ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಫ್ಯಾಕ್ಟರಿಗಳಾಗಿರುವ ವಿವಿಗಳು

Vishwanath S
Updated On : 17 Mar 2014, 1:39 am

ತುಮಕೂರು: ಉನ್ನತ ಶಿಕ್ಷಣದಲ್ಲಿ ಖಾಸಗೀಕರಣದ ಹಾವಳಿ ಹೆಚ್ಚಿದ್ದು, ವಿದೇಶಿ ವಿವಿಗಳು ಭಾರತಕ್ಕೆ ಬರುತ್ತಿವೆ. ಬಹುರಾಷ್ಟ್ರೀಯ ಕಂಪನಿಗಳಿಗಾಗಿಯೇ ವಿವಿಗಳಲ್ಲಿ ಪಠ್ಯಕ್ರಮ ರೂಪಿಸಲಾಗುತ್ತಿದ್ದು, ಉನ್ನತ ಶಿಕ್ಷಣದಲ್ಲಿ ಮುಂದಾಗುವ ಅಪಾಯಗಳನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತುಮಕೂರು ವಿವಿ ಉಪಕುಲಪತಿ ಡಾ.ಎ.ಎಚ್. ರಾಜಾಸಾಬ್ ಆತಂಕ ವ್ಯಕ್ತಪಡಿಸಿದರು.
ಅವರು ತುಮಕೂರು ವಿವಿ ಕಾಲೇಜು ಅಧ್ಯಾಪಕರ ಒಕ್ಕೂಟದ ವತಿಯಿಂದ ಏರ್ಪಾಟಾಗಿದ್ದ ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ನಾವಿಂದು ತುಂಬಾ ನಾಜೂಕಾದ ಕಾಲಘಟ್ಟದಲ್ಲಿದ್ದೇವೆ. ಸರ್ಕಾರಿ ವಿವಿ ಜತೆಗೆ ಡೀಮ್ಡ್ ವಿವಿಗಳಿವೆ. ಖಾಸಗಿ ವಿವಿಗಳಿವೆ. ಡೈರೆಕ್ಟೆಡ್ ವಿವಿಗಳು, ವಿದೇಶಿ ವಿವಿಗಳು ಬರುತ್ತಿವೆ. ಬಹುರಾಷ್ಟ್ರೀಯ ಕಂಪನಿಗಳಿಗಾಗಿಯೇ ಪಠ್ಯಕ್ರಮ ರೂಪಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿರುವ ನಾವು ವಿವಿಗಳನ್ನು ಉನ್ನತ ಶಿಕ್ಷಣದ ಕೇಂದ್ರಗಳೆಂದು ಕರೆಯುವುದು ಹೇಗೆ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. ಖಾಸಗಿ ಕಂಪನಿಗಳಿಗಾಗಿಯೇ ಪಠ್ಯಕ್ರಮ ರಚಿಸುತ್ತಿರುವ ಸಂದರ್ಭದಲ್ಲಿ ವಿವಿಗಳ ಘನತೆಗೆ ಕುಂದುಂಟಾಗುತ್ತಿದ್ದು, ಅವುಗಳನ್ನು ಫ್ಯಾಕ್ಟರಿಗಳೆಂದು ಕರೆಯುವುದು ಲೇಸು ಎಂದು ಮಾರ್ಮಿಕವಾಗಿ ನುಡಿದರು. ಸರ್ಕಾರಿ ರಂಗದ ವಿವಿಗಳಲ್ಲಿ ಶುಲ್ಕ ನೂರು, ಸಾವಿರದ ಲೆಕ್ಕದಲ್ಲಿದ್ದು, ಜನಸಾಮಾನ್ಯರ ಕೈ ಗೆಟುಕುವಂತಿದ್ದರೆ, ಮೆಡಿಕಲ್, ಎಂಜಿನಿಯರಿಂಗ್, ಖಾಸಗಿ, ಡಿಮ್ಡ್, ವಿದೇಶಿ ವಿವಿಗಳಲ್ಲಿ ಲಕ್ಷ, ಕೋಟಿ ರು.ಗಳಲ್ಲಿರುತ್ತದೆ.  ಈ ಖಾಸಗಿ  ಶಿಕ್ಷಣ ಸಂಸ್ಥೆಗಳು ಯಾರಿಗಾಗಿ ಇವೆ ಎಂಬುದರ ಕುರಿತು ತುರ್ತಾಗಿ ಚರ್ಚಿಸಬೇಕಾಗಿರುವ ಸಂದರ್ಭ ಬಂದೊದಗಿದೆ ಎಂದರು.   
ಖಾಸಗಿ ವಿವಿಗಳು ಮೂಲಭೂತ ಶಿಕ್ಷಣ ನೀಡಲು ಬಂದಿಲ್ಲ. ಜನ ಸಾಮಾನ್ಯರಿಗೆ ನಿಲುಕುವುದಿಲ್ಲ. ಸ್ವದೇಶದಲ್ಲಿ 2 ಸೆಮಿಸ್ಟರ್, ವಿದೇಶದಲ್ಲಿ 2 ಸೆಮಿಸ್ಟರ್ ಎಂದು ಉನ್ನತ ಶಿಕ್ಷಣವನ್ನು ವಿಭಜಿಸುವ ಯೋಜನೆಗಳೂ ಇವೆ. ಮಾರುಕಟ್ಟೆಗೆ ತಕ್ಕಂತೆ ಪಠ್ಯಕ್ರಮ ರೂಪಿಸುತ್ತಿರುವ ಕಾಲಘಟ್ಟದಲ್ಲಿದ್ದೇವೆ. ದೇಶ ಸಂದಿಗ್ಧ ಪರಿಸ್ಥಿತಿಯಲ್ಲಿದೆ.  ಉನ್ನತ ಶಿಕ್ಷಣ ಆತಂಕ ಎದುರಿಸುತ್ತಿದೆ ಎಂದರು.
1500 ಸರ್ಕಾರಿ ವಿವಿಗಳು ಬೇಕು: 2013 ರಲ್ಲಿ ಸರ್ಕಾರದ ಪ್ರಕಾರ ದೇಶದಲ್ಲಿ 672 ವಿಶ್ವ ವಿದ್ಯಾಲಯಗಳಿವೆ. ಜ್ಞಾನ ಆಯೋಗದ ಶಿಫಾರಸಿನಂತೆ ಎಲ್ಲರಿಗೂ ಉನ್ನತ ಶಿಕ್ಷಣ ನೀಡಲು ಇರುವ ವಿವಿಗಳನ್ನು ಸೇರಿ ಒಟ್ಟು 1500 ವಿವಿಗಳು ಬೇಕು ಎಂದರು.
ಸಂಬಳ ಹೆಚ್ಚಿದೆ, ಗುಣಮಟ್ಟ ಬಂದಿಲ್ಲ
ಮೇಸ್ಟ್ರುಗಳ ಸಂಬಳ ಹೆಚ್ಚಿದೆ. ಆದರೆ ಶೈಕ್ಷಣಿಕ ಗುಣಮಟ್ಟ ಸಂಬಳಕ್ಕೆ ತಕ್ಕಂತೆ ಬಂದಿಲ್ಲ. ಇದು ತಮ್ಮ ವೈಯಕ್ತಿಕ ಅಭಿಪ್ರಾಯ ಎಂದು ತುಮಕೂರು ವಿವಿ ಕುಲಪತಿ ಡಾ.ಎ.ಎಚ್. ರಾಜಾಸಾಬ್ ಮಾರ್ಮಿಕವಾಗಿ ನುಡಿದರು. ತಮ್ಮ ಸಂಬಳ ಒಂದು ಲಕ್ಷ ಮೀರಿದೆ. ಆದರೆ ತಮಗೆ ಪಾಠ ಮಾಡಿದ ಮೇಷ್ಟುಗಳ ಸಂಬಳ 10-15-20 ಸಾವಿರ ಮುಟ್ಟಿದ್ದರೆ ಅದೇ ಹೆಚ್ಚು. ಆದರೆ ಅಂದಿದ್ದ ಶಿಕ್ಷಣದ ಗುಣಮಟ್ಟ, ಸಾಮಾಜಿಕ ಕಳಕಳಿ ಇಂದಿದೆಯೇ ಎಂಬುದು ಪ್ರಶ್ನಾರ್ಹವಾಗಿದೆ. ಈ ನಿಟ್ಟಿನಲ್ಲಿ ಅಧ್ಯಾಪಕರು ಚಿಂತಿಸಬೇಕಿದೆ. ಗುಣಮಟ್ಟ ಮನಸ್ಸಿಗೆ ಸಂಬಂಧಿಸಿದ್ದು, ಜೇಬು ಕೊಳ್ಳುಬಾಕ ಸಂಸ್ಕೃತಿಗೆ ಸಂಬಂಧಿಸಿದ್ದು. ಶಿಕ್ಷಣದಲ್ಲಿ ಉತ್ತಮ ಗುಣಮಟ್ಟ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement