ಸಮಾಜದಲ್ಲಿ ಹೆಚ್ಚಿದ ದೃಶ್ಯ ಮಾಧ್ಯಮ ಪ್ರಭಾವ: ಕಿರುತೆರೆ ನಟ ಗುಬ್ಬಿ ಪ್ರಕಾಶ್
ತುಮಕೂರು: ಸ್ಪರ್ಧಾತ್ಮಕ ಜಗತ್ತಿನಲ್ಲಿ ದೃಶ್ಯ ಮಾಧ್ಯಮ ಪ್ರಭಾವ ಹೆಚ್ಚಿದೆ ಎಂದು ರಂಗಕರ್ಮಿ ಹಾಗೂ ಕಿರುತೆರೆ ನಟ ಗುಬ್ಬಿ ಪ್ರಕಾಶ್ ಅಭಿಪ್ರಾಯಪಟ್ಟರು.
ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಶ್ರೀ ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 2013-14 ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಕಲೆ ಎಲ್ಲರಲ್ಲಿಯೂ ಇರುತ್ತದೆ. ಅದರಲ್ಲಿ ಶ್ರದ್ಧೆ, ಭಕ್ತಿ ಇದ್ದರೆ ಯಾವ ಕ್ಷೇತ್ರ ಬೇಕಾದರೂ ಕೈ ಬೀಸಿ ಕರೆಯುತ್ತದೆ ಎಂದರು. ಹೆಚ್ಚು ಪಠ್ಯ ಓದುವುದೊಂದೆ ಅಲ್ಲದೆ ಸಾಹಿತ್ಯವನ್ನೂ ಅಭ್ಯಾಸ ಮಾಡಬೇಕು ಎಂದು ಹೇಳುತ್ತಾ, ರನ್ನನ ಗದಾಯುದ್ಧದ ಸಂಗತಿಯನ್ನ ಉದಾಹರಿಸಿದರು. ಮಕ್ಕಳಿಗೆ ಆಸ್ತಿ ಬೇಡ. ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಿ ಎಂದು ಪೋಷಕರಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ತುಮಕೂರು ವಿವಿ ಕುಲಪತಿ ಎ.ಎಚ್. ರಾಜಾಸಾಬ್, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೆಚ್ಚು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಉತ್ತಮ ವ್ಯಕ್ತಿತ್ವ ರೂಪಿಸಕೊಳ್ಳಬಹುದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಈಶ್ವರ್ ಎಚ್.ವೈ. ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳಸಿಕೊಳ್ಳಬೇಕು, ತಮ್ಮ ಮನಸ್ಸನ್ನು ಸದಾ ಸನ್ನದ್ಧವಾಗಿರಿಸಿ ಕೊಂಡಿರಬೇಕು, ಮತ್ತು ಈ ರೀತಿಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡರೆ ತಮ್ಮ ಮುಂದಿನ ಭವಿಷ್ಯ ಉಜ್ವಲವಾಗುತ್ತದೆ ಎಂದರು.
ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕ ಪಿ.ರಾಘವೇಂದ್ರಕುಮಾರ್ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ರಕ್ಷಿತ ಪ್ರಾರ್ಥಿಸಿದರು. ಗಣಕಯಂತ್ರ ವಿಭಾಗದ ಮುಖ್ಯಸ್ಥರು ಮುಕುಂದಪ್ಪ ಸ್ವಾಗತಿಸಿದರು. ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ದಾಕ್ಷಾಯಿಣಿ ವಂದಿಸಿದರು.
ಉಪಪ್ರಾಂಶುಪಾಲ ರತ್ನಾಕುಮಾರಿ, ಡಾ.ಎನ್.ಬಿ. ನಡುವಿನಮನಿ ಮುಂತಾದವರು ಇದ್ದರು.