ರೈತರ ತುರ್ತು ಸಮಾವೇಶ
ತುಮಕೂರು: ಕೋರ ಹೋಬಳಿ ಚಿಕ್ಕೋನಹಳ್ಳಿ ಬಳಿ ಸೋಮವಾರ ಪವರ್ ಗ್ರಿಡ್ ಯೋಜನೆಗೆ ಒಳಪಡುವ ಜಮೀನುಗಳ ರೈತರ ತುರ್ತು ಸಮಾವೇಶ ರೈತ ಮುಖಂಡ ಕೆ.ಆರ್. ಚಂದ್ರಯ್ಯನವರ ಅಧ್ಯಕ್ಷತೆಯಲ್ಲಿ ನಡೆದು ಕರ್ನಾಟಕ ಪ್ರಾಂತರೈತ ಸಂಘದ ನೇತೃತ್ವದಲ್ಲಿ ಹೋರಾಟ ಸಮಿತಿ ರಚಿಸಲಾಯಿತು.
ಈ ಸಮಾವೇಶದಲ್ಲಿ ಏಕಾ ಏಕೀ ರೈತರ ಜಮೀನುಗಳಲ್ಲಿ ಗುಂಡಿತೋಡಲು ಮತ್ತು ಫಲ ಬಿಡುವ ಮರಗಳನ್ನು ಕತ್ತರಿಸಿ ರೈತರ ಜಮೀನುಗಳನ್ನು ಹಾಳುಮಾಡಿ ಬದುಕನ್ನು ಕಿತ್ತುಕೊಳ್ಳಲು ಮುಂದಾಗಿರುವುದನ್ನು ತೀವ್ರವಾಗಿ ಖಂಡಿಸಿತು. ಸಂವಾದದ ನಂತರ ಕೆಳಕಂಡ ತೀರ್ಮಾನಗಳನ್ನು ಕೈಗೊಳ್ಳಲಾಯಿತು. ರೈತರೊಂದಿಗೆ ಸಂವಾದ ನಡೆಸುವವರೆಗೂ ಯೋಜನೆ ಮುಂದುವರೆಸಲು ರೈತರು ತಮ್ಮ ಜಮೀನುಗಳಲ್ಲಿ ಅವಕಾಶ ನೀಡದಿರಲು ತೀರ್ಮಾನಿಸಲಾಯಿತು. ಏಕಾ ಏಕೀ ಯೋಜನೆ ಜಾರಿಗೊಳಿಸಲು ಮುಂದಾಗಿ ರೈತರನ್ನು ಕತ್ತಲಲ್ಲಿಟ್ಟು ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರು ರೈತರನ್ನು ಪೊಲೀಸರಿಂದ ಬಂಧಿಸಿ ಕ್ರಿಮಿನಲ್ ಮೊಕದ್ದಮೆಯ ಬೆದರಿಕೆ ಹಾಕಿ ಮಾನವ ಹಕ್ಕುಗಳನ್ನು ಉಲ್ಲಂಘಿಸಿರುವವರ ಮೇಲೆ ಮೇಲ್ಕಂಡ ಅಧಿಕಾರಿಗಳು ಸಂಬಂಧಿಸಿದವರ ಮೇಲೆ ಕೂಡಲೇ ಕಾನೂನು ರೀತಿಯ ಶಿಸ್ತುಕ್ರಮ ಜರುಗಿಸಬೇಕು.
ಈ ಸಭೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಅಜ್ಜಪ್ಪ, ಸಹ ಸಂಚಾಲಕರಾದ ಬಿ.ಉಮೇಶ್, ನೌಶಾದ್ ಸೆಹಗನ್, ಪಾಲಾಕ್ಷ ಹಾಗೂ ರೈತ ಮತ್ತು ಯುವ ಮುಖಂಡ ಮಲ್ಲೇಶ್, ಗ್ರಾಮ ಪಂಚಾಯಿತಿ ಸದಸ್ಯ ಸಿದ್ದೇಗೌಡ, ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಹೇಮಲತ, ವಿವಿಧ ಗ್ರಾಮದ ರೈತ ಮುಖಂಡರಾದ ಮಲ್ಲೇಶಯ್ಯ, ಸಿದ್ದಗಂಗಯ್ಯ, ರಾಜಣ್ಣ, ದೇವರಾಜು, ಸಿದ್ದಗಂಗಣ್ಣ, ಕಲ್ಪನ, ಮುಂತಾದವರು ನೇತೃತ್ವ ವಹಿಸಿದ್ದರು.