ಜೆಡಿಎಸ್ ನಾಶಕ್ಕೆ ಬಿಜೆಪಿ-ಕಾಂಗ್ರೆಸ್ ಒಳಒಪ್ಪಂದ
ಕ.ಪ್ರ.ವಾರ್ತೆ , ಕುಣಿಗಲ್ಣ್ ಮಾ.12
ಜೆಡಿಎಸ್ ಸರ್ವನಾಶ ಮಾಡಲು ಬಿಜೆಪಿ-ಕಾಂಗ್ರೆಸ್ ಒಳಒಪ್ಪಂದ ಮಾಡಿಕೊಂಡು, ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದಾರೆ. ಕನ್ನಡಿಗರು ಸ್ವಾಭಿಮಾನ ಸಂರಕ್ಷಣೆ ನಿಟ್ಟಿನಲ್ಲಿ ಒಬ್ಬ ಕನ್ನಡಿಗನನ್ನು ಪುನಃ ಪ್ರಧಾನಮಂತ್ರಿಯನ್ನಾಗಿಸುವ ನಿಟ್ಟಿನಲ್ಲಿ ಜೆಡಿಎಸ್ ಬೆಂಬಲಿಸುವಂತೆ ಮಾಜಿ ಸಿಎಂ ಕುಮಾರಸ್ವಾಮಿ ಕರೆ ನೀಡಿದರು.
ಬುಧವಾರ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಚುನಾವಣೆಯ ರೂಪು ರೇಷೆಗಳನ್ನು ಚರ್ಚಿಸಲು ಪಕ್ಷದ ಮುಖಂಡರ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ 18 ಸ್ಥಾನಗಳಲ್ಲಿ ಜೆಡಿಎಸ್ ಗೆಲವು ಸಾಧಿಸಿದಲ್ಲಿ ದೇವೇಗೌಡರು ಪುನಃ ಪ್ರಧಾನಮಂತ್ರಿಯಾಗುವುದರಲ್ಲಿ ಅನುಮಾನವಿಲ್ಲ. ಹಿಂದೆ ಅವರು ಪ್ರಧಾನ ಮಂತ್ರಿಯಾಗಿ ಕೈಗೊಂಡ ಕ್ರಮದ ಫಲವಾಗಿ ಇಂದು ರಾಜ್ಯಕ್ಕೆ ಕೇಂದ್ರದಿಂದ ನೀರಾವರಿ ಯೋಜನೆ ಸೇರಿದಂತೆ ಇತರೆ ಯೋಜನೆಗಳಿಂದ ಹತ್ತುಸಾವಿರ ಕೋಟಿ ರು. ಅನುದಾನ ಬರುತ್ತಿದ್ದು, ರಸಗೊಬ್ಬರ ಸಬ್ಸಿಡಿ ಹೆಚ್ಚಿನ ರೀತಿಯಲ್ಲಿ ದೊರಕಿದೆ.
ಶೋಭೆ ತರುವುದಿಲ್ಲ: ಬಿಜೆಪಿ ನರೇಂದ್ರ ಮೋದಿಯವರನ್ನು, ಕಾಂಗ್ರೆಸ್ನವರು ರಾಹುಲ್ ಗಾಂಧಿಯವರನ್ನು ಪ್ರಧಾನಿಯಾಗಿಸಲು ಯತ್ನಿಸುತ್ತಿದ್ದಾರೆ. ಆದರೆ, ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಯಾರೂ ಸ್ಪಷ್ಟ ನಿಲುವನ್ನು ಜನತೆಗೆ ನೀಡುತ್ತಿಲ್ಲ. ಇನ್ನು ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವು ಸಾಧುವಲ್ಲದ ಹಲವು ನೀರಾವರಿಯೋಜನೆಗಳನ್ನು ಚುನಾವಣೆ ಮುಂದಿಟ್ಟುಕೊಂಡು ಘೋಷಣೆ ಮಾಡುತ್ತಾ ಜನತೆಗೆ ಮಂಕುಬೂದಿ ಎರಚುತ್ತಿದೆ. ಸಿಎಂ ಸಿದ್ದರಾಮಯ್ಯ, ದೇವೇಗೌಡರನ್ನು ಈ ಬಾರಿ ಚುನಾವಣೆಯಲ್ಲಿ ಸೋಲಿಸುವ ಮೂಲಕ ರಾಜಕೀಯದಿಂದಲೇ ಓಡಿಸುವುದಾಗಿ ಹೇಳುತ್ತಿದ್ದಾರೆ. ಆದರೆ ಸಿದ್ದರಾಮಯ್ಯ, ಜೆಡಿಎಸ್ ಪಾಳೆಯದಲ್ಲಿ ದೇವೇಗೌಡರಿಂದ ಎಲ್ಲಾ ನೆರವನ್ನು ಪಡೆದು ಬೆಳೆದು, ಈಗ ಇಂತಹ ಮಾತನಾಡುತ್ತಿರುವುದು ಅವರಿಗೆ ಶೋಭೆ ತರವುದಿಲ್ಲ. ಈಗಾಗಲೆ ರಾಜ್ಯದ ಕಾಂಗ್ರೆಸ್ ಸರ್ಕಾರ ಅಲುಗಾಡುತ್ತಿದೆ. ನಾಲ್ಕು ಮಂದಿ ಸಚಿವರು ತಾವೇ ಸಿಎಂ ಆಗುವ ತವಕದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಹಗರಣಗಳ ಕೂಪದಲ್ಲಿ ಮುಳುಗಿರುವ ಸಂಸದ ಡಿ.ಕೆ.ಸುರೇಶ್, ಅವರ ಸಹೋದರರ ಘನಕಾರ್ಯಗಳು ಮಾಧ್ಯಮದಲ್ಲಿ ಪುಂಕಾನುಪುಂಕವಾಗಿ ಬರುತ್ತಿವೆ.ಅವರು ಜನವಿರೋಧಿಯಾಗಿದ್ದಾರೆ. ಆದರೆ ಜೆಡಿಎಸ್ ಅಭ್ಯರ್ಥಿ ಸಜ್ಜನರಾಜಕಾರಣಿಯಾಗಿದ್ದು, ಯಾವುದೇ ಕಳಂಕ ಹೊತ್ತವರಲ್ಲ. ಸಜ್ಜನ ವ್ಯಕ್ತಿಯನ್ನು ಬೆಂಬಲಿಸಿ, ದೇವೇಗೌಡರ ಕೈಬಲಪಡಿಸಬೇಕೆಂದರು.
ಆಭ್ಯರ್ಥಿ ಪ್ರಭಾಕರರೆಡ್ಡಿ ಮಾತನಾಡಿ, ದೇಶದಲ್ಲಿ ರೈತರು ನೆಮ್ಮದಿಯಾಗಿದ್ದಾಗ ದೇಶ ನೆಮ್ಮದಿಯಾಗಿರುತ್ತದೆ. ಜೆಡಿಎಸ್ನಿಂದ ರಾಷ್ಟ್ರದಲ್ಲಿ ನೆಮ್ಮದಿ ಸಾಧ್ಯವಿದ್ದು ಜನತೆ ಜೆಡಿಎಸ್ ಬೆಂಬಲಿಸುವ ಮೂಲಕ ರೈತಪರ ಸರ್ಕಾರಕ್ಕೆ ಕೊಡುಗೆ ನೀಡಬೇಕೆಂದರು.
ಅಪವಿತ್ರ ಮೈತ್ರಿ: ಶಾಸಕ ಡಿ.ನಾಗರಾಜಯ್ಯ ಮಾತನಾಡಿ, ಕ್ಷೇತ್ರದಲ್ಲಿ ಬಿಜೆಪಿ ಮುಖಂಡರು ಈಗಾಗಲೆ ಕಾಂಗ್ರೆಸ್ ಅಭ್ಯರ್ಥಿಯೊಂದಿಗೆ ಅಪವಿತ್ರ ಮೈತ್ರಿಮಾಡಿಕೊಂಡು ಕಾಂಗ್ರೆಸ್ ಬೆಂಬಲಿಸಲು ಅತಿಮ ಹಂತದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಕಾರ್ಯಕರ್ತರು ಈ ವಿಷಯವನ್ನು ಜನತೆಗೆ ಮನವರಿಕೆ ಮಾಡಿಕೊಡಬೇಕಿದೆ. ಸಂಸದ ಡಿ.ಕೆ.ಸುರೇಶ್, ಗ್ರಾಪಂ ಮಟ್ಟದ ರಾಜಕಾರಣದಲ್ಲೆ ಕಾಲಕಳೆದಿದ್ದು, ಗ್ರಾಪಂ ಸದಸ್ಯರಾಗಲು ಅರ್ಹತೆ ಹೊಂದಿದ್ದಾರೆ. ಅಧಿಕಾರಿಗಳನ್ನು ಅವಾಚ್ಯಶಬ್ದಗಳಿಂದ ನಿಂದಿಸಿ, ಬೆದರಿಸುವ ಅವರ ವರ್ತನೆಗೆ ತಾಲೂಕಿನ ಜನತೆಗೆ ಸಾಕಾಗಿ ಹೋಗಿದ್ದು ಈ ಬಾರಿ ಅವರಿಗೆ ತಕ್ಕಪಾಠ ಕಲಿಸಿ, ಜೆಡಿಎಸ್ ಅಭ್ಯರ್ಥಿ ಬೆಂಬಲಿಸುವಂತೆ ಕರೆ ನೀಡಿದರು.
ಶಾಸಕ ಎಂ.ಟಿ.ಕೃಷ್ಣಪ್ಪ, ಎನ್.ಎಚ್. ಕೋನಾರೆಡ್ಡಿ, ಜೆಡಿಎಸ್ ಜಿಲ್ಲಾಧ್ಯಕ್ಷ ಹುಲಿನಾಯ್ಕರ್, ತಾಲೂಕು ಅಧ್ಯಕ್ಷ ಕೆ.ಎಲ್. ಹರೀಶ, ಜಿಪಂ ಸದಸ್ಯರಾದ ಡಾ.ಬಿ.ಎನ್.ರವಿ, ದೊಡ್ಡಯ್ಯ, ವೈ.ಎಚ್. ಹುಚ್ಚಯ್ಯ,
ಪುರಸಭೆ ಸದಸ್ಯರಾದ ಮಂಜು, ಚಂದ್ರಶೇಖರ, ಸಮೀವುಲ್ಲಾ, ಸತೀಶ, ಸರಸ್ವತಿ, ಆಯಿಶಾಬೀ, ಜಯಶೀಲಾ, ಮುಖಂಡರಾದ ಎಚ್.ಎ. ಜಯರಾಮಯ್ಯ, ಜಗದೀಶ, ಕೃಷ್ಣಪ್ಪ, ತಮ್ಮಣ್ಮ,ಬಸವರಾಜು, ಶಿವಣ್ಣ, ವೆಂಕಟೇಶ್ ಇತರರು ಇದ್ದರು.
ಜೇಬುಗಳ್ಳನಿಗೆ ಧರ್ಮದೇಟು
ಕುಣಿಗಲ್: ಶಾಸಕರ ಜೇಬಿಗೆ ಕೈಹಾಕಿದ ಜೇಬುಗಳ್ಳ ಬುಧವಾರ ನಡೆದ ಬೆಂಗಳೂರು ಗ್ರಾಮಾಂತರ ಲೋಕಸಭೆ ಚುನಾವಣೆಯ ಜೆಡಿಎಸ್ ಮುಖಂಡರ ರೂಪುರೇಷೆ ಸಭೆಯಲ್ಲಿ ಧರ್ಮದೇಟು ತಿಂದು ಪೊಲೀಸರ ವಶಕ್ಕೆ ನೀಡಿದ ಘಟನೆ ನಡೆಯಿತು.
ಬುಧವಾರ ಸಂತೇ ದಿನವಾದ್ದರಿಂದ ಮುಖಂಡರ ಸಭೆಯಲ್ಲಿ ಹೆಚ್ಚಿನ ಜನಸಂದಣಿ ಸೇರಿತ್ತು. ಕಾರ್ಯಕ್ರಮ ಪೂರ್ಣಗೊಂಡ ನಂತರ, ವೇದಿಕೆ ಇಳಿದು ಹೊರನಡೆಯಲು ಮುಂದಾದ ಮಾಜಿ ಸಿಎಂ ಕುಮಾರಸ್ವಾಮಿಯವರಿಗೆ ಶಾಸಕ ಡಿ.ನಾಗರಾಜಯ್ಯ ಇತರೆ ಗಣ್ಯರು ಸಾಥ್ ನೀಡಿದರು. ಸಹಜವಾಗಿ ಅಭಿಮಾನಿಗಳು, ಮುಖಂಡರು ಮಾಜಿ ಸಿಎಂ ಅವರನ್ನು ಮುತ್ತಿಕೊಂಡು ತಮ್ಮ ಅಹವಾಲು ಸಲ್ಲಿಸಲು ಮುಂದಾದರು. ಇದೇ ವೇಳೆಗೆ ಹುಲಿಯೂರುದುರ್ಗ ಗ್ರಾಪಂ ಅಧ್ಯಕ್ಷ ವೆಂಕಟೇಶ್, ತಮ್ಮ ಗ್ರಾಪಂನಲ್ಲಿ ನಿಯಮಾನುಸಾರ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದರೂ, ಕೆಲ ಕಾಂಗ್ರೆಸ್ ಮುಖಂಡರು ಸಂಸದ ಡಿ.ಕೆ.ಸುರೇಶ್ ಮೂಲಕ ಪ್ರಭಾವ ಹೇರಿ ತಮ್ಮ ವಿರುದ್ಧ ಕ್ರಮಕ್ಕೆ ಸರ್ಕಾರದ ಮಟ್ಟದಲ್ಲಿ ಲಾಭಿ ನಡೆಸುತ್ತಾ ತೊಂದರೆ ನೀಡುತ್ತಿದ್ದಾರೆಂದು ಅವಲತ್ತುಕೊಂಡರು. ಇವರೊಂದಿಗೆ ಇತರೆ ಮುಖಂಡರು, ಬೇರೆ ಗ್ರಾಪಂ ಸದಸ್ಯರು ತಮಗೂ ಇದೇ ರೀತಿಯ ಕಿರುಕುಳ ನೀಡುತ್ತಿದ್ದಾರೆ. ಸಂಸದರಾದವರು ಸಂಸದರ ಕೆಲಸ ಮಾಡದೆ, ದ್ವೇಷದ ರಾಜಕಾರಣದಲ್ಲಿ ಮುಳುಗಿದ್ದಾರೆ, ತಮ್ಮ ಸರ್ಕಾರ ಇದೆ ಎಂದು ಜೆಡಿಎಸ್ ಅಧಿಕಾರದಲ್ಲಿರುವ ಗ್ರಾಪಂಗಳನ್ನು ಗುರಿಮಾಡುತ್ತಾ ತೊಂದರೆ ನೀಡುತ್ತಿದ್ದಾರೆಂದು ದೂರಿದರು.
ಈ ಮಧ್ಯೆ ಗುಂಪು ಹೆಚ್ಚಾಗಿ, ತಳ್ಳಾಟ, ನೂಕಾಟ ಪ್ರಾರಂಭವಾಯಿತು. ಜೇಬುಗಳ್ಳನೊಬ್ಬ ಶಾಸಕ ಡಿ.ನಾಗರಾಜಯ್ಯನವರ ಜೇಬಿಗೆ ತನ್ನ ಕೈಚಳಕ ತೋರಿಸಲು ಯತ್ನಿಸಿದ. ಎಚ್ಚೆತ್ತುಗೊಂಡ ಶಾಸಕರು, ಆತನ ಕೈಹಿಡಿದು ಅತನನ್ನು ಕಾರ್ಯಕರ್ತರ ವಶಕ್ಕೆ ನೀಡಿದರು. ನಂತರ ಕಾರ್ಯಕರ್ತರು ವಿಷಯ ಅರಿತು ಧರ್ಮದೇಟು ನೀಡಿ, ಕಲ್ಯಾಣ ಮಂಟಪದ ಮುಂಭಾಗದಲ್ಲಿದ್ದ ಪೊಲೀಸರ ವಶಕ್ಕೆ ನೀಡಿದರು. ಪೊಲೀಸರ ವಶದಲ್ಲಿರುವ ಜೇಬುಗಳನನ್ನು ಕಡೂರಿನ ವಾಸು ಎಂದು ಗುರುತಿಸಲಾಗಿದ್ದು, ತನಿಖೆ ಮುಂದುವರೆದಿದೆ.
ಸಂಸದರೇ ನಿಮ್ಮ ಆಟ ಇಲ್ಲಿ ನಡೆಯೊಲ್ಲ...
ಕುಣಿಗಲ್: ಸಂಸದರೇ ಇದು ನಿಮ್ಮ ಗೂಂಡಾ ಪ್ರವೃತ್ತಿಗೆ ಸಿಕ್ಕು ನಲುಗುತ್ತಿರುವ ಕನಕಪುರವಲ್ಲ, ಇದು ವೈಕೆಆರ್, ನಾಗರಾಜಯ್ಯನವರಂತ ಹುಟ್ಟುಹೋರಾಟಗಾರರು ನೆಲೆಸಿದ ಕುಣಿಗಲ್ ಕ್ಷೇತ್ರವಾಗಿದ್ದು, ನಿಮ್ಮ ಆಟ ಇಲ್ಲಿ ನಡೆಯೊಲ್ಲ ಎಂದು ಜಿಪಂ ಸದಸ್ಯ ಡಾ.ರವಿ ಅವರು ಸಂಸದ ಡಿ.ಕೆ.ಸುರೇಶ್ ಅವರಿಗೆ ಎಚ್ಚರಿಕೆ ನೀಡಿದರು.
ಬುಧವಾರ ನಡೆದ ಲೋಕಸಭೆ ಚುನಾವಣೆ ರೂಪುರೇಷೆಗಳಿಗೆ ಚರ್ಚಿಸಲು ನಡೆದ ಜೆಡಿಎಸ್ ಮುಖಂಡರ ಸಭೆಯಲ್ಲಿ, ಸಂಸದ ಡಿ.ಕೆ.ಸುರೇಶ್, ಜೆಡಿಎಸ್ ಅಧಿಕಾರವಿರುವ ಗ್ರಾಮ ಪಂಚಾಯಿತಿಗಳನ್ನು ಗುರಿಯಾಗಿರಿಸಿಕೊಂಡು, ತಮ್ಮ ಸಂಸದ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡು, ಜೆಡಿಎಸ್ ಕಾರ್ಯಕರ್ತರ, ಜನಪ್ರತಿನಿಧಿಗಳಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಐದು ಪ್ರಮುಖ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ನಿರ್ಲಕ್ಷ್ಯತೋರಿ ಕುಣಿಗಲ್ ಕ್ಷೇತ್ರಕ್ಕೆ ಮೋಸ ಮಾಡಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿಯವರು ಸಂಸದರಾಗಿದ್ದಾಗ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಈ ಯೋಜನೆಯನ್ನು ಅನುಷ್ಠಾನಗೊಳಿಸಿ ಟೆಂಡರ್ ಕರೆಯಲಾಗಿತ್ತು. ಆದರೆ ಸುರೇಶ್ ಅವರು ಸಂಸದರಾಗಿ ಆಯ್ಕೆಯಾದ ನಂತರ ಇವುಗಳಿಗೆ ಒತ್ತು ಕೊಟ್ಟು ಯೋಜನೆ ಅನುಷ್ಠಾನಕ್ಕೆ ಶ್ರಮಿಸದೆ, ಕೇವಲ ತಮ್ಮ ಕಾರ್ಯಕರ್ತರ ಮಾತುಗಳನ್ನು ಕೇಳಿಕೊಂಡು ಜೆಡಿಎಸ್ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸುವುದು ಸೇರಿದಂತೆ, ಅಧಿಕಾರ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆಲ್ಲ ನಾವು ಜಗ್ಗಲ್ಲ ಎಂದೂ ಎಚ್ಚರಿಸಿದರು.