ಕಾಂಗ್ರೆಸ್ ಹೆಸರಿನಲ್ಲಿ ನಡೆವ ಪಾದಯಾತ್ರೆಗೆ ವಿರೋಧ
ಚಿಕ್ಕನಾಯಕನಹಳ್ಳಿ: ತಾಲೂಕಿನ ಶೆಟ್ಟೀಕೆರೆಯಿಂದ ಚಿ.ನಾ.ಹಳ್ಳಿಯ ವರಗೆ ಮಾ.17 ರಂದು ನಡೆಸಲು ಉದ್ದೇಶಿಸಿರುವ ಭಾರತ ನಿರ್ಮಾಣ ಪಾದಯಾತ್ರೆ ಪಕ್ಷದ ಅಧಿಕೃತ ಕಾರ್ಯಕ್ರಮವಲ್ಲ. ಆದ್ದರಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ನಾವು ಯಾರು ಭಾಗವಹಿಸುವುದಿಲ್ಲ ಎಂದು ಮಾಜಿ ಶಾಸಕ ಬಿ.ಲಕ್ಕಪ್ಪ ನುಡಿದರು.
ಅವರು ಭಾನುವಾರ ಪಕ್ಷದ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಮೇಲೆ ಸ್ಪರ್ಧಿಸಿದ್ದ ಸಾಸಲು ಸತೀಶ್, ವಿರೋಧ ಪಕ್ಷದ ಜೊತೆ ಒಳ ಒಪ್ಪಂದ ಮಾಡಿಕೊಂಡು ಠೇವಣಿಯಿಲ್ಲದ ರೀತಿಯಲ್ಲಿ ಸೋತು ಪಕ್ಷದ ಮರ್ಯಾದೆಯನ್ನು ಹಾಳುಮಾಡಿರುವ ವ್ಯಕ್ತಿಯನ್ನು ನಾವು ಮುಖಂಡನೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ.
ಚುನಾವಣೆಯಲ್ಲಿ ಬೂತ್ ಮಟ್ಟದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆಯದೆ, ಬೂತ್ ಏಜೆಂಟ್‌ಗಳನ್ನು ನೇಮಿಸದೆ ಚುನಾವಣೆಯನ್ನು ಹಗುರವಾಗಿ ಪರಿಗಣಿಸಿದ ಪರಿಣಾಮ ಪಕ್ಷದ ಮರ್ಯಾದೆ ಹರಾಜಿಟ್ಟ ವ್ಯಕ್ತಿ ಕೆಲವೇ ಮಂದಿಯನ್ನು ಜೊತೆಗಿಟ್ಟುಕೊಂಡು ನಾನೇ ಪಕ್ಷದ ಸರ್ವೋಚ್ಚ ನಾಯಕ ಎಂದು ಬಿಂಬಿಸಿಕೊಳ್ಳುವ ಪ್ರಯತ್ನಕ್ಕೆ ನಮ್ಮ ವಿರೋಧವಿದೆ.
ಪಕ್ಷದ ಲೋಕಸಭಾ ಅಭ್ಯರ್ಥಿ ಬಗ್ಗೆ ನಮ್ಮ ವಿರೋಧವಿಲ್ಲ. ಅವರ ಗೆಲವಿಗಾಗಿ ನಾವು ಕಟಿಬದ್ಧರಾಗಿದ್ದೇವೆ. ಆದರೆ 17 ರಂದು ಸದರಿ ವ್ಯಕ್ತಿ ಶೆಟ್ಟೀಕೆರೆಯಿಂದ-ಚಿ.ನಾ.ಹಳ್ಳಿಯವರಗೆ ನಡೆಸಲಿರುವ ಪಾದಯಾತ್ರೆ ಆತನ ಏಕಪಕ್ಷೀಯ ನಿರ್ಧಾರವಾಗಿದ್ದು, ನಾವು ಯಾರು ಅದನ್ನು ಬೆಂಬಲಿಸಲ್ಲ. ಅದಕ್ಕೂ ನಮಗೂ ಸಂಬಂಧವಿಲ್ಲ. ಪಕ್ಷದ ವಿಚಾರದಲ್ಲಿ ನಾವು ಮಾಡುವ ಕಾರ್ಯಕ್ರಮಗಳೆ ಅಧಿಕೃತ ಎಂದರು.
ಆದ್ದರಿಂದ ಮಾ.17ರಂದು ಪಕ್ಷದ ಕಚೇರಿಯಲ್ಲಿ ಸಭೆ ಸೇರಿ ಕಂದಿಕೆರೆಯಿಂದ-ಚಿ.ನಾ.ಹಳ್ಳಿಯವರಗೆ ಪಾಯಾತ್ರೆ ನಡೆಸಲು ದಿನಾಂಕ ನಿಶ್ಚಯಿಸಲಾಗುವುದು ಎಂದರು.
ಹೊಸದಾಗಿ ನೇಮಿಸಿ: ಇಲ್ಲಿಯವರಗೆ ಪಕ್ಷದಲ್ಲಿ ಸ.ಬಸವರಾಜು ಮತ್ತು ಸೀಮೆಎಣ್ಣೆ ಕೃಷ್ಣಯ್ಯನವರು ನಾನು ಅಧ್ಯಕ್ಷ, ನಾನು ಅಧ್ಯಕ್ಷ ಎಂಬ ಹೇಳಿಕೆಗಳಿಂದ ಗೊಂದಲ ಮೂಡಿತ್ತು. 10 ತಿಂಗಳಿಂದ ಪಕ್ಷದ ಕಚೇರಿಯಲ್ಲಿ ಯಾವುದೇ ರಾಷ್ಟ್ರೀಯ ಹಬ್ಬಗಳನ್ನು ಆಚರಿಸಲಿಲ್ಲ. ಅಧ್ಯಕ್ಷರು ಯಾರು ಎಂಬ ಬಗ್ಗೆ ಗೊಂದಲ ಬಗೆಹರಿಸುವ ನಿಟ್ಟಿನಲ್ಲಿ ಬ್ಲಾಕ್‌ನ ಎಲ್ಲಾ ಕಾರ್ಯಕರ್ತರು ಮಾರ್ಚ್ 1 ರಂದು ಸಭೆ ಸೇರಿ ಠರಾವು ಮಾಡಿಕೊಂಡು ಡಿಸಿಸಿ ಮತ್ತು ಕೆಪಿಸಿ ಅಧ್ಯಕ್ಷರಿಗೆ ಬ್ಲಾಕ್ ಅಧ್ಯಕ್ಷರನ್ನು ಹೊಸದಾಗಿ ನೇಮಕ ಮಾಡುವವರೆಗೆ, ಚುನಾವಣೆಯ ದೃಷ್ಟಿಯಿಂದ ಅಡ್‌ಹಾಕ್ ಕಮಿಟಿ ಮಾಡುವಂತೆ ಮನವಿ ಸಲ್ಲಿಸಿದ್ದೇವೆ.
ವರಿಷ್ಠರಿಂದ ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ. ಹಾಗೆ ಒಂದು ಚುನಾವಣಾ ಪ್ರಚಾರ ಸಮಿತಿಯನ್ನು ರಚಿಸಿ, ಬ್ಲಾಕ್‌ನ ಚುನಾವಣಾ ಉಸ್ತುವಾರಿಯನ್ನು ಪ್ರಚಾರ ಸಮಿತಿಗೆ ವಹಿಸುವಂತೆಯು ಕೋರಿದ್ದೇವೆ. ಪಕ್ಷದ ಅಭ್ಯರ್ಥಿ ಗೆಲವಿಗೆ ಶ್ರಮಿಸಲು ತೀರ್ಮಾನಿಸಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿ.ಲಕ್ಕಪ್ಪ, ಎಚ್.ಬಿ.ಎಸ್. ನಾರಾಯಣಗೌಡ, ಧರಣಿ, ಕೆ.ಜಿ.ಕೃಷ್ಣೇಗೌಡ, ಸಾದರಹಳ್ಳಿ ಮಲ್ಲಿಕಾರ್ಜುನ, ಸೈಯ್ಯದ್ ಪೀರ್ ಪಾಷ, ಪುರಸಭಾ ಸದಸ್ಯ ಸಿ.ಪಿ.ಮಹೇಶ್, ಎಸ್ಸಿ ಘಟಕದ ಪರಮೇಶ್, ಕುರುಬರಹಳ್ಳಿ ಶಿವಣ್ಣ, ಹಿಂದುಳಿದ ವರ್ಗಗಳ ಮುಖಂಡ ತೀರ್ಥಪುರ ವಾಸು ಮುಂತಾದವರಿದ್ದರು