ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ರಾತ್ರಿ 10 ರ ನಂತರ ಧ್ವನಿವರ್ಧಕ ಬಳಕೆ ನಿಷೇಧ: ಜಿಲ್ಲಾಧಿಕಾರಿ

Mainashree
Updated On : 18 Mar 2014, 12:50 pm

ತುಮಕೂರು: ಲೋಕಸಭಾ ಚುನಾವಣೆಗೆ ಪ್ರಚಾರ ಕೈಗೊಳ್ಳಲು ಕೆಲವು ನಿಬಂಧನೆಗಳಿಗೊಳಪಟ್ಟಿದ್ದು  ರಾಜಕೀಯಪಕ್ಷಗಳು ಮತ್ತು ಅಭ್ಯರ್ಥಿಗಳು ಧ್ವನಿವರ್ಧಕಗಳನ್ನು ರಾತ್ರಿ 10 ರಿಂದ ಬೆ.6 ರವರೆಗೆ ಬಳಸುವುದನ್ನು ನಿಷೇಧಿಸಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ತಿಳಿಸಿದ್ದಾರೆ.
ಮೋಟಾರು ವಾಹನ ಕಾಯ್ದೆ ಅಥವಾ ಸ್ಥಳೀಯ ಕಾಯ್ದೆಗಳಿಗನುಗುಣವಾಗಿ ವಾಹನಗಳ ಮೂಲಕ ಧ್ವನಿವರ್ಧಕ ಬಳಸಿ ಪ್ರಚಾರ ಮಾಡುವುದಕ್ಕೆ ಅನುಮತಿ ನೀಡಲಿದ್ದು, ರಾತ್ರಿ 10 ರ ನಂತರ ಚುನಾವಣಾ ಕಾರ್ಯಗಳಿಗೆ ಅಥವಾ ಸಾರ್ವಜನಿಕ ಸಭೆಗಳಿಗೆ ಧ್ವನಿವರ್ಧಕ ಬಳಸಲು ಅನುಮತಿ ನೀಡಲಾಗುವುದಿಲ್ಲ.  
ರಾತ್ರಿ 10 ಗಂಟೆಯ ನಂತರ ಸಭೆ, ಸಮಾರಂಭ, ಇನ್ಯಾವುದೇ ಕಾರ್ಯಗಳಿಗೆ ಧ್ವನಿವರ್ಧಕಗಳನ್ನು ಬಳಸಿದಲ್ಲಿ ಸದರಿ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.  ವಾಹನಗಳ ಮೂಲಕ ಧ್ವನಿವರ್ಧಕ ಬಳಸಿ ಪ್ರಚಾರ ಮಾಡಲಿಚ್ಛಿಸುವ ಅಭ್ಯರ್ಥಿಗಳು ಅಥವಾ ರಾಜಕೀಯ ಪಕ್ಷಗಳು ವಾಹನಗಳ ನೋಂದಣಿ ದಾಖಲೆ ಸಹಿತ ಸಂಪೂರ್ಣ ಮಾಹಿತಿಯನ್ನು ಅನುಮತಿ ನೀಡುವ ಪ್ರಾಧಿಕಾರಕ್ಕೆ ಸಲ್ಲಿಸಬೇಕಾಗುತ್ತದೆ.  ಈ ರೀತಿ ಸಲ್ಲಿಸಲಾದ ವಾಹನ ನೋಂದಣಿ ದಾಖಲಾತಿಯನ್ನು ಪ್ರಚಾರಕ್ಕೆ ತೆರಳುವ ಮಾರ್ಗಗಳಿಗೆ ಅನ್ವಯಿಸುವ ಸರ್ಕಾರಿ ಪ್ರಾಧಿಕಾರಗಳಿಗೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.   
ಆದರೆ ಮತದಾನ ಪ್ರಕ್ರಿಯೆ ಮುಕ್ತಾಯಗೊಳ್ಳುವ 48 ಗಂಟೆಗಳ ಅವಧಿಗೆ ಮುನ್ನ ಯಾವುದೇ ಕಾರಣಕ್ಕೂ ಯಾವುದೇ ಬಹಿರಂಗ ಪ್ರಚಾರಕ್ಕೆ ಅಥವಾ ವಾಹನಗಳಿಗೆ ಅನುಮತಿಯನ್ನು ನೀಡಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement