ಅಪಘಾತ: ಕಾಂಗ್ರೆಸ್ ಮುಖಂಡ ಪುಲಿಮತಿ ವೆಂಕಟೇಶ್ ಸಾವು
ಪಾವಗಡ: ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮೂವರು ಅಪಘಾತಕ್ಕೀಡಾಗಿ ಯುವಕನೊಬ್ಬ ಸ್ಥಳದಲ್ಲಿಯೆ ಮೃತಪಟ್ಟು, ಇಬ್ಬರಿಗೆ ತೀವ್ರ ಗಾಯಗಳಾದ ಘಟನೆ ತಾ.ಗಂಗಸಾಗರ ಸಮೀಪ ನಡೆದಿದೆ.
ಬೈಕ್ ಅಪಘಾತದಲ್ಲಿ ಮೃತಪಟ್ಟ ಯುವಕ ಪಾವಗಡ ಅಪ್ ಬಂಡೆ ವಾಸಿ ತಾ.ಕಾಂಗ್ರೆಸ್ ಯುವ ಮುಖಂಡ ಪುಲಿಮತಿ ವೆಂಕಟೇಶ್ (28).
ವಿವರ: ಪಾವಗಡ ಪಟ್ಟಣ ವಾಸಿ ಪುಲಿಮತಿ ವೆಂಕಟೇಶ್ ಅವರು ತಾ.ಜೆಡಿಎಸ್ ಯುವ ಮುಖಂಡ ಗೋಪಾಲ್ ಹಾಗೂ ಮತ್ತೊಬ್ಬ ಯುವಕ ಸೇರಿ ನಾಗಲಾಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮಾರಮ್ಮನ ಜಾತ್ರೆಗೆ ತೆರಳಿದ್ದರು. ಜಾತ್ರೆ ಮುಗಿಸಿಕೊಂಡು ಸಂಜೆ ಬೈಕಿನಲ್ಲಿ ಪಾವಗಡಕ್ಕೆ ಬರುತ್ತಿರುವಾಗ ಗಂಗಸಾಗರ ಸಮೀಪ ಬರುತ್ತಿದ್ದಂತೆ ಎತ್ತಿನ ಗಾಡಿಯೊಂದಕ್ಕೆ ಬೈಕ್ ತಗುಲಿದ ಪರಿಣಾಮ ಬೈಕ್ ಸ್ಕಿಡ್ ಆಗಿ ಮೂವರು ಬಿದ್ದಿದ್ದಾರೆ. ಗಾಡಿಯ ಗೊಪುರ ಬೈಕ್ ಚಾಲಕ ಪುಲಿಮತಿ ವೆಂಕಟೇಶ್ ಅವರ ಎದೆಗೆ ಗುದ್ದಿದ ಪರಿಣಾಮ ವೆಂಕಟೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದರೆ ಬೈಕಿನ ಹಿಂಬದಿಯಲ್ಲಿದ್ದ ಇಬ್ಬರಿಗೆ ತೀವ್ರ ಗಾಯಗಳಾಗಿವೆ. ತುರ್ತುವಾಹನದಲ್ಲಿ ಪಾವಗಡ ಸರ್ಕಾರಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಯಿತು. ಆಸ್ಪತ್ರೆಗೆ ಶಾಸಕ ಕೆ.ಎಂ.ತಿಮ್ಮರಾಯಪ್ಪ, ಪ್ರಧಾನ ಕಾರ್ಯದರ್ಶಿ ಗೋವಿಂದಬಾಬು, ಕಾಂಗ್ರೆಸ್ ಮುಖಂಡರಾದ ಮಾನಂ ವೆಂಕಟಸ್ವಾಮಿ, ಮೈಲಾರರೆಡ್ಡಿ, ತಾ. ಭೋವಿ ಸಂಘದ ಅಧ್ಯಕ್ಷ ಬಂಗಾರಪ್ಪ ಹಾಗೂ ಮಧುಗಿರಿ ಡಿವೈಎಸ್‌ಪಿ ಗುರುಸ್ವಾಮಿ, ಸಿಪಿಐ ಭಾನುಪ್ರಕಾಶ್ ಮತ್ತು ಪಾವಗಡ ಠಾಣಾ ಪಿಎಸ್‌ಐ ಅಶೋಕ್ ಕುಮಾರ್ ಸ್ಥಳಕ್ಕೆ ಭೇಟಿನೀಡಿದರು.