ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸಮಾನತೆ ಸಂವಿಧಾನದಲ್ಲಿ, ತಾರತಮ್ಯ ಸಮಾಜದಲ್ಲಿ

Vishwanath S
Updated On : 9 Mar 2014, 1:24 am

ತುಮಕೂರು: ಸಮಾನತೆ ಸಂವಿಧಾನದಲ್ಲಿದೆ. ತಾರತಮ್ಯ ಸಮಾಜದಲ್ಲಿದೆ ಎಂದು ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಉಪಕುಲಪತಿ ಪ್ರೊ.ಟಿ.ಆರ್.ಸುಬ್ರಮಣ್ಯ ಮಾರ್ಮಿಕವಾಗಿ ನುಡಿದರು.
ಅವರು ತುಮಕೂರಿನ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಂಸ್ಥೆ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಮತ್ತು ಮಹಿಳೆ ಕುರಿತ ಒಂದು ದಿನದ ರಾಜ್ಯಮಟ್ಟದ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಸಂವಿಧಾನದ ಪ್ರಸ್ತಾವನೆಯಲ್ಲಿ ತಿಳಿಸಿರುವಂತೆ ಲಿಂಗಬೇಧಕ್ಕೆ ಅವಕಾಶವಿಲ್ಲ. ಪುರುಷ-ಮಹಿಳೆಯರಿಬ್ಬರಿಗೂ ಸಮಾನ ಅವಕಾಶ, ಗೌರವಗಳು ದೊರೆಯಬೇಕು ಎಂದಿದ್ದರೂ, ಈ ವರೆಗೆ ಸಮಾನತೆ ಸಾಧ್ಯವಾಗಿಲ್ಲ. ಸಮಾನತೆ ಸಂವಿಧಾನದಲ್ಲಿದೆ. ಆದರೆ ಸಮಾಜದಲ್ಲಿ ತಾರತಮ್ಯವಿದೆ. ಸಂವಿಧಾನದ ಆಶಯದಂತೆ ಮಹಿಳಾ ಸಮಾನತೆ ಈವರೆವಿಗೆ ಸಾಧ್ಯವಾಗಿಲ್ಲ. ಮಹಿಳೆಯರ ವಿಷಯದಲ್ಲಿ ಇಂದಿಗೂ ತಾರತಮ್ಯವನ್ನು ಅನುಸರಿಸುತ್ತಲೇ ಬರಲಾಗುತ್ತಿದೆ. ಇದೊಂದು ವಿಷಾದನೀಯ ಸಂಗತಿ ಎಂದರು.
ಮಹಿಳೆಯ ಮೇಲಿನ ದೌರ್ಜನ್ಯ ತಡೆಯಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಲವಾರು ಕಾನೂನುಗಳನ್ನು ಜಾರಿಗೆ  ತಂದಿದ್ದರೂ ಅವುಗಳ ಅನುಷ್ಟಾನದ ಬಗ್ಗೆ ಮಾತ್ರ ನಿರ್ಲಕ್ಷ್ಯವಹಿಸಿವೆ. ಸಂವಿಧಾನದ ಕಲಂ 15 ಮತ್ತು 23 ರಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನವಿರುವ ಬಗ್ಗೆ ಉಲ್ಲೇಖವಿದ್ದರೂ ಇದುವರೆಗೂ ಸಮರ್ಪಕವಾಗಿ ಅನುಷ್ಟಾನಕ್ಕೆ ಬಂದಿಲ್ಲ. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಕೌಂಟರ್   ತೆರೆಯಬೇಕು ಎಂಬ ನಿಯಮವಿದೆ. ಬೆರಳೆಣಿಕೆಯಷ್ಟು ಕಡೆ ಮಾತ್ರ ವಿಶೇಷ ಕೌಂಟರ್ ನೋಡಬಹುದಾಗಿದೆ. ಮಹಿಳೆಯರ ಬಗ್ಗೆ ಇಂತಹ ವಿಚಾರ ಸಂಕಿರಣ ನಡೆಸುತ್ತಿದ್ದರೂ ಹಾಜರಿರುವ ಮಹಿಳೆಯರ ಸಂಖ್ಯೆ ಕೂಡ ಕಡಿಮೆಯಿದೆ. ಮಹಿಳೆಯರಿಗೂ ಸಹ  ಈ ಬಗ್ಗೆ ಬಗ್ಗೆ ಆಸಕ್ತಿ ಇದ್ದಂತಿಲ್ಲ ಎಂದು ಉಪಕುಲಪತಿ ಪ್ರೊ.ಟಿ.ಆರ್.ಸುಬ್ರಮಣ್ಯ ವಿಷಾದ ವ್ಯಕ್ತಪಡಿಸಿದರು.
ಸಂವಿಧಾನದ 73 ಮತ್ತು 74 ನೇ ತಿದ್ದುಪಡಿಯಿಂದಾಗಿ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿದ್ದರೂ ಇದುವರೆಗೂ ಅವರು ಸ್ವತಂತ್ರವಾಗಿ ಅಧಿಕಾರ ಮಾಡಲು ಸಾಧ್ಯವಾಗಿಲ್ಲ. ರಾಜಕೀಯವಾಗಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ನೀಡಬೇಕು ಎಂಬುದು ಕೇವಲ ಸ್ಥಳೀಯ ಸಂಸ್ಥೆಗಳಿಗೆ ಸಿಮೀತವಾಗಿದೆ. ಲೋಕಸಭೆ ಮತ್ತು ವಿಧಾನಸಭೆಗಳಿಗೆ ಇದುವರೆಗೂ ಇದು ಸಾಧ್ಯವಾಗಿಲ್ಲ. ಈ ಬಗ್ಗೆ ಹೊಸ ಮಸೂದೆ ಜಾರಿಗೆ ತರುವ ಬಗ್ಗೆ ರಾಜಕೀಯ ಪಕ್ಷಗಳು ಮೇಲ್ನೋಟಕ್ಕೆ ಮಾತನಾಡುತ್ತಿದ್ದರೂ ಯಾವ ಪಕ್ಷವೂ ಮನ: ಪೂರ್ವಕವಾಗಿ ಮಹಿಳೆಯರಿಗೆ ರಾಜಕೀಯ ಮೀಸಲಾತಿ ಕೊಡುವ ಬಗ್ಗೆ ಗಂಭೀರ ಆಲೋಚನೆ ಮಾಡಿಲ್ಲ. ಇದನ್ನು ರಾಜಕೀಯ ವಿಷಯವಾಗಿ ಪರಿಗಣಿಸಲಾಗಿದೆಯೇ ಹೊರತು ಸಾಮಾಜಿಕ ಸಮಸ್ಯೆಯಾಗಿ ಯಾವೊಂದು ರಾಜಕೀಯ ಪಕ್ಷಗಳು ಪರಿಗಣಿಸಿಲ್ಲ. ಇದು ಪ್ರಜಾಪ್ರಭುತ್ವದ ದುರಂತದವೆಂದರು.
ಹಲವು ಕಾನೂನು: ಮಾನವ ಹಕ್ಕುಗಳ ರಕ್ಷಣೆಯ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಸಾಮಾಜಿಕ,ಆರ್ಥಿಕ,ಶೈಕ್ಷಣಿಕ ಅವಕಾಶಗಳು ದೊರೆಯಬೇಕೆಂಬ ಉದ್ದೇಶದಿಂದ ಹಲವಾರು ಕಾನೂನುಗಳನ್ನು ಜಾರಿಗೆ ತರಲಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಜಾರಿಗೆ ತಂದ ವರದಕ್ಷಿಣೆ ವಿರೋಧಿ ಕಾನೂನಿನ ಅಡಿಯಲ್ಲಿ ದಾಖಲಾಗುತ್ತಿರುವ ಕೇಸುಗಳ ಸಂಖ್ಯೆ ತೀರ ಕಡಿಮೆಯೇ ಇದೆ.
ವಿದೇಶಿ ಬರಹಗಾರರು ಈ ಬಗ್ಗೆ ಬೆಳಕು ಚೆಲ್ಲುತ್ತಿದ್ದಾರೆ. ನಮ್ಮವರು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಮಹಿಳೆಯರ ರಕ್ಷಣೆಗೆ ತಂದ ಕಾನೂನುಗಳ ಉದ್ದೇಶ ಇಂದಿಗೂ ಸಂಪೂರ್ಣವಾಗಿ ಈಡೇರಿಲ್ಲವೆಂದರು.
ಕಾಟಾಚಾರದ ನಿಯಮ: ಉದ್ಯೋಗ ನಿರತ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ತಡೆಗಟ್ಟುವ ಹಿನ್ನೆಲೆಯಲ್ಲಿ ಸರ್ಕಾರ ಪ್ರತಿ ಇಲಾಖೆಯಲ್ಲಿಯೂ ಮಹಿಳಾ ದೌರ್ಜನ್ಯ ಪರಿಶೀಲನಾ ಸಮಿತಿ ರಚಿಸಬೇಕೆಂಬ ನಿಯಮ ರೂಪಿಸಿದೆ. ಅದರೆ ಬಹುತೇಕ ಇಲಾಖೆಗಳಲ್ಲಿ ಈ ಸಮಿತಿಗಳೇ ಇಲ್ಲ. ಭವಿಷ್ಯದ ಸತ್ಪ್ರಜೆಗಳನ್ನು ರೂಪಿಸುವ ವಿಶ್ವವಿದ್ಯಾಲಯಗಳಲ್ಲಿಯೂ ಈ ಸಮಿತಿಗಳ ರಚನೆಯಾಗಿಲ್ಲ. ಕಾಟಾಚಾರಕ್ಕೆ ನೀತಿ ನಿಯಮಗಳನ್ನು ರೂಪಿಸಲಾಗುತ್ತಿದೆ. ಆದ್ದರಿಂದ ವಿಶ್ವವಿದ್ಯಾಲಯದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಈ ಬಗ್ಗೆ ಸಾರ್ವಜನಿಕರಿಗೆ ಅದರಲ್ಲಿಯೂ ಮಹಿಳೆಯರಿಗೆ ಜಾಗೃತಿ ಮೂಡಿಸಿ ಅವರ ರಕ್ಷಣೆಗೆ ಮುಂದಾಗುವಂತೆ ಪ್ರೊ. ಟಿ.ಆರ್.ಸುಬ್ರಮಣ್ಯ ಕರೆ ನೀಡಿದರು.
ವಿದ್ಯೋದಯ ಪೌಂಡೇಷನ್ ವ್ಯವಸ್ಥಾಪಕ ಟ್ರಸ್ಟಿ ಪ್ರೊ.ಎಚ್.ಎಸ್.ಶೇಷಾದ್ರಿ ಅಧ್ಯಕ್ಷತೆ ವಹಿಸಿದ್ದರು. ಕಾನೂನು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಬಿ.ಎಸ್.ರೆಡ್ಡಿ, ವಿಚಾರಸಂಕಿರಣದ ಸಂಯೋಜಕ ಹಾಗೂ ವಿದ್ಯೋದಯ ಕಾನೂನು ಕಾಲೇಜಿನ ಸಹಪ್ರಾಧ್ಯಾಪಕ ಎ.ನಾರಾಯಣಸ್ವಾಮಿ,ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ವೆಂಕಟಾಚಲಪತಿ ಉಪಸ್ಥಿತರಿದ್ದರು.
ವಿಚಾರ ಸಂಕಿರಣದಲ್ಲಿ ಮಹಿಳಾ ರಕ್ಷಣಾ ಕಾನೂನು ಕುರಿತು ಬೆಂಗಳೂರು ವಿವಿಯ ಡಾ.ವಿ.ಸುದೇಶ್,ಮಹಿಳಾ ಸಮಸ್ಯೆ ಮತ್ತು ಕಲ್ಯಾಣ ಕುರಿತು ಚಿತ್ರದುರ್ಗದ ಸರಸ್ವತಿ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸುಧಾದೇವಿ, ಮಹಿಳೆಯ ವಿರುದ್ದ ಅಪರಾಧ ಕುರಿತು ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಪ್ರೊ.ಸಿ.ಎಸ್.ಪಾಟೀಲ್ ವಿಷಯ ಮಂಡಿಸಿದರು. ರಾಜ್ಯದ ವಿವಿಧ ಜಿಲ್ಲೆಗಳ ಕಾನೂನು ಬೋಧಕರು ಮತ್ತು ವಿದ್ಯಾರ್ಥಿಗಳು ವಿಚಾರಸಂಕಿರಣದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement