ಪರಮಶಿವಯ್ಯ ನಿಧನಕ್ಕೆ ಸಂತಾಪ
ಹುಳಿಯಾರು: ಬಯಲು ಸೀಮೆಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ಹೋರಾಟ ನಡೆಸಿದ ನೀರಾವರಿ ತಜ್ಞ ಪರಮಶಿವಯ್ಯ ಅವರ ನಿಧನಕ್ಕೆ ತಾಲೂಕು ರೈತ ಸಂಘ ಸೇರಿದಂತೆ ಪಟ್ಟಣದ ನಾನಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.
ಬರಡು ಜಿಲ್ಲೆಗಳಾದ ತುಮಕೂರು ಕೋಲಾರ, ಚಿತ್ರದುರ್ಗ, ಚಿಕ್ಕಬಳ್ಳಾಪುರ ಮುಂತಾದ ಜಿಲ್ಲೆಗಳ ನೀರಿನ ಸಮಸ್ಯೆಯ ಬವಣೆ ನೀಗಿಸಲು ತಮ್ಮದೇ ಆದ ವರದಿಯನ್ನು ರೂಪಿಸಿ ಆ ಮೂಲಕ ಕಡಿಮೆ ವೆಚ್ಚದಲ್ಲಿ ಶಾಶ್ವತ ಯೋಜನೆ ರೂಪಿಸಲು ಸಾಧ್ಯವಿದೆ ಎಂದು ತೋರಿಸಿಕೊಟ್ಟ ಪರಮಶಿವಯ್ಯನವರು ಈ ಜಿಲ್ಲೆಗಳ ಪಾಲಿಗೆ ಆಶಾದಾಯಕವಾಗಿದ್ದರು ಎಂದು ರಾಜ್ಯ ರೈತ ಸಂಘದ ಸಂಚಾಲಕ ಕೆಂಕೆರೆ ಸತೀಶ್ ತಿಳಿಸಿದ್ದಾರೆ.
ಹುಳಿಯಾರು ಭಾಗಕ್ಕೆ ನೀರು ಹರಿಸುವ ಹೋರಾಟದ ವೇಳೆ ನಡೆದ ನೀರಾವರಿ ಹೋರಾಟದಲ್ಲೆ ನಾಲ್ಕೈದು ಬಾರಿ ಆಗಮಿಸಿ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಆಗಬೇಕಾದ ಕಾರ್ಯದ ಬಗ್ಗೆ ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಲ್ಲದೆ ರಾಜ್ಯ ಸರ್ಕಾರಕ್ಕೆ ಮನದಟ್ಟು ಮಾಡಿಕೊಡಲು ನೀಲನಕ್ಷೆಯನ್ನೆ ತಯಾರಿಸಿಕೊಟ್ಟಿದ್ದರು.
ರೈತಸಂಘದ ಮಲ್ಲಪ್ಪ, ಮಲ್ಲೀಕಣ್ಣ, ಪಾತ್ರೆ ಸತೀಶ್, ಹೂವಿನ ರಘು, ವಾಸವಿ ವಿದ್ಯಾ ಸಂಸ್ಥೆಯ ಬಿ.ವಿ.ಶ್ರೀನಿವಾಸ್, ಪೋಟೋಗ್ರಾಫರ್ ಸಂಘದ ಸುದರ್ಷನ್, ವರ್ತಕರ ಸಂಘದ ನಟರಾಜು, ಖ್ಯಾತ ಹೃದಯ ತಜ್ಞ ಡಾ. ಪರಮೇಶ್ವರಪ್ಪ ಮುಂತಾದವರು ಸಂತಾಪ ಸೂಚಿಸಿದ್ದಾರೆ.