ತುರುವೇಕೆರೆ: 1.79 ಲಕ್ಷ ಮತದಾರರು
ತುರುವೇಕೆರೆ: ಮುಂಬರುವ ಲೋಕಸಭಾ ಚುನಾವಣೆಗೆ ತುರುವೇಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಮತದಾನ ಮಾಡಲಿರುವವರ ಸಂಖ್ಯೆ 1,79, 562 ಮಂದಿ.
ಕಳೆದ ಲೋಕಸಭಾ ಚುನಾವಣೆಯಲ್ಲಿ 177278 ಮಂದಿ ಮತದಾರರಿದ್ದರು. ಈಗ ಕಳೆದ 16 ರ ತನಕ 2284 ಮಂದಿ ಹೆಚ್ಚುವರಿ ಮತದಾರರ ಸೇರ್ಪಡೆಯಾಗಿದೆ. ಇವರಲ್ಲಿ ಪುರುಷ ಹಾಗೂ ಮಹಿಳೆಯರು ಸರಿಸಮಾನ ಸಂಖ್ಯೆಯಲ್ಲಿದ್ದಾರೆ. ತುರುವೇಕೆರೆ ವಿಧಾನ ಸಭಾ ಕ್ಷೇತ್ರಕ್ಕೆ ಗುಬ್ಬಿ ತಾಲೂಕಿನ ಕಡಬ ಹಾಗೂ
ಸಿಎಸ್ ಹೋಬಳಿಯೂ ಸೇರ್ಪಡೆಯಾಗಿದೆ. ಒಟ್ಟು 228 ಮತಗಟ್ಟೆಗಳು ಇವೆ. ಇವುಗಳಲ್ಲಿ ತುರುವೇಕೆರೆ ತಾಲೂಕಿನ 181 ಮತಗಟ್ಟೆಗಳು, ಸಿಎಸ್ ಪುರ ಹೋಬಳಿಯ 30 ಮತಗಟ್ಟೆಗಳು ಹಾಗೂ ಕಡಬಾ ಹೋಬಳಿಯ 17 ಮತಗಟ್ಟೆಗಳು ಸೇರಿವೆ.
ಮತದಾನ ಯಾವುದೇ ತೊಂದರೆಯಾಗದಂತೆ ನಡೆಯಲು ಈರ್ವರು ಸಂಚಾರಿ ಜಾಗೃತ ದಳವನ್ನು ನೇಮಿಸಲಾಗಿದೆ. ಇವರಲ್ಲಿ ಮಾಯಸಂದ್ರ ಹೇಮಾವತಿ ನಾಲಾ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚಂದ್ರು ಹಾಗೂ ತುರುವೇಕೆರೆ ಜಿಲ್ಲಾ ಪಂಚಾಯ್ತಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್ ಇದ್ದಾರೆ. 11 ಮಂದಿ ಸೆಕ್ಟರ್ ಆಫೀಸರ್ಗಳನ್ನು ನೇಮಿಸಲಾಗಿದ್ದು ಅವರಿಗೆ ಕನಿಷ್ಠ ತಲಾ 20 ಮತಗಟ್ಟೆಗಳ ಜವಾಬ್ದಾರಿ ನೀಡಲಾಗಿದೆ ಎಂದು ತಹಸೀಲ್ದಾರ್ ಮಾರೇಗೌಡ ತಿಳಿಸಿದ್ದಾರೆ. ತಾಲೂಕಿನ ಗಡಿ ಭಾಗವಾದ ಜೋಡಗಟ್ಟೆಯಲ್ಲಿ ಚೆಕ್ ಪೋಸ್ಟ್ ಇದ್ದು ತೀವ್ರ ನಿಗಾ ಇರಿಸಲಾಗಿದೆ. ಚುನಾವಣೆಗೆ ಸಂಬಂಧಿಸಿದಂತೆ ಪ್ರಚಾರ ಹಾಗೂ ಜಾಹೀರಾತಿಗೆ ಪರವಾನಗಿ ಪಡೆದುಕೊಳ್ಳಲು ತಾಲ್ಲೂಕು ಕಚೇರಿಯಲ್ಲಿ ಏಕ ಗವಾಕ್ಷಿ ಮೂಲಕ ವಿತರಣೆ ಮಾಡಲಾಗುವುದು. ಲೋಕಸಭಾ ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕಾಗಿ ಮಾಡುವ ಖರ್ಚು ವೆಚ್ಚವನ್ನು ಪರೀಶೀಲನೆ ಮಾಡಲು ಎಲೈಸಿಯ ಅಧಿಕಾರಿ ಜಯಸಿಂಹರವರನ್ನು ನೇಮಕ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ತುರುವೇಕೆರೆ ವಿಧಾನಸಭಾ ಚುನಾವಣಾ ಕ್ಷೇತ್ರದಲ್ಲಿ ಸಹಾಯಕ ಚುನಾವಣಾಧಿಕಾರಿಯಾಗಿ ಜಿಲ್ಲಾ ರೇಷ್ಮೆ ಇಲಾಖಾ ಉಪ ನಿರ್ದೇಶಕ ಎಂ.ವಿ.ಚಂದ್ರ ಕರ್ತವ್ಯ ನಿರ್ವಹಿಸಲಿದ್ದಾರೆ. ಕ್ಷೇತ್ರದಲ್ಲಿ ಕಾನೂನು ಭಂಗ ಚಟುವಟಿಕೆಗಳು ನಡೆದಲ್ಲಿ ಸಾರ್ವಜನಿಕರು 9341007839 ಕ್ಕೆ ಕರೆ ಮಾಡಿ ದೂರ ನೀಡಬಹುದು ಎಂದು ತಹಸೀಲ್ದಾರ್ ಮಾರೇಗೌಡ ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.