ಪೊಲೀಸರ ಹೆಸರಿನಲ್ಲಿ ಹಣ ವಸೂಲಿಗಿಳಿದ ಪತ್ರಕರ್ತ
ತುರುವೇಕೆರೆ: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ತಾನು ಪೊಲೀಸರಿಂದ ಬಿಡುಗಡೆ ಮಾಡಿಸಿರುವುದಾಗಿಯೂ ಅದಕ್ಕೆ ಪೊಲೀಸರಿಗೆ ಹಣ ನೀಡಬೇಕಾಗಿರುವುದರಿಂದ ಹಣಕ್ಕೆ ಪೀಡಿಸಿದ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ದಿನಪತ್ರಿಕೆಯ ವರದಿಗಾರನೊಬ್ಬನ ವಿರುಧ್ಧ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.
ವಿವರ: ಸ್ಥಳೀಯ ಶ್ರೀ ಸತ್ಯಗಣಪತಿ ಜಾತ್ರಾ ಮಹೋತ್ಸವ ಸಲುವಾಗಿ ಕೆ.ಸಿದ್ದಾರ್ಥ್ ಎಂಬುವವರು ಮೊಬೈಲ್ ಜಾತ್ರೆ ಎಂದು ಎರಡು ದಿನಗಳ ಮಟ್ಟಿಗೆ ಮಳಿಗೆಯೊಂದನ್ನು ತೆರೆದಿದ್ದರು. ಮೊಬೈಲ್ ಜಾತ್ರೆಯಲ್ಲಿ ಲಕ್ಕಿ ಡಿಪ್ ಏರ್ಪಡಿಸಿಲಾಗಿತ್ತು.
ಇದನ್ನು ಗಮನಿಸಿದ ಸ್ಥಳೀಯ ದಿನಪತ್ರಿಕೆ ವರದಿಗಾರ ಎಲ್.ಎನ್.ಪ್ರಸಾದ್ ಕಾನೂನು ಬಾಹಿರವಾಗಿ ಮಳಿಗೆಯನ್ನು ತೆರೆದಿರುವುದರಿಂದ ಕೂಡಲೇ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರವಾಣಿ ಮೂಲಕ ಆಗ್ರಹಿಸಿದ್ದಾರೆ.
ಪೊಲೀಸರಿಂದ ಬಿಡಿಸುವ ನಾಟಕ: ಕಾರ್ಯಪ್ರವೃತ್ತರಾದ ಪೊಲೀಸರು ಮೊಬೈಲ್ ಜಾತ್ರೆ ತೆರೆದಿದ್ದ ಸಿದ್ದಾರ್ಥ್‌ನನ್ನು ವಶಕ್ಕೆ ತೆಗೆದುಕೊಂಡಿದ್ದರು. ತಾನೇ ಪೋಲಿಸರಿಗೆ ಮಾಹಿತಿ ನೀಡಿ ಆತನನ್ನು ವಶಕ್ಕೆ ತೆಗೆದುಕೊಳ್ಳಲು ಕಾರಣಕರ್ತನಾಗಿದ್ದ ಪ್ರಸಾದ್, ಸಿದ್ದಾರ್ಥ್‌ನನ್ನು ಪೊಲೀಸರಿಂದ ಬಿಡಿಸುವ ನಾಟಕವನ್ನೂ ಆಡಿದ್ದ. ತನಗೆ ಅರಿವಿಲ್ಲದೇ ಮೊಬೈಲ್ ಅಂಗಡಿ ತೆರೆದಿದ್ದುದಾಗಿಯೂ ಕೂಡಲೇ ಮಳಿಗೆ ಮುಚ್ಚುವುದಾಗಿಯೂ ಮುಚ್ಚಳಿಕೆ ನೀಡಿದ ಸಿದ್ದಾರ್ಥ್ ಪೊಲೀಸರಿಂದ ಬಿಡುಗಡೆಗೊಂಡಿದ್ದ.
ನಂತರದ ದಿನಗಳಲ್ಲಿ ಪತ್ರಕರ್ತ ಎಲ್.ಎನ್.ಪ್ರಸಾದ್, ಸಿದ್ದಾರ್ಥ್‌ನನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಪೊಲೀಸರಿಂದ ಬಿಡಿಸಿಕೊಂಡು ಬಂದಿರುವ ಸಂಬಂಧ ಪೊಲೀಸರಿಗೆ ಲಂಚ ನೀಡಬೇಕು ಎಂದು ಆಗ್ರಹಿಸಿ ಸುಮಾರು 15 ಬಾರಿ ಕರೆ ಮಾಡಿದ್ದಾನೆ.
ಇವೆಲ್ಲವನ್ನೂ ದೂರವಾಣಿಯಲ್ಲಿ ಧ್ವನಿ ಮುದ್ರಿಸಿಕೊಂಡಿದ್ದ ಸಿದ್ದಾರ್ಥ್ ಮುಂದೇನು ಮಾಡಬೇಕು ಎಂದು ಕೇಳಿಕೊಂಡಿದ್ದಾರೆ. ಮುಖತಹ ಮಾತನಾಡಿದರೆ ಸಮಸ್ಯೆ ಬಗೆಹರಿಸಬಹುದು. ಪೊಲೀಸರು ಹಣ ನಿರೀಕ್ಷೆ ಮಾಡುತ್ತಿದ್ದಾರೆ ಎಂದು ಹೇಳಿ ಖುದ್ದಾಗಿ ಭೇಟಿಗೆ ಬಯಸಿದ್ದಾರೆ.
ಸಕಲ ಸಿದ್ದತೆಯೊಂದಿಗೆ ಬಂದಿದ್ದ ಸಿದ್ದಾರ್ಥ್ ತಾನು ಬಡವನೆಂದೂ, ಜಾತ್ರಾ ಮಹೋತ್ಸವಕ್ಕೆ ರಂಗು ತರುವ ಉದ್ದೇಶದಿಂದ ಮೊಬೈಲ್ ಜಾತ್ರೆ ಮಾಡಿದ್ದೆಂದೂ ತಮಗೆ ಪೊಲೀಸರಿಗೆ ಹಣ ಕೊಡುವಷ್ಟು ಚೈತನ್ಯ ಇಲ್ಲವೆಂದೂ ಗೋಗರೆದಿದ್ದಾರೆ.
ರು. 10 ಸಾವಿರವಾದರೂ ಕೊಡು: ಆದರೆ ಪ್ರಸಾದ್ ಪೊಲೀಸರಿಗೆ ಹಣ ನೀಡಲೇಬೇಕು ಎಂದು ಒತ್ತಡ ಹೇರಿದ್ದಾರೆ. ಅಂತಿಮವಾಗಿ ಎರಡು ಸಾವಿರ ರು. ನೀಡುವ ಮಾತನ್ನೂ ಸಿದ್ದಾರ್ಥ್ ಪತ್ರಕರ್ತ ಎಲ್.ಎನ್.ಪ್ರಸಾದ್‌ಗೆ ಹೇಳಿದ್ದಾರೆ. ಕುಪಿತಗೊಂಡ ಪ್ರಸಾದ್ ತಾವು ಪೊಲೀಸರಿಂದ ಬಿಡಿಸಿದ್ದೇ ತಪ್ಪು ಎಂದು ಛೇಡಿಸಿ ಮಾತನಾಡಿ ಅಂತಿಮವಾಗಿ 10 ಸಾವಿರ ರು.ಗಳನ್ನಾದರೂ ಪೊಲೀಸರಿಗೆ ನೀಡಬೇಕು ಎಂದು ಆಗ್ರಹಿಸಿದ್ದಾನೆ.
ಸಿದ್ದಾರ್ಥ್ ತಮ್ಮಿಬ್ಬರ ನಡುವಿನ ಮಾತುಕತೆಯನ್ನು ಬೇರೊಂದು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡುತ್ತಿದ್ದರು. ಅಂಗಡಿ ಮಳಿಗೆ ತೆರೆಯಲು ಸಹಕರಿಸಿದ್ದ ಇತರೆ ಮೊಬೈಲ್ ಅಂಗಡಿ ಮಾಲೀಕರನ್ನೂ ಕೇಳಿ ಹಣ ನೀಡುವ ಮಾತುಗಳನ್ನು ಆಡಿ ಸಿದ್ದಾರ್ಥ್ ಅಲ್ಲಿಂದ ಕಾಲುಕಿತ್ತಿದ್ದರು.
ಪತ್ರಕರ್ತ ಪ್ರಸಾದ್ ತನ್ನೊಂದಿಗೆ ಸುಮಾರು 15 ಸಾರಿ ದೂರವಾಣಿಯಲ್ಲಿ ಮಾತನಾಡಿದ್ದ ಧ್ವನಿ ಮುದ್ರಣ ಹಾಗೂ ಮುಖತಹ ಸುಮಾರು 13 ನಿಮಿಷ ಮಾತನಾಡಿದ್ದ ಸಂಗತಿಯನ್ನು ರೆಕಾರ್ಡ್ ಸಹಿತ ಸಿದ್ದಾರ್ಥ್ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗೆ ದೂರು ಸಲ್ಲಿಸಿ ತಮಗೆ ಬ್ಲಾಕ್ ಮೇಲ್ ಮಾಡಿರುವ ಪತ್ರಕರ್ತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು. ಎಸ್ಪಿ ರಮಣಗುಪ್ತ ಸರ್ಕಲ್ ಇನ್ಸ್ ಪೆಕ್ಟರ್‌ಗೆ ರವಾನಿಸಿ ಸೂಕ್ತ ತನಿಖೆ ಮಾಡಿ ಕ್ರಮ ಕೈಗೊಳ್ಳುವಂತೆಯೂ, ವರದಿ ನೀಡಬೇಕೆಂದೂ ಸೂಚಿಸಿದ್ದರು.
ತನಿಖೆ ನಡೆಸಿದ ಸಿಪಿಐ ಕೃಷ್ಣಕುಮಾರ್ ಸಿದ್ದಾರ್ಥ್ ಹಾಗೂ ಪತ್ರಕರ್ತ ಎಲ್.ಎನ್.ಪ್ರಸಾದ್ ನಡುವೆ ನಡೆದಿದ್ದ ಮಾತುಕತೆಯ ಧ್ವನಿ ಮುದ್ರಣ ಆಲಿಸಿದ ನಂತರ ಮೇಲ್ನೋಟಕ್ಕೆ ಸಿದ್ದಾರ್ಥ್ ನೀಡಿರುವ ದೂರಿನಲ್ಲಿ ಸತ್ಯಾಂಶವಿದ್ದು ಪ್ರಕರಣ ದಾಖಲಿಸುವಂತೆ ಎಸ್‌ಐ ರಾಚಯ್ಯ ನವರಿಗೆ ಸೂಚಿಸಿದ್ದರು. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಎಸ್‌ಐ ರಾಚಯ್ಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪತ್ರಿಕಾಗೋಷ್ಠಿ ನಡೆಸಿದ ಮೊಬೈಲ್ ಅಂಗಡಿ ಮಾಲೀಕ ಸಿದ್ದಾರ್ಥ್ ಪತ್ರಕರ್ತ ಎಲ್.ಪ್ರಸಾದ್ ರವರ ವಿರುದ್ಧ ಪೊಲೀಸರಲ್ಲಿ ಪ್ರಕರಣ ದಾಖಲು ಮಾಡಿಕೊಂಡಿರುವ ಎಫ್‌ಐಆರ್ ಪ್ರತಿ ವಿತರಿಸಿ, ಪತ್ರಿಕಾ ವೃತ್ತಿಗೆ ಚ್ಯುತಿ ಉಂಟು ಮಾಡಿರುವ ಪ್ರಸಾದ್ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ. ಪತ್ರಕರ್ತ ಎಲ್.ಎನ್.ಪ್ರಸಾದ್ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.