ರಾಜ್ಯದ ಹಿತ ಬಲಿಕೊಟ್ಟ ಕಾಂಗ್ರೆಸ್, ಬಿಜೆಪಿ
ತುಮಕೂರು: ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ರಾಜ್ಯದ ಹಿತವನ್ನು ಬಲಿಕೊಟ್ಟು ರಾಜಕಾರಣ ಮಾಡುತ್ತಿವೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ. ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಅವರು ತುಮಕೂರಿನಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಹಾಗೂ ರಾಜ್ಯಾಧ್ಯಕ್ಷ ಎ. ಕೃಷ್ಣಪ್ಪನವರ ನಾಮಪತ್ರ ಸಲ್ಲಿಕೆ ನಂತರ ಮಾತನಾಡಿದರು.
ನೆಲ, ಜಲ, ಭಾಷೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ಒಂದೇ ಧೋರಣೆ ಹೊಂದಿರುವ ಎರಡು ರಾಷ್ಟ್ರೀಯ ಪಕ್ಷಗಳು. ಇವೆರಡೂ ಪಕ್ಷಗಳು ನೇತೃತ್ವ ವಹಿಸುವ ಯುಪಿಎ, ಎನ್ಡಿಎ ಸರ್ಕಾರಗಳ ಧೋರಣೆಯಲ್ಲಿಯೂ ಯಾವುದೇ ವ್ಯತ್ಯಾಸವಿಲ್ಲ ಎಂದು ಹರಿಹಾಯ್ದರು.
ಎಲ್ಲ ವಿಷಯಗಳಲ್ಲಿ ರಾಜ್ಯದ ಹಿತ ಕಾಪಾಡುವಲ್ಲಿ ವಿಫಲವಾಗಿರುವ, ಕುಡಿಯುವ ನೀರಿಗೂ ಭಿಕ್ಷೆ ಬೇಡುವಂತೆ ಮಾಡಿರುವ ಈ ಎರಡೂ ರಾಷ್ಟ್ರೀಯ ಪಕ್ಷಗಳನ್ನು ಚುನಾವಣೆಯಲ್ಲಿ ತಿರಸ್ಕರಿಸುವಂತೆ ಕರೆ ನೀಡಿದ ದೇವೇಗೌಡ, ಪ್ರಾಂತೀಯ ಪಕ್ಷ ಜೆಡಿಎಸ್ ಈ ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಅಖಾಡಕ್ಕಿಳಿದಿದ್ದು,
ಬೆಂಬಲಿಸುವಂತೆ ಮನವಿ ಮಾಡಿದರು.
ನಿಮ್ಮ ಬಲ ಕಾರಣ: ಈ ಇಳಿ ವಯಸ್ಸಿನಲ್ಲೂ ಹೋರಾಟ ಮಾಡೋ ಛಲ ಇದ್ದರೆ ಅದಕ್ಕೆ ನೀವು ಕೊಟ್ಟಿರೋ ಬಲ ಕಾರಣ ಎಂದು ಕಾರ್ಯಕರ್ತರನ್ನು ಪ್ರಶಂಸಿದರು. ಜಾತಿ, ಧರ್ಮ ಮುಖ್ಯವಲ್ಲ ನಮಗೆ, ರಾಜ್ಯದ ಹಿತ ಮುಖ್ಯ. ನಾನು 1994 ರಲ್ಲಿ ಮುಖ್ಯಮಂತ್ರಿಯಾಗಿದ್ದು, ತುಮಕೂರು ಜಿಲ್ಲೆಯಲ್ಲಿ 11 ಜೆಡಿಎಸ್ ಶಾಸಕರನ್ನು ಕೊಡುಗೆಯಾಗಿ ನೀಡಿದ್ದರಿಂದ ಎಂಬುದನ್ನು ಮರೆಯಲಾಗದು. ನಾನು ರಾಜಕಾರಣಕ್ಕೆ ಬಂದು 52 ವರ್ಷಗಳಾಗಿವೆ. ನೀರಾವರಿ, ಲೋಕೋಪಯೋಗಿ, ಮುಖ್ಯಮಂತ್ರಿ, ಪ್ರಧಾನಿಯಾಗಿ ಸೇವೆ ಮಾಡಿದ ಅನುಭವವಿದೆ. ಮಹಿಳಾ ಮೀಸಲಾತಿ ಜಾರಿಗೆ ತಂದಿದ್ದು, ಹಿಂದುಳಿದ, ಅಲ್ಪಸಂಖ್ಯಾತ, ದಲಿತರಿಗೆ ಅಧಿಕಾರ ನೀಡಿದ್ದು ಜನತಾ ದಳ. ಇಂದಿರಾಗಾಂಧಿಯವರಿಂದಲೂ ಮಾಡಲಾಗದ ಕೆಲಸವನ್ನು ತಾವು ಮಾಡಿದ್ದು, ಇದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ ಎಂದರು.
ಎದೆಗಾರಿಕೆಯಿದೆ, ಗೆಲ್ಲಿಸಿ: ಜೆಡಿಎಸ್ ಅಭ್ಯರ್ಥಿ ಎ. ಕೃಷ್ಣಪ್ಪ
ತುಮಕೂರು: ರಾಜ್ಯದ ಹಿತ ಕಾಪಾಡುವ, ರಾಜ್ಯದ ಪರವಾಗಿ ಸಂಸತ್ತಿನಲ್ಲಿ ಹೋರಾಟ ಮಾಡುವ ಎದೆಗಾರಿಕೆ ತಮಗಿದೆ. ಆಶೀರ್ವಾದ ಮಾಡಿ, ಲೋಕಸಭೆಗೆ ಕಳುಹಿಸುವಂತೆ ತುಮಕೂರು ಲೋಕಸಭಾ ಜೆಡಿಎಸ್ ಅಭ್ಯರ್ಥಿ, ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಎ. ಕೃಷ್ಣಪ್ಪ ಮನವಿ ಮಾಡಿದರು. ಅವರು ತುಮಕೂರಿನಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ದೇವೇಗೌಡರ ಆಶೀರ್ವಾದದಿಂದ ತಾವು ತುಮಕೂರಿನಲ್ಲಿ ಸ್ಪರ್ಧಿಸುತ್ತಿರುವುದಾಗಿ ತಿಳಿಸಿದ ಕೃಷ್ಣಪ್ಪ, ರಾಜ್ಯದ ನೆಲ, ಜಲ, ಭಾಷೆಗೆ ಸಂಬಂಧಿಸಿದಂತೆ ಯಾವುದೇ ರಾಜಿಯಿಲ್ಲದೆ ಹೋರಾಟ ಮಾಡುವುದಾಗಿ ಘೋಷಿಸಿದರು.