ಮಹಿಳಾ ದಿನ ಆಚರಣೆಗಷ್ಟೇ ಸೀಮಿತವಾಗದಿರಲಿ: ಮಂಜುನಾಥ
ತುಮಕೂರು: ಪ್ರತಿ ವರ್ಷ ನಾವೆಲ್ಲರು ಬಹಳಷ್ಟು ಆಚರಣೆಗಳನ್ನು ಆಚರಿಸುತ್ತೇವೆ. ಆದರೆ ಆ ಆಚರಣೆಗಳ ಉದ್ದೇಶವನ್ನು ಎಷ್ಟರಮಟ್ಟಿಗೆ ಅನುಷ್ಠಾನಕ್ಕೆ ತರುತ್ತೇವೆ ಎಂಬುದು ಮುಖ್ಯ. ಈ ಹಿನ್ನೆಲೆಯಲ್ಲಿ ಬೆಳಕು ಯುವ ಸಂಘದ ಸದಸ್ಯರು ಪ್ರಾರಂಭಿಸಿರುವ ಈ ಕಾರ್ಯಕ್ರಮಗಳನ್ನು ಕೇವಲ ಆಚರಣೆಗಷ್ಟೆ ಸೀಮಿತ ಮಾಡದೆ ಮಹಿಳೆಯರ ಸರ್ವತೋಮುಖ ಸಬಲೀಕರಣಕ್ಕೆ ಸಹಾಯವಾಗುವಂತೆ ಕಾರ್ಯಚಟುವಟಿಕೆಗಳನ್ನು ವರ್ಷವಿಡೀ ಹಮ್ಮಿಕೊಳ್ಳಬೇಕು ಎಂದು ಸಿ.ಎಂ.ಸಿ.ಎ ನಿರ್ದೇಶಕ ಡಾ. ಮಂಜುನಾಥ ಸದಾಶಿವ ಹೇಳಿದರು.
ಅವರು ಗುಬ್ಬಿ ತಾಲೂಕು ರಂಗನಹಳ್ಳಿ ತಾಳೆಕೊಪ್ಪ ಗ್ರಾಮದ ಬೆಳಕು ಯುವ ಸಂಘ, ಸಿಎಮ್ಸಿಎ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಜಂಟಿಯಾಗಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕುರಿತು ಮಾತನಾಡಿದರು. ಶಾರದ ಮಠದ ಶ್ರೀಮಾತಾಜಿ ಅವರು ಮಾತನಾಡಿ ಮಹಿಳೆಯರು ತಮ್ಮ ದಿನನಿತ್ಯದ ಕರ್ತವ್ಯದ ಜೊತೆಯಲ್ಲೆ ತಮ್ಮ ಹಾಗೂ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ನಿವೇದಿತ ಮತ್ತು ಮದರ್ ತೆರೆಸಾರಂತಹ ಮಹಿಳೆಯರನ್ನು ಮಾದರಿಯಾಗಿ ತೆಗೆದುಕೊಂಡು ಮುನ್ನಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಅಂಕಸಂದ್ರ ಸರ್ಕಾರಿ ಪ್ರೌಢಶಾಲೆ ಮತ್ತು ರಂಗನಹಳ್ಳಿ ಕೆ.ಎನ್ ಗ್ರಾಮಾಂತರ ಪ್ರೌಢಶಾಲೆಯ ಪೌರಕ್ಲಬ್ ಸದಸ್ಯರಿಗೆ ಪ್ರಮಾಣಪತ್ರವನ್ನು ಶಾಲೆಗಳಿಗೆ ಸ್ಮರಿಣಿಕೆಯನ್ನು ವಿತರಿಸಿದರು. ಸಿಜ್ಞಾ ಯುವ ಸಂವಾದ ಕೇಂದ್ರದ ಯುವಜನ ತಂಡದವರು ಮಹಿಳೆಯರ ಕುರಿತಾದ ಹಾಡುಗಳನ್ನು ಹಾಡಿದ್ದು ಕಾರ್ಯಕ್ರಮದ ಅರ್ಥವನ್ನು ಧ್ವನಿಸಿತು.
ಎಸ್.ಎಸ್.ಎಲ್.ಸಿ ಯಲ್ಲಿ ಉತ್ತಮ ಅಂಕ ಪಡೆದ ಇಬ್ಬರು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಒಕ್ಕೂಟದ ಅಧ್ಯಕ್ಷೆ ಶಾಂತಮ್ಮ, ಸಂಯೋಜನಾಧಿಕಾರಿ ಲಕ್ಷ್ಮಣ್, ಅಂಕಸಂದ್ರ ಗ್ರಾ.ಪಂ ಮಾಜಿ ಅಧ್ಯಕ್ಷ ಕಾಂತರಾಜು, ಸಿ.ಎಮ್.ಸಿ.ಎ ಯುವ ಜನ ಕಾರ್ಯಕರ್ತ ತಿಪ್ಪೇಸ್ವಾಮಿ ಕೆ.ಟಿ. ಶಾಲಾ ಮುಖ್ಯಶಿಕ್ಷಕ ರಂಗನಾಥಪ್ಪ, ಗ್ರಾ.ಪಂ. ಸದಸ್ಯರಾದ ಭೀಮಯ್ಯ, ಸಂಘದ ಕಾರ್ಯದರ್ಶಿ ಉಮೇಶ್, ನಿರ್ದೇಶಕರಾದ ಶಶಿಧರ್, ಲಿಖಿತ್, ಇನ್ನಿತರರು ಭಾಗವಹಿಸಿದ್ದರು.
ಅಂಕಸಂದ್ರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 18 ಸಂಘಗಳಿಂದ ಸುಮಾರು 150 ಕ್ಕೂ ಹೆಚ್ಚು ಮಹಿಳೆಯರು ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು.