'ನಾಡ ಸಂಸ್ಕೃತಿ, ಕಲೆ ಜೀವಂತಿಕೆಗೆ ಯುವಜನರ ಪಾತ್ರ ಮಹತ್ವದ್ದು'
ಕ.ಪ್ರ.ವಾರ್ತೆ , ತುಮಕೂರು , ಮಾ.11
ನಾಡ ಸಂಸ್ಕೃತಿ ಮತ್ತು ಕಲೆ ಗ್ರಾಮೀಣ ಪ್ರದೇಶದಲ್ಲಿ ಜೀವತಿಕೆಯಿಂದಿರಬೇಕಾದರೆ ಯುವಜನರ ಪಾತ್ರ ಮಹತ್ವವಾದದ್ದು ಎಂದು ಚಲನಚಿತ್ರ ಹಾಗೂ ಕಿರುತೆರೆ ನಟ ಪ್ರದೀಪ್ ಅಭಿಪ್ರಾಯಪಟ್ಟರು.
ಅವರು ಕುಸುಮ ಕಲಾ ಸಂಘ ಮೆಳೇಕಲ್ಲಹಳ್ಳಿ ತುರುವೇಕೆರೆ ತಾಲೂಕಿನ ಜೋಡಿಕೊಪ್ಪ ಗ್ರಾಮದಲ್ಲಿ ಆಯೋಜಿಸಿದ್ದ ಈ ವರ್ಷದ ಎರಡನೆ ಸುಗ್ಗಿ ರಂಗಸಂಭ್ರಮ ದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಇಂದಿನ ಯುವ ಜನಾಂಗ ಆಧುನಿಕತೆಯ ಜೀವನವನ್ನು ನಡೆಸಲು ತುದಿಗಾಲಲ್ಲಿ ನಿಂತಿದ್ದಾರೆ. ನಮ್ಮ ನಾಡ ಸಂಸ್ಕೃತಿಯಿಂದ ದೂರ ಸರಿಯುತ್ತಿರುವುದು ಅಪಾಯದ ಸಂಕೇತಗಳಲ್ಲೊಂದಾಗಿದೆ ಎಂದರು.
ಸಾನಿಧ್ಯವಹಿಸಿದ್ದ ಸಿದ್ಧಗಂಗಾ ಮಠಾಧ್ಯಕ್ಷ ಗೌರೀಶಂಕರ ಸ್ವಾಮೀಜಿ ಮಾತನಾಡಿ ಮನುಷ್ಯ ತನ್ನ ಬದುಕಿ ಜೊತೆಯಲ್ಲಿ ನಾಡಿನ ಸಂಸ್ಕೃತಿ, ಕಲೆಯನ್ನು ಮೈಗೂಡಿಸಿಕೊಂಡಾಗ ಮಾತ್ರ ನಾಡಿನ, ರಾಷ್ಟ್ರದ ಏಳಿಗೆಯನ್ನು ಹೊಂದಲು ಸಾಧ್ಯ. ಆ ಮೂಲಕವೆ ತನ್ನ ಬದುಕನ್ನ ಕಂಡುಕೊಂಡು ತನ್ನಲೇ ಇರುವಂತ ಮಹಾ ಚೈತನ್ಯವನ್ನು ಕಂಡುಕೊಂಡತಹ ಮಹಾನುಭಾವವನ್ನು ಪಡೆದಂತಾಗುತ್ತದೆ ಎಂದರು.
ಸಾರ್ಥಕ: ಅಧ್ಯಕ್ಷತೆ ವಹಿಸಿದ್ದ ಗ್ರಾಮಪಂಚಾಯತಿಯ ಅಧ್ಯಕ್ಷ ಮುನಿಸ್ವಾಮಿ ಮಾತನಾಡಿ ನಾಟಕಗಳಿಂದ ಜನತೆಗೆ ಹರ್ಷದ ಜೊತೆಯಲ್ಲಿ ತಿಳುವಳಿಕೆಯನ್ನು ನೀಡುತ್ತಾ ಜನರಲ್ಲಿ ಇರುವಂಥ ಅಂಧಕಾರ ಮೂಢನಂಬಿಕೆಗಳ ವಿರುದ್ಧ ಧ್ವನಿ ಎತ್ತಿ ಜಾಗೃತಿ ಮೂಡಿದಾಗ ಕಲಾವಿದರ ಜೀವನ ಸಾರ್ಥಕವಾದಂತೆ. ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕುಸುಮ ಕಲಾ ಸಂಘದ ಕಾರ್ಯ ಪ್ರಸಂಶನೀಯವಾದುದು ಎಂದರು.
ಗ್ರಾಮದ ಹಿರಿಯರಾದ ಶಿವಣ್ಣ, ವೀರಣ್ಣ ಭಾಗವಹಿಸಿದ್ದ ಕಾರ್ಯಕ್ರಮವನ್ನು ಅರ್ಪಿತ ಮತ್ತು ಗೆಳತಿ ದೇವರ ಪ್ರಾರ್ಥನೆ ಮಾಡಿದರೆ ಶರತ್ ಸ್ವಾಗತಿಸಿದರು. ರಮೇಶ್ ಮೆಳೇಕಲ್ಲಹಳಿ ವಂದಿಸಿದರು.
ಹರೀಶ್ ನಿರೂಪಿಸಿದರು. ನಂತರ ಕುಸುಮ ಕಲಾ ಸಂಘದಿಂದ ಹಿಂಗೈತಪ್ಲೋಕ ಹಾಗೂ ರಂಗಪರಂಪರೆ ಟ್ರಸ್ಟ್ ಮುದ್ದಯ್ಯನ ಪಾಳ್ಯ ಇವರಿಂದ ಲಾಕೌಟ್ ಅಲ್ಲ ನಾಕೌಟ್ ನಾಟಕಗಳು ಹಳ್ಳಿಜನರ ಮನ ಗೆಲ್ಲುವಲ್ಲಿ ಯಶಸ್ವಿಯಾದವು.