ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪ್ರಯಾಣಿಕರ ತಂಗುದಾಣದ ದುಸ್ಥಿತಿ....

Vishwanath S
Updated On : 17 Mar 2014, 1:35 am

ಸುಮಾರು ಹತ್ತು ವರ್ಷಗಳ ಹಿಂದೆ 6 ಲಕ್ಷ ರು. ವೆಚ್ಚದಲ್ಲಿ ಚಿಕ್ಕನಾಯಕನಹಳ್ಳಿಯಲ್ಲಿ ನಿರ್ಮಿಸಿದ ತಂಗುದಾಣ ಪುರಸಭೆಯ ನಿರ್ಲಕ್ಷದಿಂದಾಗಿ ಹೂವಿನ ಮಾರುಕ್ಟಟೆಯಾಗಿ ಪರಿವರ್ತನೆಯಾಗಿದ್ದರೂ ಕೇಳುವರಿಲ್ಲದಂತಾಗಿದೆ. ಮಳೆ, ಗಾಳಿ, ಬಿಸಿಲುಗಳಿಂದ ರಕ್ಷಣೆ ಪಡೆಯಲು ಜನರಿಗೆ ಕುಳಿತುಕೊಳ್ಳುವ ಆಸನಗಳನ್ನು ವ್ಯವಸ್ಥಿತವಾಗಿ ನಿರ್ಮಿಸಿದ್ದ  ತಂಗುದಾಣವನ್ನು ಕೆಲವು ಮಂದಿ ಹೂವಿನ ಮಾರಾಟಗಾರರು ತಮ್ಮ ಸ್ವಂತ ಆಸ್ತಿಯಂತೆ ಅತಿಕ್ರಮಿಸಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಂದ ಅನೇಕ ದೂರುಗಳನ್ನು ಕೊಟ್ಟರು ಪುರಸಭೆ ಕ್ರಮಕೈಗೊಳ್ಳು ಮೀನಮೇಷ ಎಣಿಸುತ್ತಿದೆ. ಪ್ರಯಾಣಿಕರೇನಾದರು ಬಿಸಿಲಿನಿಂದ ರಕ್ಷಣೆ ಪಡೆಯಲು ತಂಗುದಾಣದ ಕೆಳಗೆ ನಿಲ್ಲಲು ಹೋದರೆ ಅಂಗಡಿಗಳ ಮುಂದೆ ನಿಲ್ಲದಂತೆ ಪ್ರಾಣಿಗಳನ್ನು ಗದರುವ ರೀತಿಯಲ್ಲಿ  ಗದರುವುದಲ್ಲದೆ, ಮೈ ಮೇಲೆ ನೀರನ್ನು ಎರಚಿ ಅಮಾನವೀಯವಾಗಿ ವರ್ತಿಸುತ್ತಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಹೂವಿನ ಮಾರುಕಟ್ಟೆಯನ್ನು ಬೇರೆಡೆಗೆ ಸ್ಥಳಾಂತರಿಸಿ ಪ್ರಯಾಣಿಕರ ತಂಗು ದಾಣವನ್ನು ಪ್ರಯಾಣಿಕರ ಅನುಕೂಲಕ್ಕೆ ನೀಡುವುದು ಒಳಿತು ಎನ್ನುವುದು ನಾಗರಿಕರ ಒತ್ತಾಯವಾಗಿದೆ.
ಕುಲಗೆಟ್ಟ ರಸ್ತೆಗಳು...
ಚಿ.ನಾ.ಹಳ್ಳಿಯಿಂದ-ತಿಪಟೂರಿಗೆ ಪ್ರತಿನಿತ್ಯ ಸುಮಾರು 60 ರಿಂದ70 ಬಸ್‌ಗಳು ಸಂಚರಿಸುತ್ತವೆ. ತಿಪಟೂರು ಕಲಾ ಕೇಂದ್ರವಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದು, ಈ ಭಾಗದ ಜನ ತಮ್ಮ ದಿನಿತ್ಯದ ಬೇಕು
ಬೇಡಗಳಿಗಾಗಿ  ತಿಪಟೂರಿಗೆ ಪ್ರಯಾಣಿಸುತ್ತಿರುತ್ತಾರೆ.
ಆದರೆ ಸದರಿ ರಸ್ತೆಯ ಸ್ಥಿತಿ ಅಯೋವುವಾಗಿದೆ. ರಸ್ತೆಗಳೆಲ್ಲಾ ಕೆಟ್ಟು ಕುಲಗೆಟ್ಟು ಹೋಗಿವೆ. ಕೇವಲ ಅರ್ಧ ಗಂಟೆಯಲ್ಲಿ ಸಂಚರಿಸುವ ದೂರವನ್ನು 1 ಗಂಟೆ ಸಂಚರಿಸಬೇಕಾಗಿದೆ. ಇದರಿಂದ ಜನರ ಸಮಯ ಹಾಳು. ಇದರ ಜೊತೆಗೆ ಒಮ್ಮೆ ತಿಪಟೂರಿಗೆ ಹೋಗಿಬಂದರೆ ದಿನವೆಲ್ಲಾ ವಿಶ್ರಾಂತಿ ಪಡೆಯಬೇಕು. ಆದ್ದರಿಂದ ಜನ
ಕೆ.ಬಿ.ಕ್ರಾಸ್ ಮಾರ್ಗವಾಗಿ ತಿಪಟೂರಿಗೆ ಸಂಚರಿಸುವುದರಿಂದ ಜನರಿಗೆ ಪ್ರಯಾಣ ದರ ದುಪ್ಪಟ್ಟಾಗಿದೆ.                          
ಈಶ್ವರ ದೇವಾಲಯದ ಶಿಖರ ಶಿಥಿಲ, ತಕ್ಷಣ ಕ್ರಮಕೈಗೊಳ್ಳಿ
ಶಿರಾ ತಾಲೂಕಿನ ಬರಗೂರು ಗ್ರಾಮದ ಐತಿಹಾಸಿಕ ಹಿನ್ನೆಲೆಯುಳ್ಳ ಈಶ್ವರ ದೇವಾಲಯದ ಶಿಖರ ಶಿಥಿಲವಾಗಿ ಗೋಡೆಗಳು ಬಿರುಕು ಬಿಟ್ಟು ವರುಷಗಳು ಕಳೆಯುತ್ತಿವೆ. ಆದರೂ ಈ ಬಗ್ಗೆ ಸಂಬಂಧ ಪಟ್ಟ ಇಲಾಖೆಯಾಗಲೀ, ಅಧಿಕಾರಿಗಳಾಗಲೀ ಇತ್ತ ಕಡೆ ಗಮನ ಹರಿಸಿ ಐತಿಹಾಸಿಕ ದೇವಾಲಯವನ್ನು ಕಾಪಾಡದೆ ನಿರ್ಲಕ್ಷಿಸಿದ್ದಾರೆ. ಇತಿಹಾಸ ಪ್ರಸಿದ್ಧ ಸ್ಥಳವೂ ಆಗಿರುವ ಬರಗೂರು ಗ್ರಾಮದಲ್ಲಿ ಈಶ್ವರ ದೇವಾಲಯ, ಶ್ರೀವೀರಮ್ಮನ ದೇವಾಲಯ, ಶ್ರೀ ಆಂಜನೇಯ ಸ್ವಾಮಿ ದೇವಾಲಯ ಇನ್ನು ಹಲವಾರು ದೇವಸ್ಥಾನಗಳಿರುವುದಲ್ಲದೆ.  ಒಂದೊಂದು ದೇಗುಲವೂ ತನ್ನದೆ ಆದ ಪ್ರತ್ಯೇಕ ಇತಿಹಾಸವನ್ನು ಹೇಳುತ್ತವೆ. ಅತಿ ಪ್ರಾಚೀನ ಐತಿಹಾಸ ಹಾಗೂ ಪ್ರಾಮುಖ್ಯತೆ ಗಳಿಸಿರುವ ದೇವಾಲಯವೆಂದರೆ ಈಶ್ವರ ದೇವಾಲಯ. ಶಾಸನಗಳ ಮೂಲಕ ತಿಳಿದು ಬಂದಿರುವ ಅಂಶವೆಂದರೆ  ಇದರ ಸಂಸ್ಥಾಪಕ ಪಲ್ಲವ ಕುಲದ ನೊಳಂಬ ವಂಶದ ಕಂಚಿಯನ್ನಾಳಿದ ರಾಜ ಮಹೇಂದ್ರ.  ನಮ್ಮ ದೌರ್ಭಾಗ್ಯವೆಂದರೆ, ವೈಶಿಷ್ಟಪೂರ್ಣ ದೇವಾಲಯಗಳನ್ನು ಕಾಪಾಡಿಕೊಳ್ಳದೆ ಹೊಸ ದೇವಸ್ಥಾನಗಳನ್ನು ಕಟ್ಟಲು ಮುಂದಾಗುವುದು. ನಮ್ಮ ಧರ್ಮ, ಸಂಸ್ಕೃತಿಯ ಹಿಂದಿನ ತಲೆಮಾರು ದೇವಾಲಯ ನಾಶವಾಗುವ ಮುನ್ನ ಸಂಬಂಧಪಟ್ಟವರು ಗಮನ ಹರಿಸಿ ಐತಿಹಾಸಿಕ ಪ್ರಾಮುಖ್ಯತೆ ಹೊಂದಿರುವ ಮಹೇಂದ್ರೇಶ್ವರ ದೇವಾಲಯದ ಜೀರ್ಣೋದ್ಧಾರ ಮಾಡಿ ಮುಂದಿನ ತಲೆಮಾರಿಗೆ ಉಳಿಸಲು ಮುಂದಾಗಬೇಕೆಂದು ಗ್ರಾಮಸ್ಥರ ಒತ್ತಾಯವಾಗಿದೆ.
ಪುರಸಭೆ ಸ್ವತ್ತಾದ ಮರಗಳನ್ನು ರಕ್ಷಿಸಿ
ಕುಣಿಗಲ್ ಪುರಸಭೆ ವ್ಯಾಪ್ತಿಯಲ್ಲಿ ಇರುವ ಹಲವು ಮರಗಳ ಬಗ್ಗೆ ಸ್ಥಳೀಯ ಪುರಸಭೆ ಸಿಬ್ಬಂದಿಗಳು ಸೂಕ್ತ ನಿರ್ವಹಣೆ ಮತ್ತು ಲೆಕ್ಕ ಇಡದ ಕಾರಣ ಪುರಸಭೆ ಸ್ವತ್ತಾದ ಮರಗಳು ಖಾಸಗಿಯವರ ಪಾಲಾಗುತ್ತಿದೆ. ಪಟ್ಟಣದ ಮೆರೆಗು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ವೃಕ್ಷ ಸಂಪತ್ತು ನಶಿಸುತ್ತಿದ್ದು, ಸಂಬಂಧಪಟ್ಟ ವಿಭಾಗದವರು ಎಚ್ಚೆತ್ತು ಕ್ರಮ ಕೈಗೊಳ್ಳಬೇಕಿದೆ.
ಕುಣಿಗಲ್ ಪಟ್ಟಣವು ಸರಿಸುಮಾರು ಎಂಟು ಚದರ ಕಿಮಿ ವಿಸ್ತೀರ್ಣ ಹೊಂದಿದ್ದ ಸುಮಾರು 136 ಕಿಮಿ ರಸ್ತೆಯನ್ನು, ಆರಕ್ಕೂ ಹೆಚ್ಚು ಉದ್ಯಾನವನಗಳನ್ನು ಹೊಂದಿದೆ. ಪುರಸಭೆಗೆ ಸೇರಿದ ರಸ್ತೆ, ನಿವೇಶನ ಪಾರ್ಕ್ ಗಳಲ್ಲಿರುವ ಹಲವು ಮರಗಳ ಬಗ್ಗೆ, ವೃಕ್ಷ ಸಂಪತ್ತಿನ ಬಗ್ಗೆ ಪುರಸಭೆ ಸಿಬ್ಬಂದಿ ಪುರಸಭೆ ರಚನೆಯಾದಾಗಿನಿಂದ ಇದುವರೆಗೆ ಸಮರ್ಪಕ ದಾಖಲೆ ನಿರ್ವಹಣೆ ಮಾಡದ ಕಾರಣ ಇಂದು ಪುರಸಭೆಗೆ ಸೇರಿದ ಮರಗಳು ಬಿದ್ದರೆ ಅಥವಾ ಖಾಸಗಿಯವರು ಕಟ್ಟಡ ನಿರ್ಮಾಣಕ್ಕೆ ಅಡ್ಡಿಯಾದರೆ ಯಾರಿಂದಲೂ ಅನುಮತಿ ಪಡಯದೆ ತಾವೇ ಕತ್ತರಿಸಿ ಸಾಗಿಸುತ್ತಿದ್ದಾರೆ.
 ಹಳೇ ಮರಗಳು ಅಥವಾ ದುಃಸ್ಥಿತಿಯಲ್ಲಿರುವ ಮರಗಳನ್ನು ಗುರುತಿಸಿ ಪುರಸಭೆಯ ಪರಿಸರ ವಿಭಾಗದ ಸಿಬ್ಬಂದಿ ಸೂಕ್ತ ಕ್ರಮ ಕೈಗೊಂಡು ಹರಾಜು ಮಾಡಿ, ಮರವನ್ನು ವಿಲೆಮಾಡಿ ಪುರಸಭೆಗೆ ಅನುದಾನ ಜಮೆ ಮಾಡಿ, ಈ ಅನುದಾನದ ಜೊತೆ ಬೇರೆ ಯೋಜನೆಗಳ ಅನುದಾನ ಸೇರಿಸಿ ಪಟ್ಟಣದ ವ್ಯಾಪ್ತಿಯಲ್ಲಿ ಪಟ್ಟಣ ಸೌಂದರ್ಯ ಹೆಚ್ಚಿಸಿ, ಆರೋಗ್ಯಕರ ಪರಿಸರ ಕಾಪಾಡಲು ಮತ್ತಷ್ಟು ಗಿಡಗಳನ್ನು ನೆಟ್ಟು ಪೋಷಿಸಬೇಕಿದೆ. ಆದರೆ ಪುರಸಭೆಯ ಸಂಬಂಧಪಟ್ಟ ವಿಭಾಗದ ಸಿಬ್ಬಂದಿ ಯಾವುದೇ ಕ್ರಮ ಕೈಗೊಳ್ಳದ ಕಾರಣ ಹಲವು ಸಮಸ್ಯೆಗೆ ಕಾರಣವಾಗಿದ್ದು ಇನ್ನಾದರೂ ಎಚ್ಚೆತ್ತು ಅಗತ್ಯ ಕ್ರಮ ಕೈಗೊಂಡು ಪಟ್ಟಣದಲ್ಲಿನ ವೃಕ್ಷ ಸಂಪತ್ತನ್ನು ಉಳಿಸಿ, ಬೆಳೆಸಲು ಕ್ರಮ ಕೈಗೊಳ್ಳಬೇಕಿದೆ.
< ಮಂಜುನಾಥ, ಕರವೆ ತಾಲೂಕು ಅಧ್ಯಕ್ಷ
ಶೌಚಾಲಯಕ್ಕೂ ಬೀಗಮುದ್ರೆ
ದೇಶವನ್ನು ನಿರ್ಮಲಭಾರತ ಅಭಿಯಾನ ಯೋಜನೆಯಲ್ಲಿ ಶೌಚಾಲಯ ಮುಕ್ತ ರಾಷ್ಟ್ರವನ್ನಾಗಿ ಮಾಡುಬೇಕೆಂದು ಸರ್ಕಾರ ಕೋಟ್ಯಂತರ ರು. ಗಳನ್ನು ಖರ್ಚು ಮಾಡುತ್ತಿದೆ. ಆದರೆ ಇಲ್ಲಿನ ಪುರಸಭೆ ಲಕ್ಷಾಂತರ ರು.ಗಳ ವೆಚ್ಚದಲ್ಲಿ ನಿರ್ಮಿಸಿರುವ ಶೌಚಾಲಯವನ್ನು ಜನರ ಉಪಯೋಗಕ್ಕೆ ನೀಡದೆ ಬೀಗ ಹಾಕಿಕೊಂಡು ಕುಳಿತಿದೆ. ಈಗ ವರ್ಷಗಳ ಹಿಂದೆ 4.50ಲಕ್ಷ ರು. ಗಳ ವೆಚ್ಚದಲ್ಲಿ ಟೆಂಡರ್ ಕರೆದು ನಿರ್ಮಿಸಿದ ಶೌಚಾಲಯದ ಟೆಂಡರ್ ಬಾಬ್ತು ಹಣವನ್ನು ಕಾಮಗಾರಿ ಪೂರ್ಣಗೊಂಡರು, ಎಂಜಿನಿಯರ್ ಬೇಜವಾಬ್ದಾರಿಯಿಂದ  ಗುತ್ತಿಗೆದಾರನಿಗೆ ಬಿಲ್ ಮಾಡಿಕೊಡದ ಪರಿಣಾಮ ಸದರಿ ಗುತ್ತಿಗೆದಾರ ಶೌಚಾಲಯ ಬೀಗವನ್ನು ಪುರಸಭೆ ವಶಕ್ಕೆ ನೀಡಿರುವುದಿಲ್ಲ. ಇನ್ನಾದರೂ ಪುರಸಭೆ ಮಧ್ಯಪ್ರವೇಶಿಸಿ ಗುತ್ತಿಗೆದಾರನ ಹಣ ಪಾವತಿಸಿ ಸಾರ್ವಜನಿಕರಿಗೆ ಶೌಚಾಲಯ ಸೌಕರ್ಯ ನೀಡಬೇಕೆಂಬುದು ಜನರ ಆಗ್ರಹವಾಗಿದೆ.
ಮಾಂಸ ಮಾರುಕಟ್ಟೆ: ತೊಂದರೆ
ಸಿಕ್ಕಸಿಕ್ಕ ಜಾಗಗಳಲ್ಲಿ ಮಾಂಸ ಮಾರಾಟ ಮಾಡುವುದನ್ನು ತಪ್ಪಿಸಿ ಒಂದೇ ಕಡೆ ಮಾರಾಟ ಕೇಂದ್ರ ನಿರ್ಮಿಸುವ ಉದ್ದೇಶದಿಂದ 2006-07ರಲ್ಲಿ 15 ಲಕ್ಷ ರು. ವೆಚ್ಚದಲ್ಲಿ ಚಿಕ್ಕನಾಯಕನಹಳ್ಳಿ ಪುರಸಭೆಯ ಮುಕ್ತನಿಧಿಯಿಂದ  ನಿರ್ಮಿಸಿದ್ದ ಮಾಂಸ ಮಾರಾಟ ಕೇಂದ್ರ ವ್ಯವಹಾರವನ್ನೇ ಬಂದ್ ಮಾಡಿದೆ. ಜನರ ಆರೋಗ್ಯದ ಉದ್ದೇಶ ಮಹತ್ವದ್ದಾಗಿದ್ದು, ಒಂದೇ ಕಡೆ, ಶುದ್ಧವಾದ ಸ್ಥಳದಲ್ಲಿ, ಗುಣಮಟ್ಟದ ಮಾಂಸ ಮಾರಾಟ ಮಾಡುವುದು. ಅದಕ್ಕೂ ಮೊದಲು ಮಾಂಸಕ್ಕಾಗಿ ಕತ್ತರಿಸುವ ಪ್ರಾಣಿಯನ್ನು ಪಶುವೈದ್ಯರು ತಪಾಸಿಸಿ ಬಳಕೆಗೆ ಯೋಗ್ಯವೆಂಬ ಸರ್ಟಿಫಿಕೇಟ್ ನೀಡುವುದು ಕಡ್ಡಾಯ. ಇದರಿಂದ ಜನರಿಗೆ ರೋಗದ ಮತ್ತು ವಯಸ್ಸಾದ ಕಳಪೆ ಗುಣಮಟ್ಟದ ಮಾಂಸವನ್ನು ಮೋಸದಿಂದ ಮಾರಾಟ ಮಾಡುವ ದಂಧೆಯನ್ನು ತಪ್ಪಿಸುವ ಸದುದ್ದೇಶದ್ದಾಗಿತ್ತು. ಆದರೆ ಉದ್ದೇಶ ಮಾತ್ರ ಈಡೇರಲಿಲ್ಲ. 15ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿದ ಮಾರಾಟ ಕೇಂದ್ರ ಗುತ್ತಿಗೆದಾರನಿಗೆ ಬಿಲ್ ಪಾವತಿಸಿದ್ದು, ಪುರಸಭೆ ತನ್ನ ವಶಕ್ಕೆ ಪಡೆದು ಆರು ವರ್ಷಗಳಾದರೂ ಇನ್ನು ಪುರಸಭೆ ಅವುಗಳನ್ನು ಬಾಡಿಗೆದಾರರಿಗೆ ವಿತರಿಸದೆ ಕಾಲಹರಣ ಮಾಡಿದ ಪರಿಣಾಮ ಪುರಸಭೆಯ ಆದಾಯ ಸೋರಿಹೋಗಿದೆ. ಇನ್ನಾದರೂ ಪುರಪಿತೃಗಳು ಇತ್ತ ಕಡೆ ಗಮನಹರಿಸಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement