ಬೆಳೆಹಾನಿ: 22, 23ಕ್ಕೆ ಬೆಳಗಾವಿ ಜಿಲ್ಲೆಗೆ ಕೇಂದ್ರ ತಂಡ
ಬೆಳಗಾವಿ: ಜಿಲ್ಲೆಯಲ್ಲಿ ಇತ್ತೀಚಿಗೆ ಸುರಿದ ಅಕಾಲಿಕ ಮಳೆಯಿಂದಾಗಿ ಉಂಟಾಗಿರುವ ಹಾನಿ ಪರಿಶೀಲಿಸಲು ಕೇಂದ್ರ ತಂಡ ಮಾ.22, 23ರಂದು ಬೆಳಗಾವಿ ಜಿಲ್ಲೆಗೆ ಆಗಮಿಸಲಿದೆ ಎಂದು ಅಪರ ಜಿಲ್ಲಾಧಿಕಾರಿ ಜಿ.ಎಲ್. ಪ್ರವೀಣಕುಮಾರ್ ತಿಳಿಸಿದ್ದಾರೆ.
ಆಲಿಕಲ್ಲು ಮಳೆಯಿಂದ ಜಿಲ್ಲೆಯಲ್ಲಿ ತೋಟಗಾರಿಕೆ ಮತ್ತು ಕೃಷಿ ಬೆಳೆಗಳ ಅಪಾರ ಹಾನಿ ಸಂಭವಿಸಿದೆ. ಈಗಾಗಲೇ ಈ ಹಾನಿಯ ಕುರಿತು ಮುಖ್ಯಮಂತ್ರಿಗಳಿಗೆ ಸಮಗ್ರ ವರದಿ ಸಲ್ಲಿಸಲಾಗಿದೆ. ಮುಖ್ಯಮಂತ್ರಿಗಳೂ ಹಾನಿಗೀಡಾದ ಪ್ರದೇಶಗಳ ಖುದ್ದು ಪರಿಶೀಲಿಸಿದ್ದಾರೆ. ಕೇಂದ್ರ ತಂಡವೂ ಹಾನಿಗೀಡಾದ ರೈತರ ತೋಟಗಳಿಗೆ ಭೇಟಿ ನೀಡಿ ಹಾನಿಯ ಪರಿಶೀಲನೆ ನಡೆಸಲಿದೆ ಎಂದರು. ಕೇಂದ್ರ ತಂಡ ಮಳೆ ಹಾನಿಯ ಪರಿಶೀಲನೆ ಜೊತೆಗೆ ಜಿಲ್ಲೆಯಲ್ಲಿ ಆವರಿಸಿರುವ ಭೀಕರ ಬರಗಾಲದ ಬಗ್ಗೆಯೂ ವಿವಿಧ ತಾಲೂಕಿನಲ್ಲಿ ಪರಿಶೀಲನೆ ನಡೆಸಲಿದೆ. ಈಗಾಗಲೇ ಪ್ರಾಥಮಿಕ ವರದಿ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 260 ಕೋಟಿ ಹಾನಿಯಾಗಿದೆ. ಗ್ರಾಮವಾರು ಸಮೀಕ್ಷೆ ನಡೆಸಿದಾಗ ಈ ಹಾನಿ ಇನ್ನೂ ಜಾಸ್ತಿಯಾಗುವ ನಿರೀಕ್ಷೆ ಇದೆ ಎಂದರು.