ವಿದ್ಯಾರ್ಥಿಗಳಲ್ಲಿ ನೈತಿಕತೆ ಹೆಚ್ಚಿಸುವ ಕಾರ್ಯ ರೂಪಿಸುವುದು ಅಗತ್ಯ
ಶಿರಾ: ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಪೈಪೋಟಿ ನೀಡುವಂತ ಉತ್ತಮ ಶಿಕ್ಷಣ ನೀಡಿ, ಹಳ್ಳಿ ವಿದ್ಯಾರ್ಥಿಗಳನ್ನು ಸಜ್ಜು ಮಾಡುವ ಖಾಸಗಿ ಶಾಲೆಗಳ ಸದುದ್ದೇಶ ಇಂದಿನ ಶೈಕ್ಷಣಿಕ ಪ್ರಗತಿಗೆ ದಾರಿದೀಪವಾಗಲಿದೆ ಎಂದು ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಟಿ.ಎಸ್. ಆಂಜಿನಪ್ಪ ಹೇಳಿದರು.
ಅವರು ಶಿರಾ ತಾಲೂಕಿನ ಬರಗೂರು ದಿ. ಫ್ಲಾರೆನ್ ಪಬ್ಲಿಕ್ ಸ್ಕೂಲ್ನ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ನೈತಿಕತೆ ಹೆಚ್ಚಿಸುವಂತ, ದೇಶ ಭಾಷೆ, ಸಂಸ್ಕೃತಿಯನ್ನು ಪೋಷಿಸುವಂತ ಕಾರ್ಯ ರೂಪಿಸುವ ಜೊತೆಗೆ ಸ್ಪರ್ಧಾತ್ಮಕ ಯುಗಕ್ಕೆ ವಿದ್ಯಾರ್ಥಿಗಳನ್ನು ಸಜ್ಜು ಮಾಡುವಂತ ಜವಾಬ್ದಾರಿ ಪ್ರತಿಯೊಬ್ಬ ಶಿಕ್ಷಕ ಹೊಂದಿದಾಗ ಮಾತ್ರ ದೇಶ ಪ್ರಗತಿ ಪರ ರಾಷ್ಟ್ರವಾಗಿ ವಿಶ್ವದಲ್ಲಿಯೇ ಪ್ರಜ್ವಲಿಸಲಿದೆ ಎಂದರು.
ಪ್ರಾಧ್ಯಪಕ ಎಚ್.ಎಸ್. ಸತ್ಯನಾರಾಯಣ ಮಾತನಾಡಿ ನಾಡು-ನುಡಿ, ಸಾಹಿತ್ಯಭಿರುಚಿ, ಸದೃಢತೆ ಮತ್ತು ನೈತಿಕತೆ ವಿದ್ಯಾರ್ಥಿಗಳನ್ನು ಮೈಗೂಡಿಸಿಕೊಂಡು, ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಕಡು ಬಡತನದಲ್ಲಿ ದೇಶ ಮೆಚ್ಚುವಂತ ಕಾರ್ಯಮಾಡಿದ ಡಾ. ಎಪಿಜೆ ಅಬ್ದುಲ್ ಕಲಾಂ ಮತ್ತು ಸರ್.ಎಂ. ವಿಶ್ವೇಶ್ವರಯ್ಯ ಅವರ ಆದರ್ಶಗಳನ್ನು ಪಾಲಿಸುವಂತಾಗಬೇಕೆಂದರು. ವಿದ್ಯಾಸಂಸ್ಥೆಯ ಸಂಸ್ಥಾಪಕ ಬಸವರಾಜು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ರಾಜಕುಮಾರ್ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೆರವೇರಿಸಿದರು. ಸಂಸ್ಥೆಯ ಕಾಯಂದರ್ಶಿ ಮೋಹನ್ರಾಮ್, ಮುಖ್ಯಶಿಕ್ಷಕ ಸಣ್ಣೀರಪ್ಪ, ಶಿಕ್ಷಕಿ ಗಿರಿಜಾ, ಭಾಗ್ಯಮ್ಮ ಇಂತಿಯಾಜ್ ಸೇರಿದಂತೆ ಹಲವರು ಹಾಜರಿದ್ದರು. ಶಾಲಾ ಮಕ್ಕಳ ಸಾಂಸ್ಕಕ ಉತ್ಸವ ಆಕರ್ಷಕವಾಗಿತ್ತು.