಳ ಆಯ್ಕೆ
ಕುಣಿಗಲ್: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಸಂಘದ ಪದಾಧಿಕಾರಿಗಳನ್ನು ಆಯ್ಕೆಯನ್ನು ಶನಿವಾರ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು. ತಾಲೂಕು ಅಧ್ಯಕ್ಷ - ಆನಂದ ಪಟೇಲ್ ಹುಲಿಕಟ್ಟೆ, ಪ್ರಧಾನ ಕಾರ್ಯದರ್ಶಿ- ಬಿ.ಎನ್.ಶಿವರುದ್ರಯ್ಯ, ಖಜಾಂಚಿ - ಶಶಿಧರ, ಉಪಾಧ್ಯಕ್ಷರು - ಪ್ರಸಾದ ನಿಡಸಾಲೆ, ಹನುಮಾಪುರ ತಿರುಮಲಯ್ಯ, ಹಂದಲಗೆರೆ ಪ್ರಕಾಶ, ಕಾರ್ಯದರ್ಶಿಗಳಾಗಿ -  ಜಿನ್ನಾಗರ ಜಗದೀಶ, ಉಜ್ಜಿನಿ ಕುಮಾರ, ಹಕ್ಕಿಮರಿಪಾಳ್ಯ ವಾಸು, ಸಂಚಾಲಕರು- ಮಾಗಡಿಪಾಳ್ಯ ಕುಮಾರ, ಗಂಗಾಧರ,ವೆಂಕಟೇಶ ಹೊಸರಂಗಯ್ಯನ ಪಾಳ್ಯ, ಕುಣಿಗಲ್ ಪ್ರಶಾಂತ, ಸಂಘಟನಾ ಕಾರ್ಯದರ್ಶಿ - ಅಣತಹಳ್ಳಿ ಬೆಟ್ಟೇಗೌಡ, ಕೆ.ಟಿ.ಪಾಳ್ಯ ರಮೇಶ, ತೂಬಿನಕೆರೆ ಲಕ್ಷ್ಮಣ, ಬ್ಯಾಡಗೆರೆ ಧನಂಜಯ, ಸೀಗೆಪಾಳ್ಯಗಂಗಾಧರ ಅವರನ್ನು ನೇಮಿಸಿದ್ದಾರೆ.

11 ರಂದು ತಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ
ಶಿರಾ:  ತಾಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕಾಮಗಾರಿ ಮಾಡಿದ ಅನೇಕ ಕೂಲಿ ಕಾರ್ಮಿಕರಿಗೆ ಕೂಲಿ ನೀಡದೆ ಉದ್ದೇಶ ಪೂರ್ವಕವಾಗಿ ಕೂಲಿ ತಡೆಹಿಡಿಯುವ ಪ್ರಯತ್ನ ನಡೆದಿದ್ದು, ಈ ಕೂಡಲೇ ಕೂಲಿ ನೀಡುವಂತೆ ಒತ್ತಾಯಿಸಿ ಮಾ11 ಮಂಗಳವಾರದಿಂದ ಇಲ್ಲಿನ ತಾಪಂ ಕಚೇರಿಗೆ ಬೀಗ ಜಡಿದು ಪಕ್ಷಾತೀತವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ತಾಲೂಕು ಜಿಪಂ ಸದಸ್ಯರ ಪರವಾಗಿ ಜಿಪಂ ಸದಸ್ಯ ಸಿ.ಆರ್.ಉಮೇಶ್ ಹಾಗೂ ಕೃಷ್ಣಮೂರ್ತಿ ತಿಳಿಸಿದರು. ಅವರು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ ಕೆಲವು ಕಡೆ ಕಳಪೆ ಕಾಮಗಾರಿಗಳು ನಡೆದಿವೆ ಎನ್ನಲಾಗಿದೆ. ಆದರೆ ಈ ನಿಟ್ಟಿನಲ್ಲಿ ವಿವಿಧ ತನಿಖಾ ತಂಡಗಳೂ ಕಾಮಗಾರಿಗಳ ವೀಕ್ಷಣೆ ಮಾಡಿದ್ದು ಕಳಪೆ ಕಾಮಗಾರಿಗಳಿಗೆ ಬೇಕಾದರೆ ಹಣ ನೀಡುವುದನ್ನು ತಡೆ ಹಿಡಿಯಲಿ, ಆದರೆ ಪ್ರಾಮಾಣಿಕವಾಗಿ ಕೈಗೊಂಡ ಕಾಮಗಾರಿಗಳಿಗೂ ಹಣ ನೀಡದೆ ಜಿಪಂ ಅಧಿಕಾರಿಗಳು ರಾಜಕಾರಣಿಗಳ ಕೈಗೊಂಬೆಯಾಗಿ ವರ್ತಿಸುತ್ತಿರುವುದು ನಿಜಕ್ಕೂ ಖಂಡನಾರ್ಹ ಎಂದು ಹೇಳಿದರು. ಸಚಿವ ಜಯಚಂದ್ರ ಶಿರಾ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕಾಳಜಿ ಹೊಂದಿಲ್ಲ ಎಂದು ಅಪಾದಿಸಿದರು.

ಕುಣಿಗಲ್ ತಾ.ನಲ್ಲಿ ಬಿರುಗಾಳಿ ಸಮೇತ ಭಾರಿ ಮಳೆ
ಕುಣಿಗಲ್: ಶುಕ್ರವಾರ ರಾತ್ರಿ ಭಾರೀ ಬಿರುಗಾಳಿ ಸಮೇತ ಸುರಿದ ಅಕಾಲಿಕ ಮಳೆಗೆ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಜನತೆ ತತ್ತರಿಸಿ ಹೋಗಿದ್ದಾರೆ. ವಿದ್ಯುತ್ ಕಂಬಗಳ ಮೇಲೆ ಭಾರಿ ಮರಗಳು ಬಿದ್ದ ಪರಿಣಾಮ ಪಟ್ಟಣ ಕತ್ತಲಲ್ಲಿ ಕಳೆಯುವಂತಾಯಿತು. ಶುಕ್ರವಾರ ಸಂಜೆ ಎಂಟು ಗಂಟೆ ವೇಳೆಗೆ ಬಿರುಗಾಳಿಯ ರುದ್ರ ನರ್ತನದೊಂದಿಗೆ ಗುಡುಗು, ಸಿಡಿಲಿನ ಆರ್ಭಟದಿಂದ ಕೂಡಿದ ತುಂತುರು ಮಳೆ ಪ್ರಾರಂಭವಾಗಿ ಕೆಲ ನಿಮಿಷದ ನಂತರ ಭಾರಿ ಮಳೆ  ಪ್ರಾರಂಭವಾಯಿತು.ಸುಮಾರು ಎರಡುವರೆ ಗಂಟೆ ಕಾಲ ವರುಣನ ನರ್ತನ ಮುಂದುವರಿಯಿತು. ಕಳೆದ ಹಲವು ದಿನಗಳಿಂದ ಬಿಸಿಲ ಬೇಗೆಯಿಂದ ಪರದಾಡುತ್ತಿದ್ದ ಜನತೆಗೆ ತಂಪಿನ ಅನುಭವದ ಜೊತೆಯಲ್ಲೆ ಭಾರಿ ಬಿರುಗಾಳಿ ಮಳೆಯು  ಭೀತಿ ಉಂಟು ಮಾಡಿತು.  ಪುರಸಭೆ ಪಾರ್ಕ್‌ನಲ್ಲಿ ಮೂರು ಬೃಹತ್ ಮರಗಳು ವಿದ್ಯುತ್ ಕಂಬಗಳು ಪರಿವರ್ತಕದ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಯಿತು.

ಹುಳಿಯಾರಿನಲ್ಲಿ ಜಾರಿಯಾಗದ ನೀತಿ ಸಂಹಿತೆ
ಹುಳಿಯಾರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದೇಶಾದ್ಯಂತ ನೀತಿ ಸಂಹಿತೆ ಜಾರಿಯಾಗಿದ್ದರೂ  ಹುಳಿಯಾರು ಪಟ್ಟಣದ ಪೊಲೀಸ್ ಠಾಣೆ ಮುಂಭಾಗದಲ್ಲಿ ಹಾಕಿರುವ ರಾಜ್ಯ ಸರ್ಕಾರದ ಜಾಹಿರಾತು ಮಾತ್ರ ಹಾಗೆಯೇ ರಾರಾಜಿಸುತ್ತಿವೆ. ಕಳೆದ ಬುಧವಾರ ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿಯನ್ನು   ಬಿಡುಗಡೆ ಮಾಡಿದ್ದು, ಅಂದಿನಿಂದಲೇ ಚುನಾವಣಾ ನೀತಿ ಸಂಹಿತಿ ಜಾರಿಯಾಗಲಿದೆ ಎಂಬ ಸ್ಪಷ್ಟ ಆದೇಶ ಹೊರಬಿದ್ದಿದೆ. ಇದಕ್ಕೆ  ಸಂಬಂಧಪಟ್ಟಂತೆ ಈಗಾಗಲೇ ಎಲ್ಲಾ ಮಾಧ್ಯಮಗಳಲ್ಲಿ ವಿಷಯ ಭಿತ್ತರವಾಗಿದೆ. ಅಲ್ಲದೇ ಯಾವುದು ನೀತಿ ಸಂಹಿತೆಗೆ ಒಳಪಡುತ್ತವೆ, ಯಾವುವು ಈ ವ್ಯಾಪ್ತಿಗೆ ಬರುವುದಿಲ್ಲ ಎಂಬುದು ಭಿತ್ತರಿಸಿದ್ದರೂ   ಪಟ್ಟಣದಲ್ಲಿ ಮಾತ್ರ ಈ ಬಗ್ಗೆ ತಿಳಿದಿಲ್ಲವೇನೋ ಅಥವಾ  ನೀತಿ ಸಂಹಿತೆ ಜಾರಿಯಾಗಿರುವುದು ಇಲ್ಲಿನ ಪಂಚಾಯ್ತಿ ಅಧಿಕಾರಿ ವರ್ಗದವರಿಗೆ  ಗಮನಕ್ಕೆ ಬಂದಿಲ್ಲ ಎಂಬುದಕ್ಕೆ ನಿದರ್ಶನವಾಗಿ ಮುಖ್ಯಮಂತ್ರಿ, ಜಿಲ್ಲಾ ಮಂತ್ರಿಗಳ ಭಾವಚಿತ್ರವಿರುವ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಒಳಗೊಂಡ ಪ್ರಚಾರದ ಜಾಹಿರಾತು ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಈ ಬಗ್ಗೆ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತೆಂಗಿನಲ್ಲಿ ಕೆಂಪು ಮೂತಿ ಹುಳು ಕುರಿತು ಪ್ರಾತ್ಯಕ್ಷಿಕೆ
ತಿಪಟೂರು: ತಾಲೂಕಿನ ಬಿದರೆಗುಡಿ ಕಾವಲ್ ಕೃಷಿ ವಿಜ್ಞಾನ ಕೇಂದ್ರ ಹಾಗೂ ತುಮಕೂರು ಕೃಷಿ ಇಲಾಖೆ ಆತ್ಮಾ ಯೋಜನೆಯಡಿಯಲ್ಲಿ ತೆಂಗಿನಲ್ಲಿ ಕೆಂಪು ಮೂತಿ ಹುಳು ಹಾಗೂ ರೈನೋಸರಾಸ್ ದುಂಬಿ ಸಮಗ್ರ ನಿರ್ವಹಣಾ ಕ್ರಮಗಳ ಕುರಿತು ಗುಬ್ಬಿ ತಾಲೂಕಿನ ತಿಮ್ಮಣ್ಣನಪಾಳ್ಯ ಗ್ರಾಮದಲ್ಲಿ ತರಬೇತಿ ಮತ್ತು ಪ್ರಾತ್ಯಕ್ಷಿಕೆ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕೇಂದ್ರದ ಸದಸ್ಯ ಸಂರಕ್ಷಣೆ ವಿಜ್ಞಾನಿಗಳಾದ ಡಾ.ಕೆ.ಆರ್.ಶ್ರೀನಿವಾಸ್ ತೆಂಗಿನಲ್ಲಿ ಹೆಚ್ಚಾಗಿ ಬಾಧಿಸುವ ಕೆಂಪು ಮೂತಿ ಹುಳು ಹಾಗೂ ರೈನೋಸರಾಸ್ ದುಂಬಿಯಿಂದ ಆಗುವ ನಷ್ಟ ಹಾಗೂ ನಿರ್ವಹಣ ಕ್ರಮಗಳ ಕುರಿತು ವಿವರಿಸಿದರು. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಶಂಕರ್, ಡಾ.ಬಿ.ಮಮತಾ, ಡಾ.ರೂಪ ಬಿ.ಪಾಟೀಲ್ ಸೇರಿ ಸುಮಾರು 100ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ತಿಪಟೂರು: ತಾಲೂಕಿನ ಬಿದರೆಗುಡಿ ಕಾವಲ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಶನಿವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಕೇಂದ್ರದ ಗೃಹ ವಿಜ್ಞಾನ ವಿಷಯ ತಜ್ಞೆ ಡಾ. ರೂಪ ಬಿ.ಪಾಟೀಲ್ ಮಹಿಳಾ ದಿನಾಚರಣೆಯ ಮುಖ್ಯ ಉದ್ದೇಶ ಹಾಗೂ ಮಹಿಳೆಯರ ಸಬಲೀಕರಣದ ಕುರಿತು ವಿವರಿಸಿದರು. ಕೇಂದ್ರದ ಡಾ.ಎಂ.ಎಚ್.ಶಂಕರ್ ಈಚಿನ ದಿನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದು, ಸ್ವ-ಉದ್ಯೋಗದತ್ತ ದಾಪುಗಾಲು ಇಡುತ್ತಿದ್ದಾರೆ ಎಂದರು. ಡಾ.ಮಮತಾ ಮಹಿಳೆಯರು ಸಂಘಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಟ್ಟಿಕೊಳ್ಳುವ ಮೂಲಕ ಆರ್ಥಿಕ ಹಾಗೂ ಸಾಮಾಜಿಕವಾಗಿ ಸಬಲರಾಗಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಸುಮಾರು 50 ರೈತ ಮಹಿಳೆಯರು ಭಾಗವಹಿಸಿದ್ದರು.

'ದೊಡ್ಡೇಗೌಡರ ನಿಧನದಿಂದ ದಸಂಸ ಸಂಘಟನೆಗೆ ನಷ್ಟ'
ಗುಬ್ಬಿ: ದಲಿತ ಸಂಘಟನೆಯ ಜಿಲ್ಲಾ ಸಂಚಾಲಕರಾಗಿ ಅವಿರತ ಹೋರಾಟ ನಡೆಸಿದ ಎಂ.ಡಿ.ದೊಡ್ಡೇಗೌಡರ ನಿಧನದಿಂದ ಸಂಘಟನೆಗೆ ತೀವ್ರ ನಷ್ಟವಾಗಿದೆ ಎಂದು ದಸಂಸ ತಾ. ಸಂಚಾಲಕ ನಿಟ್ಟೂರು ರಂಗಸ್ವಾಮಿ ತಿಳಿಸಿದರು. ಪಟ್ಟಣದಲ್ಲಿ ತಾಲೂಕು ದಸಂಸ ಏರ್ಪಡಿಸಿದ್ದ  ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು ಜಿಲ್ಲೆಯಾದ್ಯಂತ ದಲಿತರ ಅಭಿವೃದ್ಧಿಗಾಗಿ ಹೋರಾಟ ಮಾಡುವ ಮೂಲಕ ಕ್ರಿಯಾಶೀಲರಾಗಿದ್ದ ದೊಡ್ಡೇಗೌಡರ ಸಾಧನೆ ಸಂಘಟನೆಗೆ ಉತ್ತಮ ಮಾರ್ಗದರ್ಶಕವಾಗಿದೆ ಎಂದರು. ದಲಿತರ ಕುಂದುಕೊರತೆಗಳನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ಸಂಘಟನೆಯ ಮೂಲಕ ದಲಿತರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂದು ತಿಳಿಸಿ ಅವರ ಆತ್ಮಕ್ಕೆ ಭಗವಂತನು ಶಾಂತಿ ನೀಡಲಿ ಎಂದರು. ಸಮಿತಿ ಪದಾಧಿಕಾರಿಗಳಾದ ಮಾರನಹಳ್ಳಿ ಶಿವಯ್ಯ, ಜಿ.ಸಿ.ನಾಗರಾಜು, ಜಿ.ಸಿ.ದುರ್ಗೇಶ್, ಎನ್.ಎ.ನಾಗರಾಜು, ಕೆ.ರಾಜಪ್ಪ, ಬೆಟ್ಟಸ್ವಾಮಿ, ನಾಗಭೂಷಣ್, ಸಿದ್ದಲಿಂಗಪ್ಪ, ಮೂರ್ತಿ, ಕಮಲಮ್ಮ,ಸ್ವಾಮಿ, ಶಿವಯ್ಯ ಇತರರು ಭಾಗವಹಿಸಿದ್ದರು.

ನೀತಿ ಸಂಹಿತೆ ಪಾಲಿಸದ ಗ್ರಾಮಪಂಚಾಯ್ತಿ
ಚಿಕ್ಕನಾಯಕನಹಳ್ಳಿ: ಲೋಕಸಭೆ ಚುನಾವಣೆ ಪ್ರಯುಕ್ತ ನೀತಿಸಂಹಿತೆ ಜಾರಿಯಾಗಿದ್ದರೂ ತಾಲೂಕಿನ ಚಿಕ್ಕಬಿದರೆ ಗ್ರಾಮಪಂಚಾಯ್ತಿಗೆ ಮಾತ್ರ ಇದು ಅನ್ವಯಿಸಿದಂತೆ ಕಂಡುಬರುತ್ತಿಲ್ಲ. ತಾಲೂಕಿನ ಚಿಕ್ಕಬಿದರೆ ಗ್ರಾಮಪಂಚಾಯ್ತಿ ಮುಂಭಾಗದಲ್ಲಿರುವ ಪ್ರಸ್ತುತ ಸರ್ಕಾರದ ಅನ್ನಭಾಗ್ಯ ಯೋಜನೆಯ ಜಾಹಿರಾತು ಫಲಕವನ್ನು ನೀತಿಸಂಹಿತೆ ಜಾರಿಯಾಗಿ ಮೂರು ದಿನಗಳಾದರೂ ತೆರವುಗೊಳಿಸದೆ ನೀತಿಸಂಹಿತೆ ಉಲ್ಲಂಘಿಸಿದ್ದಾರೆ. ಇದು ಗ್ರಾಮಪಂಚಾಯ್ತಿಯ ನಿರ್ಲಕ್ಷವಾಗಿದೆ. ಚುನಾವಣಾ ಆಯೋಗಕ್ಕೆ ತನ್ನದೇ ಆದ ಮಹತ್ವವಿದೆ.ನಿಷ್ಪಕ್ಷವಾದ ಚುನಾವಣೆ ನಡೆಸುವ ನಿಟ್ಟಿನಲ್ಲಿ ಆಯೋಗ ಕೆಲವೊಂದು ಐತಿಹಾಸಿಕ ನಿರ್ಧಾರ ಮತ್ತು ಮಾರ್ಪಾಡುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದೆ.ಜಾಹಿರಾತುಗಳನ್ನು ಸರ್ಕಾರದ ವೆಚ್ಚದಲ್ಲಿ ಹಾಕಿಕೊಳ್ಳುವುದನ್ನು ಆಯೋಗ ನಿಷೇಧಿಸಿದೆ.ಆದರೆ ಸ್ಥಳೀಯ ಆಡಳಿತ Ú ಜಾಹಿರಾತು ಫಲಕ ತೆರವುಗೊಳಿಸಿಲ್ಲ.

ಇಂದು ಎನ್‌ಎಸ್‌ಎಸ್ ಶಿಬಿರದಲ್ಲಿ ಉಚಿತ ಪಶು ಚಿಕಿತ್ಸಾ ಶಿಬಿರ
ಹುಳಿಯಾರು:  ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ವತಿಯಿಂದ ಹೋಬಳಿಯ ಯಗಚಿಹಳ್ಳಿಯಲ್ಲಿ ನಡೆಯುತ್ತಿರುವ ಸ್ವಯಂಸೇವಾ ಶಿಬಿರದಲ್ಲಿ ಭಾನುವಾರ ಉಚಿತ ಪಶು ಚಿಕಿತ್ಸಾ ಶಿಬಿರ  ನಡೆಯಲಿದೆ. ನಂದಿಹಳ್ಳಿ ಶಿವಣ್ಣ ಶಿಬಿರ ಉದ್ಘಾಟಿಸುವರು. ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಜೆ.ಸಿ.ಮಂಜುನಾಥ್, ಪಶು ವೈದ್ಯಾಧಿಕಾರಿ ಡಾ.ನೇತ್ರಾವತಿ, ಪರೀಕ್ಷಕ ಜಿ.ವೆಂಕಟಪ್ಪ,ಹಾಲು ಉ.ಸ.ಸ ಘ.ದ ಕಾರ್ಯದರ್ಶಿ ಶ್ರೀನಿವಾಸ,ನಾಗಲಿಂಗಪ್ಪ ಆಗಮಿಸಲಿದ್ದಾರೆ.  ಸಂಜೆ ಶಿಬಿರಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗಾಗಿ ವಿವಿಧ ಆಟೋಟಗಳನ್ನು ಅಯೋಜಿಸಲಾಗಿದೆ. ಸಾವಯುವ ಕೃಷಿಕ ಡಾ. ಖಾದರ್ ನಿತ್ಯ ಜೀವನದಲ್ಲಿ ನಾವೇನು ತಿನ್ನಬೇಕು ವಿಷಯ ಕುರಿತಂತೆ ಸಂವಾದ ನಡೆಸಲಿದ್ದಾರೆ. ಚಂದ್ರಶೇಖರ್‌ಬಾಳೆ, ಚಿ.ನಾ.ಹಳ್ಳಿ ವಿಜ್ಞಾನ ಕೇಂದ್ರದ ಅಧ್ಯಕ್ಷರಾದ ಇಂದಿರಮ್ಮ,ಪ್ರಾಧ್ಯಾಪಕ ಲೋಕೇಶನಾಯ್ಕ ಮತ್ತಿತರರು ಭಾಗವಹಿಸಲಿದ್ದಾರೆ.

ಮತದಾರರ ಹೆಸರು ಸೇರ್ಪಡೆ ಕೈಬಿಡುವ ಪ್ರಕ್ರಿಯೆಗೆ ಚಾಲನೆ
ಕೊರಟಗೆರೆ: ಲೋಕಸಭಾ ಚುನಾವಣೆ ಸಂಬಂಧಪಟ್ಟಂತೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಮಾ.9 ರಿಂದ ಮಾ.16 ವರೆಗೂ ಅವಕಾಶವಿದ್ದು ಎಲ್ಲಾ ಮತಗಟ್ಟೆಗಳಲ್ಲಿ ವಿಶೇಷ ಶಿಬಿರಗಳನ್ನು ಏರ್ಪಡಿಸಿ ಮತದಾರರ ಹಸರು ಸೇರ್ಪಡೆ ಅಥವಾ ಕೈಬಿಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಸಹಾಯಕ ಚುನಾವಣ ನೊಂದಣಾಧಿಕಾರಿ ಹಾಗೂ ತಹಶೀಲ್ದಾರ್ ರಾಮಚಂದ್ರಪ್ಪ ತಿಳಿಸಿದ್ದಾರೆ. ಲೋಕಸಭಾ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಸೇರಿರುವ ಕೊರಟಗೆರೆ ವಿಧಾನ ಸಭಾ ಕ್ಷೇತ್ರಕ್ಕೆ ಸಹಾಯಕ ಚುನಾವಣಾಧಿಕಾರಿಗಳಾಗಿ ಜಿಲ್ಲಾ ಸಹಕಾರ ಅಭಿವೃದ್ಧಿ ಉಪ ನೊಂದಣಾಧಿಕಾರಿ ಜಿ.ಪ್ರಕಾಶ್ ನೇಮಕವಾಗಿದ್ದು ಅವರ ನೇತೃತ್ವದಲ್ಲಿ ಮತದಾರರ ಪಟ್ಟಯಲ್ಲಿನ ಲೋಪದೋಷ ಸರಿಪಡಿಸಲು ಅನುಕೂಲವಾಗುವಂತೆ ಹಾಗೂ ನೂತನವಾಗಿ ಪತದರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಈ ಶಿಬಿರ ನಡೆಯುವುದು. ತಾಲೂಕಿನಲ್ಲಿ ನೇಮಕವಾಗಿರುವ ಎಲ್ಲಾ ಬಿ.ಎಲ್.ಓ ಗಳು ಸಂಬಂಧಿಸಿದ ಮತಗಟ್ಟೆಗಳಲ್ಲಿ ಹಾಜರಿದ್ದು ಸ್ಥಳಕ್ಕೆ ಆಗಮಿಸುವ ಸಾರ್ವಜನಿಕರಿಗೆ ಮಾಹಿತಿ ನೀಡಿ ಅರ್ಜಿಗಳನ್ನು ಸ್ವೀಕರಿಸುವಂತೆ ತಿಳಿಸಿದರು.

ಇಂದು ಮತದಾರರ ಪಟ್ಟಿ ಸೇರ್ಪಡೆ ಕಾರ್ಯಾಚರಣೆ
ಶಿರಾ: ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಅನುಕೂಲಕ್ಕಾಗಿ ಮಾ. 9 ಭಾನುವಾರ ಶಿರಾ ತಾಲೂಕಿನ ವಿಧಾನಸಭಾ ಕ್ಷೇತ್ರದ ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ ಬೆಳಿಗ್ಗೆ 9-30 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾರರ ಪಟ್ಟಿ ಸೇರ್ಪಡೆ, ಬಿಡತಕ್ಕವುಗಳು, ತಿದ್ದುಪಡಿ ಅರ್ಜಿಗಳನ್ನು ಸಂಬಂಧಪಟ್ಟ ಬಿ.ಎಲ್.ಓ. ಗಳು ವಿಶೇಷ ಕಾರ್ಯಾಚರಣೆ ಮೂಲಕ ಸ್ವೀಕರಿಸಲಿದ್ದು, ಸಾರ್ವಜನಿಕರು ಈ ಅವಕಾಶವನ್ನು ಉಪಯೋಗಿಸಿಕೊಳ್ಳುವಂತೆ ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ (ಮೀಸಲು ಪ.ಜಾತಿ) ಸಂಬಂಧಿಸಿದ ನಂ. 136 ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಯಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಸುಜಾತ.ಎನ್ ಅವರನ್ನು ನೇಮಿಸಲಾಗಿದೆ. ಚುನಾವಣೆಗೆ ಸಂಬಂಧಿಸಿದಂತೆ ಮಾಹಿತಿಗೆ ಮೊ 9880096222 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement