ಕರ್ತವ್ಯ ನಿರತ ವೈದ್ಯರ ಮೇಲೆ ದೌರ್ಜನ್ಯ ಪ್ರಕರಣ ಹೆಚ್ಚಳ
ಪಾವಗಡ: ಕರ್ತವ್ಯ ನಿರತ ವೈದ್ಯರ ಮೇಲೆ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು ದೌರ್ಜನ್ಯ
ತಡೆಗಟ್ಟಿ ವೈದ್ಯರಿಗೆ ರಕ್ಷಣೆ ಕಲ್ಪಿಸುವಂತೆ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಚನ್ನಕೇಶವ ಅವರು ಮನವಿ ಮಾಡಿದ್ದಾರೆ.
ಬುಧವಾರ ಪಟ್ಟಣದ ಸರ್ಕಾರಿ ಆಸ್ರತ್ರೆಯ ಸಭಾಂಗಣದಲ್ಲಿ ಏರ್ಪಾಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಿಯಮಾನುಸಾರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಬಂದ ರೋಗಿಗಳ ಬಗ್ಗೆ ಕಾಳಜಿ ವಹಿಸಿ ವೈದ್ಯರು
ಕರ್ತವ್ಯ ನಿರ್ವಹಿಸುತ್ತಿದ್ದು ರೋಗಿಗಳ ಪರ ಆಸ್ಪತ್ರೆಗೆ ಬಂದ ಸಾರ್ವಜನಿಕರಿಂದ ವೈದ್ಯರ ಮೇಲೆ ಕಿರುಕುಳ ಮತ್ತು ಹಲ್ಲೆಗಳು ನಡೆಯುತ್ತಿವೆ. ಇದರಿಂದ ಕರ್ತವ್ಯ ನಿರತ ಆಸ್ಪತ್ರೆಯ ಸರ್ಕಾರಿ ವೈದ್ಯರು ಭಯಭೀತರಾಗಿರುವುದಾಗಿ ಅವರು ತಿಳಿಸಿದರು.
ಮಾ.11ರಂದು ರಾತ್ರಿ ತಾಲೂಕಿನ ಚನ್ನಸಾಗರದಹಟ್ಟಿ ಗ್ರಾಮದ ವ್ಯಕ್ತಿಯೊಬ್ಬರು ಮದ್ಯ ಸೇವಿಸಿ ಅಮಲಿನಲ್ಲಿ
ಬೈಕಿನಲ್ಲಿ ಚಿಕತ್ಸೆಗೆಂದು ಗಾಯಾಳು ಒಬ್ಬರನ್ನು ಆಸ್ಪತ್ರೆಗೆ ಕರೆ ತಂದರು. ಗಾಯಾಳು ಜೊತೆ ಮದ್ಯ ಸೇವನೆ ಮಾಡಿದ ಸುಮಾರು 10 ಮಂದಿ ಸಾರ್ವಜನಿಕರು ಆಸ್ಪತ್ರೆಗೆ ಆಗಮಿಸಿದ್ದರು. ಅಪಘಾತಕ್ಕೀಡಾಗಿ ತಲೆಗೆ ತೀವ್ರ ಪೆಟ್ಟಾಗಿದ್ದ ಸದರಿ ಗಾಯಾಳುವನ್ನು ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್‌ಗೆ ಕರೆದೊಯ್ಯಲು ಸೂಚಿಸಿದಾಗ ಇದನ್ನು ವಿರೋಧಿಸಿದ ಗಾಯಾಳು ಜೊತೆ ಬಂದವರು ಕರ್ತವ್ಯ ನಿರತ ವೈದ್ಯ ಡಾ.ಲೋಕೇಶ್‌ರೆಡ್ಡಿ ಅವರ ಮೇಲೆ ದೌರ್ಜನ್ಯವೆಸಗಿದ್ದಾರೆ. ಅಲ್ಲದೇ ವೈದ್ಯರ ರಕ್ಷಣೆಗೆ ನಿಂತ ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಗಂಗಾಧರ್ ಮತ್ತು ತುರ್ತು ವಾಹನ ಚಾಲಕನೊಬ್ಬನ ಮೇಲೆ ಹಲ್ಲೆ ಮಾಡಿದ್ದಾರೆ. ಆಸ್ಪತ್ರೆಗೆ ಬಂದ ರೋಗಿಗಳ ಬಗ್ಗೆ ಆಸಕ್ತಿ ವಹಿಸಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ವೈದ್ಯರ ಮೇಲೆ ಸಾರ್ವಜನಿಕರಿಂದ ನಿತ್ಯ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣ ನಡೆಯುವುದರಿಂದ ವೈದ್ಯರು ಭೀತರಾಗಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಆಸ್ಪತ್ರೆಯ ಡಾ.ಲೋಕೇಶ್ ರೆಡ್ಡಿ ಅವರ ಮೇಲೆ ನಡೆದ ದೌರ್ಜನ್ಯ ಮತ್ತು ಹಲ್ಲೆಗೆ ಸಂಬಂಧಿಸಿದಂತೆ 10ಮಂದಿ ವಿರುದ್ಧ ಪಾವಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ಅವರು ತಿಳಿಸಿದರು.