ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸುವುದು ಅಗತ್ಯ

Vishwanath S
Updated On : 13 Mar 2014, 1:43 am

ತುಮಕೂರು: ಇಂದಿನ ಕಾಲಘಟ್ಟದಲ್ಲಿ ಮಹಿಳೆಯರು ಮುನ್ನಡೆಯಲು ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಅವಶ್ಯಕತೆ ಇದೆ ಎಂದು ಜನಶಿಕ್ಷಣ ಸಂಸ್ಥೆ ನಿರ್ದೇಶಕಿ ಆರ್.ಎಚ್. ಸುಕನ್ಯ ಪ್ರತಿಪಾದಿಸಿದರು.
ಹೇಮಾದ್ರಿ ಸ್ನಾತಕೋತ್ತರ ಕೇಂದ್ರ ಹಾಗೂ ಹೇಮಾದ್ರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಆದರ್ಶನಗರದ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಗರ ಪ್ರದೇಶಗಳಲ್ಲಿ ಮಹಿಳೆ ಕಲಿತಿದ್ದಾಳೆ. ತಿಳಿಯುವ ಅವಕಾಶಗಳಿವೆ. ಆದರೆ ಗ್ರಾಮೀಣ ಮಟ್ಟದಲ್ಲಿ ಇಂದಿಗೂ ಇದು ಸಾಧ್ಯವಾಗಿಲ್ಲ. ಅಂತಹ ಪ್ರದೇಶದಲ್ಲಿ ಅರಿವು ಮೂಡಿಸುವ ಜೊತೆಗೆ ಬದುಕಿನ ಆತ್ಮವಿಶ್ವಾಸ ಮೂಡಿಸುವ ಆವಶ್ಯಕತೆ ಇದೆ. ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಬದಲಾವಣೆ ಆಕೆಯಲ್ಲಿ ಆದರೆ ಅದು ನಿಜವಾದ ಮಹಿಳಾ ಸಬಲೀಕರಣವಾಗುತ್ತದೆ ಎಂದರು.
ಉನ್ನತ ಸಾಧನೆಗೈದಿರುವ ಮಹಿಳೆಯರ ಹಾದಿಯನ್ನು ನಾವು ಅವಲೋಕಿಸಬೇಕು. ಸ್ವಂತಿಕೆಯಿಂದ ಆರ್ಥಿಕ ಅವಲಂಬನೆ ಪಡೆಯಬೇಕಾದರೆ ಅರಿವು ಹಾಗೂ ತರಬೇತಿ ಮುಖ್ಯ ಎಂದರು.
ಪುರುಷರಿಂದಲೇ ಆಗಬೇಕು: ಮುಖ್ಯ ಅತಿಥಿಗಳಾಗಿದ್ದ ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಹಾಗೂ ವಕೀಲ ಸಾ.ಚಿ.ರಾಜಕುಮಾರ್ ಮಾತನಾಡಿ ಈ ವರ್ಷದ ಘೋಷವಾಕ್ಯ ಬದಲಾವಣೆಗೆ ಪ್ರೇರಣೆ ಎಂಬುದಾಗಿದೆ. ಈ ಬದಲಾವಣೆ ಪುರುಷರಿಂದಲೇ ಆಗಬೇಕು. ಮಹಿಳಾ ದಿನಾಚರಣೆಯನ್ನು ಕೇವಲ ಮಹಿಳೆಯರೇ ಸೇರಿಕೊಂಡು ಆಚರಿಸುವ ಬದಲು ಪುರುಷರೂ ಭಾಗಿಯಾಗಿ ಆಚರಿಸುವಂತಾಗಬೇಕು. ಆಗ ಸಮಸ್ಯೆಗಳ ಆಳ ಹಾಗೂ ಪರಸ್ಪರ ವಿಚಾರ ವಿನಿಮಯಕ್ಕೆ ಅರ್ಥ ಸಿಗುತ್ತದೆ ಎಂದರು.
ಸಾಧ್ಯವಿಲ್ಲ: ಕ್ರಾಂತಿಕಾರಿ ಮಾತುಗಳಿಂದ ಸಮಾಜದಲ್ಲಿ ಸಮಾನತೆ ತರಲು ಸಾಧ್ಯವಿಲ್ಲ. ಇದು ಸಾಧ್ಯವಾಗುವುದಾಗಿದ್ದರೆ ಸಂವಿಧಾನ ಬಂದು ಇಷ್ಟು ವರ್ಷಗಳಾದರೂ ಪರಿಚ್ಛೇದ 14 ರ ಸಮಾನತೆಯನ್ನು ನಿಜವಾದ ಅರ್ಥದಲ್ಲಿ ಇನ್ನೂ ಗುರಿಮುಟ್ಟಲು ಏಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿ, ಪರಸ್ಪರ ಗೌರವಯುತವಾದ ಬದುಕು ಹಾಗೂ ಪ್ರೀತಿಪೂರ್ವಕ ನಡೆಗಳು ಬದಲಾವಣೆಗೆ ಪ್ರೇರಣೆಯಾಗುತ್ತವೆ ಎಂದರು.
ನಗೆ ಬರುತ್ತದೆ: ಇಂದು ಸಮಾಜದ ಅಲ್ಲಲ್ಲಿ ನಡೆಯುತ್ತಿರುವ ಮಹಿಳಾ ದಿನಾಚರಣೆ ಕಾರ್ಯಕ್ರಮಗಳನ್ನು ನೋಡಿದರೆ ನಗೆ ಬರುತ್ತದೆ. 1857  ರಿಂದ ನ್ಯೂಯಾರ್ಕ್ ಸೇರಿದಂತೆ ವಿಶ್ವದ ಹಲವು ಕಡೆ ತಮ್ಮ ಹಕ್ಕುಗಳಿಗಾಗಿ ಮಹಿಳೆಯರು ಹೋರಾಡಿ ಪ್ರಾಣಬಿಟ್ಟರು. ಇಂತಹ ಹೋರಾಟ ಹಾಗೂ ಹಕ್ಕುಗಳನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಮಹಿಳಾ ದಿನಾಚರಣೆ ಚಿಂತನ-ಮಂಥನ ಕಾರ್ಯಕ್ರಮಗಳಾಗಬೇಕೇ ಹೊರತು ಹಬ್ಬದ ರೀತಿ ಸಿಂಗರಿಸಿಕೊಂಡು ನೃತ್ಯ ಪ್ರದರ್ಶಿಸುವ ವೇದಿಕೆಗಳಾಗಬಾರದು ಎಂದರು. ತುಮಕೂರಿನಲ್ಲಿ 1992 ರಿಂದ ಅಸ್ತಿತ್ವಕ್ಕೆ ಬಂದ ವರದಕ್ಷಿಣೆ ವಿರೋಧಿ ವೇದಿಕೆ ಸಾಂತ್ವನ ಕೇಂದ್ರದ ಮೂಲಕ 5 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿ ಇತ್ಯರ್ಥಪಡಿಸುವ ಬಗ್ಗೆ ತಿಳಿಸಿದರು.
10 ವರ್ಷಕ್ಕೂ ಹೆಚ್ಚು ಕಾಲ ಮಹಿಳಾಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಗ್ರಾಮೀಣ ಮಹಿಳೆಯರ  ಪುನಶ್ಚೇತನಕ್ಕೆ ಕಾರಣವಾದ ಆರ್.ಎಚ್. ಸುಕನ್ಯ ಹಾಗೂ ಕಳೆದ 20 ವರ್ಷಗಳಿಂದ ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಾಕಷ್ಟು ಅಬಲೆಯರಿಗೆ ಮಾರ್ಗದರ್ಶನ, ಸಲಹೆ ನೀಡಿರುವ
ಸಾ.ಚಿ.ರಾಜಕುಮಾರ್ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತಾಧಿಕಾರಿ ವಿ.ಟಿ. ತಿಪ್ಪೇಸ್ವಾಮಿ ಸರ್ವರಂಗಗಳಲ್ಲಿ ಕಾರ್ಯಸಾಧನೆ ಮಹಿಳೆಯರದ್ದಾಗಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಪ್ರಾಂಶುಪಾಲ ಬಿ.ಕೆ.ನಟರಾಜು, ವಿ.ಟಿ.ಮೋಹನ್, ಉಪನ್ಯಾಸಕ ಚೇತನ, ನಿಸರ್ಗಪ್ರಿಯ ಶ್ರೀದೇವಿ  ಉಪಸ್ಥಿತರಿದ್ದರು. ಶ್ರುತಿ ಪ್ರಾರ್ಥಿಸಿದರು. ಪ್ರಶಿಕ್ಷಣಾರ್ಥಿ ನಂದಿನಿ ಸ್ವಾಗತಿಸಿ, ಕೆ.ಬಿ. ಸುರೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪೂರ್ಣಿಮ ವಂದಿಸಿದರು. ಅಶ್ವಿನಿ, ಅಣ್ಣಪ್ಪ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement