ಗೆಲವು ನನ್ನದೇ: ಎ. ಕೃಷ್ಣಪ್ಪ ವಿಶ್ವಾಸ
ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ತಾವು ಗೆಲ್ಲುವುದು ಶತಃಸಿದ್ಧ ಎಂಬ ವಿಶ್ವಾಸವನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಅಭ್ಯರ್ಥಿ ಎ. ಕೃಷ್ಣಪ್ಪ ವ್ಯಕ್ತಪಡಿಸಿದ್ದಾರೆ.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ತುಮಕೂರು ಕ್ಷೇತ್ರ ತಮಗೆ ಪರಿಚಯವಿದೆ. ದೊಡ್ಡ ಕಾರ್ಯಕರ್ತರ ಪಡೆ ಇದೆ. ಹೀಗಾಗಿ ಗೆಲವು ನನ್ನದೇ ಎಂದು ತಿಳಿಸಿದರು. ಜಿಲ್ಲೆಯ ಎಲ್ಲಾ ಶಾಸಕರು ಮನಃಪೂರ್ವಕವಾಗಿ ತಮ್ಮ ಪರ ಕೆಲ ಮಾಡುತ್ತಾರೆ. ಅಲ್ಲದೇ ಅತಿ ಹೆಚ್ಚು ಮಂದಿ ಜೆಡಿಎಸ್ ಶಾಸಕರು ಈ ಕ್ಷೇತ್ರ ವ್ಯಾಪ್ತಿಯಲ್ಲಿ ಇದ್ದಾರೆ. ಜಿ.ಪಂ. ಕೂಡ ನಮ್ಮ ಪಕ್ಷದ ವಶದಲ್ಲಿದೆ. ಹಾಗೆಯೇ ಪುರಸಭೆ, ಪ.ಪಂಚಾಯತ್, ಎಪಿಎಂಸಿ ಎಲ್ಲವೂ ಜೆಡಿಎಸ್ ವಶದಲ್ಲಿದೆ. ಇವೆಲ್ಲ ಕೂಡ ನಮಗೆ ಅನುಕೂಲವಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ತಾವು ಹೊರಗಿನವರು ಎಂದು ವಿರೋಧ ಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಕೃಷ್ಣಪ್ಪ ನರೇಂದ್ರ ಮೋದಿ, ವೀರಪ್ಪ ಮೊಯ್ಲಿ ಅವರು ತಮ್ಮ ಸ್ವಕ್ಷೇತ್ರದಲ್ಲಿ ನಿಲ್ಲುತ್ತಿದ್ದಾರಾ ಎಂದು ಪ್ರಶ್ನಿಸಿದರು.
ಮೂರ್ಖತನದ ಹೇಳಿಕೆ: ಕೃಷ್ಣಪ್ಪ ಹೊರಗಿನವರು. ಅವರಿಗೆ ಇಲ್ಲಿಯ ಸಂಸ್ಕೃತಿ ಗೊತ್ತಿಲ್ಲ ಎಂಬ ಮುದ್ದಹನುಮೇಗೌಡರ ಹೇಳಿಕೆಗೆ ಗರಂ ಆದ ಕೃಷ್ಣಪ್ಪ ಇದು ಮುದ್ದಹನುಮೇಗೌಡರ ಮೂರ್ಖತನದ ಹೇಳಿಕೆ ಎಂದು ಹರಿಹಾಯ್ದರು. ನಾನು ಈಗಾಗಲೇ ಪಕ್ಷದ ವತಿಯಿಂದ ಹಲವಾರು ಹುದ್ದೆಗಳನ್ನು ಅಲಂಕರಿಸಿದ್ದೇನೆ. ವೀಕ್ಷಕನಾಗಿ ಕೆಲಸ ನಿರ್ವಹಿಸಿದ್ದೇನೆ. ಮುದ್ದಹನುಮೇಗೌಡರು ಕೋರ್ಟ್‌ಗೆ ಹೋಗಿದ್ದು ಬಿಟ್ಟರೆ ಮತ್ತೇನನ್ನೂ ಮಾಡಿಲ್ಲ ಎಂದು ಟೀಕಿಸಿದರು.
ಈ ಬಾರಿ ಜೆಡಿಎಸ್‌ಗೆ ರಾಜ್ಯದೆಲ್ಲೆಡೆ ಒಲವು ವ್ಯಕ್ತವಾಗಿದೆ. ತುಮಕೂರು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದರೆ ತಾವು ಈ ಕ್ಷೇತ್ರದ ಜನರ ಪರವಾಗಿ ಸಂಸತ್‌ನಲ್ಲಿ ಹೋರಾಡುವ ಭರವಸೆ ನೀಡಿದರು. ತುಮಕೂರು ಜಿಲ್ಲೆ ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳ ಬಗ್ಗೆ ತಮಗೆ ಅರಿವಿದೆ. ಮುಂದಿನ ದಿನಗಳಲ್ಲಿ ಈ ಎಲ್ಲಾ ಸಮಸ್ಯೆಗಳನ್ನು ನೀಗಿಸಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಕೃಷ್ಣಪ್ಪ ತಿಳಿಸಿದರು.
ಸಮಾನ ವೈರಿ: ತಮಗೆ ಬಿಜೆಪಿ ಹಾಗೂ ಕಾಂಗ್ರೆಸ್ ಸಮಾನ ವೈರಿಗಳು. ತಮ್ಮ ಗೆಲುವು ನಿಶ್ಚಿತ ಎಂದು ತಿಳಿಸಿದು. ತುಮಕೂರು ಜೆಡಿಎಸ್ ಜಿಲ್ಲಾಧ್ಯಕ್ಷ ಡಾ. ಎಂ.ಆರ್. ಹುಲಿನಾಯ್ಕರ್ ನೇತೃತ್ವದಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಾಜಿ ಸಚಿವ ಚನ್ನಿಗಪ್ಪ ಸೇರಿದಂತೆ ಎಲ್ಲಾ ಶಾಸಕರು ತಮ್ಮ ಗೆಲವಿಗೆ ಕಂಕಣ ಬದ್ಧರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದರು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಸಾಧನೆಗಳು ತಮ್ಮ ಗೆಲವಿಗೆ ಸಹಾಯವಾಗಲಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕ ತಿಮ್ಮರಾಯಪ್ಪ, ಮಾಜಿ ಶಾಸಕ ಬಿ. ಸತ್ಯನಾರಾಯಣ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ.ಆರ್. ಹುಲಿನಾಯ್ಕರ್, ಶಿಲಾನಾಯಕ್, ವೀರಭದ್ರಯ್ಯ,, ಗೂಳಿಹಟ್ಟಿ ಶೇಖರ್ ಇತರರು ಇದ್ದರು.
ನಾಳೆ ಕೃಷ್ಣಪ್ಪ ನಾಮಪತ್ರ
ತುಮಕೂರು: ಜೆಡಿಎಸ್ ರಾಜ್ಯಾಧ್ಯಕ್ಷ, ತುಮಕೂರು ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಎ.ಕೃಷ್ಣಪ್ಪ ಮಾ.19ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಸ್ಪರ್ಧಿಸುತ್ತಿದ್ದೇನೆ. ರಾಜ್ಯದೆಲ್ಲೆಡೆ ಜೆಡಿಎಸ್ ಪರವಾದ ಅಲೆ ಇದೆ. ಈ ಬಾರಿ ಜೆಡಿಎಸ್ ರಾಜ್ಯದಲ್ಲಿ 15 ಕ್ಷೇತ್ರಗಳಲ್ಲಿ ಗೆಲವು ಸಾಧಿಸಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.