ಯಡಿಯೂರಪ್ಪನವರೇ ನಿಮಗೆ ಗುಡ್ ಬೈ... ಎಂ.ಡಿ.ಎಲ್
ತುರುವೇಕೆರೆ: ಯಡಿಯೂರಪ್ಪನವರೇ ರಾಜ್ಯದ ಲಕ್ಷಾಂತರ ಕಾರ್ಯಕರ್ತರು ಮುಖಂಡರು ನಿಮ್ಮ ಬೆಂಬಲಕ್ಕೆ ನಿಂತಿದ್ದೆವು. ಕೆಜೆಪಿ ಕಟ್ಟಿ ಕೇವಲ ಒಂದು ವರ್ಷ ಕಳೆದಿರಲಿಲ್ಲ. ನಾವೆಲ್ಲಾ ನಿಮ್ಮ ಸಂಗಡ ಇದ್ದು ರಾಜ್ಯಾದ್ಯಂತ ಅಭೂತಪೂರ್ವ ಜನಮನ್ನಣೆಯನ್ನು ಗಳಿಸಲು ನಮ್ಮೆಲ್ಲಾ ಕಾರ್ಯಕರ್ತರ ಶ್ರಮ ಅಪರಿಮಿತ. ಆದರೆ ತಾವು
ಕೆಜೆಪಿ ಯನ್ನು ತೊರೆದು ಬಿಜೆಪಿ ಸೇರ್ಪಡೆಯಾಗುವ ವೇಳೆ ಕೆಜೆಪಿ ಯಲ್ಲಿದ್ದವರನ್ನೆಲ್ಲಾ ತಮ್ಮೊಟ್ಟಿಗೆ ತೆಗೆದುಕೊಂಡು ಹೋಗುವುದಾಗಿ ಹೇಳಿ ಹೋಗಿದ್ದ ತಾವು ಸ್ವಾರ್ಥಸಾಧನೆ ಮಾಡಿಕೊಂಡಿದ್ದು ಎಷ್ಟು ಸರಿ.
-ಹೀಗೆ ಯಡಿಯೂರಪ್ಪನವರಿಗೆ ಪತ್ರ ಬರೆದು ತಮ್ಮ ಆಕ್ರೋಶವನ್ನು ಹೊರಗೆಡವಿದ್ದು ಬೇರ್ಯಾರೂ ಅಲ್ಲ -ಯಡಿಯೂರಪ್ಪನವರ ಬಲಗೈ ಬಂಟನೆದೇ ಕರೆಸಿಕೊಂಡಿದ್ದ ವಿಧಾನ ಪರಿಷತ್ ಸದಸ್ಯ ಹಾಗೂ ಕೆಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಎಂ.ಡಿ.ಲಕ್ಷ್ಮೀನಾರಾಯಣ್.
ಬಿಜೆಪಿ ಸೇರ್ಪಡೆಯಾದ ನಂತರ ಯಡಿಯೂರಪ್ಪನವರು ಕೇವಲ ಶೋಭಾ ಕರಂದ್ಲಾಜೆ ಹಾಗೂ ಉದಾಸಿಯವರ ಹಿತ ರಕ್ಷಣೆ ಮಾಡಿದರೇ ಹೊರೆತು ತಮಗಾಗಿ ಹಗಲಿರುಳು ದುಡಿದು ಇಂದು ಮೂಲೆಗುಂಪಾಗುತ್ತಿರುವ ಅವರ ಪರಮ ಆಪ್ತರನ್ನು ಕಡೆಗಣಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಇಂದಲ್ಲಾ ನಾಳೆ ಯಡಿಯೂರಪ್ಪನವರಿಗೆ ಬಿಜೆಪಿಯಲ್ಲಿ ನಮಗೆ ಬಂದಿರುವ ಸ್ಥಿತಿ ಬಂದರೂ ಆಶ್ಚರ್ಯವಿಲ್ಲ ಎಂದಿರುವ ಎಂ.ಡಿ.ಲಕ್ಷ್ಮೀನಾರಾಯಣ್ ಯಡಿಯೂರಪ್ಪನವರು ಕೇವಲ ಲಿಂಗಾಯತರನ್ನು ಮಾತ್ರ ಓಲೈಸಿದರೆ ಹೊರೆತು ಹಿಂದುಳಿದ ವರ್ಗಗಳ ಜನರ, ಮುಖಂಡರ ರಕ್ಷಣೆ ಮಾಡುವ ಮನಸ್ಸು ಮಾಡಲೇ ಇಲ್ಲ ಎಂದಿದ್ದಾರೆ. ನಂಬಿದವರನ್ನು ಕೈಬಿಟ್ಟ ಯಡಿಯೂರಪ್ಪನವರು ಕೇವಲ ಕೆಲವೇ ಜನರ ಸ್ವಾರ್ಥಸಾಧನೆಗೆ ಇಳಿದದ್ದು ದುರಂತವೇ ಸರಿ ಎಂದಿದ್ದಾರೆ.
ಭಾನುವಾರ ಕಾಂಗ್ರೆಸ್ ಸೇರ್ಪಡೆ: ತಾವು ಹಿಂದುಳಿದ ಜನಾಂಗದ ಹಾಗೂ ದೇವಾಂಗ ಜನಾಂಗದ ಮುಖಂಡರಾಗಿದ್ದು ಲಕ್ಷಾಂತರ ಬೆಂಬಲಿಗರು ಇದ್ದಾರೆ. ಅಲ್ಲದೇ ಕೆಜೆಪಿಯನ್ನು ರಾಜ್ಯ ಮಟ್ಟದಲ್ಲಿ ಬೆಳೆಸುವ ವೇಳೆ ರಾಜ್ಯದ ವಿವಿಧ ಜನಾಂಗದ ಮುಖಂಡರೂ ಸಹ ತಮ್ಮೊಂದಿಗಿದ್ದಾರೆ. ನಂಬಿಕೆ ದ್ರೋಹ ಮಾಡಿದ ಯಡಿಯೂರಪ್ಪನವರೊಂದಿಗೆ ಇರಲು ಮನಸ್ಸು ಬಾರದ ಹಿನ್ನೆಲೆಯಲ್ಲಿ ಭಾನುವಾರ ತಮ್ಮ ಬೆಂಬಲಿಗರ ಬೃಹತ್ ಸಭೆ ಕರೆದು ಅಲ್ಲಿ ಕಾಂಗ್ರೆಸ್ ಪಕ್ಷ ಸೇರುವ ಸ್ಪಷ್ಟ ನಿಲುವು ತೆಗೆದುಕೊಳ್ಳುವುದಾಗಿ ಎಂ.ಡಿ.ಲಕ್ಷ್ಮೀನಾರಾಯಣ್ ಪತ್ರಿಕೆಗೆ ತಿಳಿಸಿದ್ದಾರೆ. ತಮ್ಮೊಂದಿಗೆ ಕಳೆದ ಬಾರಿ ಕೆಜಿಪಿಯಿಂದ ಸ್ಪರ್ಧಿಸಿ ಕೆಲವೇ ಮತಗಳ ಅಂತರದಿಂದ ಪರಾಭವಗೊಂಡಿದ್ದ ಮಸಾಲೆ ಜಯರಾಂ ಅವರನ್ನೂ ಸಹ ಕಾಂಗ್ರೆಸ್ಗೆ ಸೇರಿಸಿಕೊಳ್ಳುವುದಾಗಿ ಲಕ್ಷ್ಮೀನಾರಾಯಣ್ ತಿಳಿಸಿದ್ದಾರೆ.