ಮತಬೇಟೆಗೆ ಅಭ್ಯರ್ಥಿಗಳು ಸಜ್ಜು
ತುಮಕೂರು: ಬೆಂಗಳೂರಿನ ಭವಿಷ್ಯದ ಉಪನಗರಿ ಹಾಗೂ ಕಲ್ಪತರು ಜಿಲ್ಲೆಯೆಂದೇ ಖ್ಯಾತಿಗಳಿಸಿರುವ ತುಮಕೂರಿನಲ್ಲಿ ಲೋಕಸಭಾ ಚುನಾವಣೆಯ ಗರಿಗೆದರುತ್ತಿದೆ.
ಈಗಾಗಲೇ ಕಾಂಗ್ರೆಸ್ ಹಾಗೂ ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಕಾಂಗ್ರೆಸ್ನಿಂದ ಎಸ್.ಪಿ. ಮುದ್ದಹನುಮೇಗೌಡ, ಬಿಜೆಪಿಯಿಂದ ಹಾಲಿ ಲೋಕಸಭಾ ಸದಸ್ಯ ಜಿ.ಎಸ್. ಬಸವರಾಜು ಕಣಕ್ಕಿಳಿದಿದ್ದಾರೆ. ಜೆಡಿಎಸ್ ಮಾತ್ರ ಅಭ್ಯರ್ಥಿಯನ್ನು ಘೋಷಿಸಬೇಕಾಗಿದೆ.
ತುಮಕೂರು, ಗುಬ್ಬಿ, ಚಿಕ್ಕನಾಯಕನಹಳ್ಳಿ, ಕೊರಟಗೆರೆ, ಮಧುಗಿರಿ, ತಿಪಟೂರು, ತುರುವೇಕೆರೆ ಹಾಗೂ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ತುಮಕೂರು ಲೋಕಸಭಾ ಕ್ಷೇತ್ರದಿಂದ ಕಳೆದ ಬಾರಿ ಬಿಜೆಪಿಯಿಂದ ಜಿ.ಎಸ್. ಬಸವರಾಜು ಆಯ್ಕೆಯಾಗಿದ್ದರು.
ಜೆಡಿಎಸ್ನಿಂದ ಸ್ಪರ್ಧಿಸಿದ್ದ ಮುದ್ದಹನುಮೇಗೌಡ 20 ಸಾವಿರ ಮತಗಳಿಂದ ಪರಾಭವಗೊಂಡಿದ್ದರೆ, ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಕೋದಂಡರಾಮಯ್ಯ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಯಾರಾಗುತ್ತಾರೆ ದಳಪತಿ: ಹಳೇ ಮೈಸೂರು ಪ್ರಾಂತ್ಯದಲ್ಲಿ ತುಮಕೂರು ಜೆಡಿಎಸ್ನ ಭದ್ರಕೋಟೆ. ಈಗಾಗಲೇ ಇಲ್ಲಿ 6 ಮಂದಿ ಜೆಡಿಎಸ್ ಶಾಸಕರಿದ್ದಾರೆ. ಜಿಲ್ಲಾ ಪಂಚಾಯತ್ ಕೂಡ ಜೆಡಿಎಸ್ ವಶದಲ್ಲಿದೆ. ತುಮಕೂರು ಮಹಾನಗರ ಪಾಲಿಕೆಯಲ್ಲಿ ಅತಿ ಹೆಚ್ಚು ಸದಸ್ಯರು ಜೆಡಿಎಸ್ನಿಂದ ಆಯ್ಕೆಯಾಗಿದ್ದಾರೆ. ಇಷ್ಟಾದರೂ ಈವರೆಗೆ ತುಮಕೂರಿನಿಂದ ಸಿ.ಎನ್. ಭಾಸ್ಕರಪ್ಪ ಮಾತ್ರ ಆಯ್ಕೆಯಾಗಿದ್ದಾರೆ. ಅವರು ಜಾತಿಯಲ್ಲಿ ಕುರುಬರಾಗಿದ್ದರು. ಹೀಗಾಗಿ ಒಕ್ಕಲಿಗ ಮತ್ತು ಹಿಂದುಳಿದ ವರ್ಗ ಕಾಂಬಿನೇಷನ್ ಮೂಲಕ ಅಭ್ಯರ್ಥಿ ಹಾಕುವ ಇರಾದೆಯನ್ನು ಜೆಡಿಎಸ್ ಹೊಂದಿದೆ.
ಈಗಾಗಲೇ ಜೆಡಿಎಸ್ ರಾಜ್ಯಾಧ್ಯಕ್ಷ ಎ. ಕೃಷ್ಣಪ್ಪ ಅಭ್ಯರ್ಥಿಯಾಗುವ ಸಂಭವವಿದೆ. ಇದರ ಬೆನ್ನಲ್ಲೇ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಎಂ.ಆರ್. ಹುಲಿನಾಯ್ಕರ್ ಅವರನ್ನು ಕಣಕ್ಕೆ ಇಳಿಸುವ ಇರಾದೆ ಕೂಡ ಜೆಡಿಎಸ್ಗೆ ಇದೆ. ಮತ್ತೊಂದು ಮೂಲಗಳ ಪ್ರಕಾರ ಒಕ್ಕಲಿಗರ ಮತಗಳನ್ನು ಉಳಿಸಿಕೊಳ್ಳುವ ಸಲುವಾಗಿ ಒಕ್ಕಲಿಗರಿಗೆ ಟಿಕೆಟ್ ನೀಡುವ ಯೋಚನೆ ಇದೆ ಎನ್ನಲಾಗಿದೆ.
2009 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಬಿಜೆಪಿಗೆ ಬಂದು ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾಗಿದ್ದ ಬಸವರಾಜು ಮೊದಲಿನಿಂದಲೂ ಬಿಜೆಪಿ ನಾಯಕರ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದರು ಎಂಬುದು ಮೂಲ ಬಿಜೆಪಿಗಳ ವಾದವಾಗಿತ್ತು. ಯಡಿಯೂರಪ್ಪ ಬೆಂಬಲಿಗರಾಗಿದ್ದ ಬಸವರಾಜು ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ಅವರ ಜತೆ ಹೋಗಿದ್ದರು. ಆಗ ಬಿಜೆಪಿ ಹೈಕಮಾಂಡ್ ಬಸವರಾಜು ಅವರನ್ನು ಅಮಾನತುಪಡಿಸಿತ್ತು. ಅಮಾನತ್ತಾಗಿದ್ದ ಬಸವರಾಜು ಬಹಿರಂಗವಾಗಿಯೇ ಕೆಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಜತೆ ಗುರುತಿಸಿಕೊಳ್ಳತೊಡಗಿದರು. ಇನ್ನೇನು ಟಿಕೆಟ್ ತಪ್ಪಿ ಹೋಗುತ್ತದೆ ಎಂದೇ ಬಿಜೆಪಿಯವರು ನಿರೀಕ್ಷಿಸಿದ್ದರು. ಅಲ್ಲದೇ ಬಿಜೆಪಿ ಜಿಲ್ಲಾ ಘಟಕ ಈ ಬಾರಿ ಸೊಗಡು ಶಿವಣ್ಣ ಹಾಗೂ ಎಂ.ಬಿ. ನಂದೀಶ್ ಅವರನ್ನು ತನ್ನ ಅಭ್ಯರ್ಥಿಯೆಂದು ಶಿಫಾರಸು ಮಾಡಿ ಕಳುಹಿಸಿಕೊಟ್ಟಿತ್ತು. ಸೊಗಡು ಶಿವಣ್ಣನವರಿಗೆ ಟಿಕೆಟ್ ಎಂದು ವ್ಯಾಖ್ಯಾನಿಸಲಾಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ಬಿಜೆಪಿ ಹಾಲಿ ಸಂಸದರಿಂಗೆ ಮಣೆ ಹಾಕಿದೆ.
ಮುದ್ದಹನುಮೇಗೌಡರ ಕಥೆ ಏನು
ಇವರು ಕೂಡ ಕಾಂಗ್ರೆಸ್ನಿಂದ ಜೆಡಿಎಸ್ಗೆ ವಲಸೆ ಬಂದಿದ್ದರು. ಕಳೆದ 2009 ರ ಚುನಾವಣೆಯಲ್ಲಿ ಜೆಡಿಎಸ್ ಇವರಿಗೆ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡಿತ್ತು. ಮುದ್ದಹನುಮೇಗೌಡ ಹಾಗೂ ಜಿ.ಎಸ್. ಬಸವರಾಜು ನಡುವೆ ತುರುಸಿನ ಸ್ಪರ್ಧೆ ಏರ್ಪಾಟಾಗಿತ್ತು. ಆದರೆ 20 ಸಾವಿರ ಮತಗಳ ಅಂತರದಿಂದ ಮುದ್ದಹನುಮೇಗೌಡ ಪರಾಭವಗೊಳ್ಳುವಂತಾಯಿತು.
ಆದರೆ 2013 ರ ವಿಧಾನಸಭಾ ಚುನಾವಣೆಯಲ್ಲಿ ಮುದ್ದಹನುಮೇಗೌಡ ತುಮಕೂರು ಗ್ರಾಮಾಂತರ ಅಥವಾ ಕುಣಿಗಲ್ ಅಥವಾ ತುಮಕೂರು ನಗರ ಜೆಡಿಎಸ್ ಅಭ್ಯರ್ಥಿಯಾಗುವ ಒಲವು ಹೊಂದಿದ್ದರು. ಆದರೆ ಜೆಡಿಎಸ್ ವರಿಷ್ಠರು ಮುದ್ದಹನುಮೇಗೌಡರಿಗೆ ಟಿಕೆಟ್ ನೀಡದ ಕಾರಣ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಪರಮೇಶ್ವರ್ ಅವರ ಬೆಂಬಲಿಗರಾದ ಮುದ್ದಹನುಮೇಗೌಡರಿಗೆ ಕಾಂಗ್ರೆಸ್ ಈಗ ಮಣೆ ಹಾಕಿದೆ. ಅವರೀಗ 2014 ರ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ.
ಕಳೆದ ಚುನಾವಣೆಯ ಫಲಿತಾಂಶ....
ಜಿ.ಎಸ್. ಬಸವರಾಜು (ಬಿಜೆಪಿ) 331064
ಮುದ್ದಹನುಮೇಗೌಡ (ಜೆಡಿಎಸ್) 309619
ಕೋದಂಡರಾಮಯ್ಯ (ಕಾಂಗ್ರೆಸ್) 177726
ಗೌರಿಶಂಕರ ಸ್ವಾಮೀಜಿ (ಪಕ್ಷೇತರ) 28923
ಅಶೋಕ (ಬಿಎಸ್ಪಿ) 15044
-ಉಗಮ ಶ್ರೀನಿವಾಸ್