ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನಿಮ್ಮಲ್ಲಿರುವ ಕೌಶಲ್ಯದಿಂದ ಸ್ವಾವಲಂಬನೆ ಹೊಂದಿ: ಅನಿತಾ

Mainashree
Updated On : 20 Mar 2014, 11:42 am

ಕನ್ನಡಪ್ರಭ ವಾರ್ತೆ, ತುಮಕೂರು, ಮಾ.20
ನಿಮ್ಮಲ್ಲಿರುವ ಕೌಶಲ್ಯ, ಸ್ವಸಾಮರ್ಥ್ಯದಿಂದ ಸ್ವಾವಲಂಬನೆ ಹೊಂದಬೇಕಾಗಿದೆ ಎಂದು ಮಹಿಳೆಯರಿಗೆ ನಂದಿಹಳ್ಳಿ ಒದೆಕಾರ್ ತರಬೇತಿ ಕೇಂದ್ರದ ನಿರ್ದೇಶಕಿ ಅನಿತಾ ಒದೆಕಾರ್ ಕರೆ ನೀಡಿದರು.
ಜನಶಿಕ್ಷಣ ಸಂಸ್ಥೆ ಹಾಗೂ ಶ್ರೀ ಸಿದ್ಧಗಂಗಾ ವಿದ್ಯಾ ಸಂಸ್ಥೆ ಆಶ್ರಯದಲ್ಲಿ ಜನಶಿಕ್ಷಣ ಸಂಸ್ಥೆ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಮನಸ್ಸು ಮಾಡಿದರೆ ಮಹಿಳೆಯರು ಏನು ಬೇಕಾದರೂ ಸಾಧಿಸಬಹುದು. ಆದರೆ ನಮ್ಮಲ್ಲಿ ಬಹಳಷ್ಟು ಜನ ಟಿವಿ ನೋಡುತ್ತ, ಹರಟೆ ಹೊಡೆಯುತ್ತಾ ಕಾಲ ಕಳೆಯುತ್ತಾರೆ. ಬೇರೆಯವರ ವಿಷಯವನ್ನು ಚರ್ಚೆ ಮಾಡುತ್ತಾರೆ. ಆದರೆ ನಮ್ಮ ಅಭಿವೃದ್ಧಿಯ ಬಗ್ಗೆ ನಾವು ಚಿಂತಿಸಿದಾಗ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂಬುದನ್ನು ಉದಾಹರಣೆಗಳ ಸಮೇತ ಅವರು ವಿವರಿಸಿದರು.
ನಮ್ಮ ಸಂಸ್ಕೃತಿಯನ್ನು ಬಿಟ್ಟು ಅನ್ಯ ಸಂಸ್ಕೃತಿಗೆ ಮಾರುಹೋಗುತ್ತಿದ್ದೇವೆ. ಇದನ್ನು ಬಿಟ್ಟು ನಮ್ಮಲ್ಲೇ ಇರುವ ಕಚ್ಚಾವಸ್ತುಗಳ ಬಳಕೆ ಮಾಡಿ ಸ್ವಸಾಮರ್ಥ್ಯದಿಂದ ಅಭಿವೃದ್ಧಿ ಹೊಂದಬೇಕೆಂದು ಸಲಹೆ ನೀಡಿದರು.
ಸಿದ್ಧಗಂಗಾ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಟಿ.ಕೆ. ನಂಜುಂಡಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ಸ್ತ್ರೀ ಪುರುಷ ಇಬ್ಬರೂ ಸಮಾನರು. ಇವರಿಬ್ಬರೂ ಸೇರಿದರೆ ಮಾತ್ರ ರಥ ಚಲಿಸುತ್ತದೆ. ಹೆಣ್ಣನ್ನು ಆರ್ಥಿಕ ಶಕ್ತಿಯ ಮೇಲೆ ಅಳೆಯುವುದರಿಂದ ಆಕೆಯನ್ನು 2ನೇ ಸ್ಥಾನದಲ್ಲಿ ನಿಲ್ಲಿಸಲಾಗಿದೆ. ಆದರೆ ಇಂದು ಆಕೆಯೂ ಆರ್ಥಿಕವಾಗಿ ಸಬಲಳಾಗಿದ್ದಾಳೆ.
ವಿವಿಧ ಬ್ಯಾಂಕ್‌ಗಳು ಮಹಿಳೆಯರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತಿದ್ದು, ಇದರ ಪ್ರಯೋಜನ ಪಡೆಯುವಂತೆ ಸಲಹೆ ನೀಡಿದರು.
    ಸಮಾಜದಲ್ಲಿ ವರದಕ್ಷಿಣೆ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳು ಇನ್ನೂ ಜೀವಂತವಾಗಿವೆ. ಹುಟ್ಟುವ ಮಗು ಹೆಣ್ಣು ಎಂದು ಗೊತ್ತಾದರೆ, ಆ ಮಗುವನ್ನೇ ಚಿವುಟುವ ವ್ಯವಸ್ಥೆ ಇದೆ. ಕೀಳರಿಮೆ ನಿವಾರಣೆಯಾಗಬೇಕೆಂದರೆ ಹೆಚ್ಚು ಓದಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement