ಹಿಂಡಲಗಾ ಕೈದಿ ಸಾವು
ಬೆಳಗಾವಿ: ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಹಿಂಡಲಗಾ ಕೇಂದ್ರ ಕಾರಾಗೃಹದ ಕೈದಿಯೊಬ್ಬ ಗುರುವಾರ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. ಮೂರು ದಿನಗಳ ಹಿಂದೆ ಈತ ಅನಾರೋಗ್ಯಕ್ಕೆ ಈಡಾಗಿ ಚಿಕಿತ್ಸೆ ಪಡೆಯುತ್ತಿದ್ದ ಎಂದು ಕಾರಾಗೃಹದ ಮೂಲಗಳು ತಿಳಿಸಿವೆ. ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗಂಗ್ಯಾನಟ್ಟಿ ಗ್ರಾಮದ ನಿವಾಸಿ ಅರ್ಜುನ್ ನಿಂಗಪ್ಪ ನಾಯಕರ(37)ಮೃತಪಟ್ಟ ಕೈದಿ. ಈತ 28.3.2005ರಲ್ಲಿ ತನ್ನ ಪತ್ನಿಯನ್ನೇ ಕೊಲೆ ಮಾಡಿದ್ದರಿಂದ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಸಿತ್ತು. ಜೈಲು ಅಧಿಕಾರಿಗಳು ಅನಾರೋಗ್ಯದಿಂದ ಬಳಲುತ್ತಿದ್ದ ಈತನನ್ನು ಮಾ.17ರಂದು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
ಸಂಪಿಗೆ ಬಿದ್ದು ವಿದ್ಯಾರ್ಥಿ ಸಾವು: 7 ಶಿಕ್ಷಕರ ಅಮಾನತು
ಹುಣಸೂರು: ತಾಲೂಕಿನ ಯಮಗುಂಬ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನೀರಿನ ಸಂಪಿಗೆ ಬಿದ್ದು ಶಾಲಾ ವಿದ್ಯಾರ್ಥಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಶಾಲಾ ಶಿಕ್ಷಕರ ನಿರ್ಲಕ್ಷ್ಯತೆ, ಕರ್ತವ್ಯ ಲೋಪವನ್ನು ಗಂಭೀರವಾಗಿ ಪರಿಗಣಿಸಿ, ಡಿಡಿಪಿಐ ಬಸಪ್ಪ ಅವರು ಮುಖ್ಯ ಶಿಕ್ಷಕ ಸೇರಿದಂತೆ 7 ಶಿಕ್ಷಕರನ್ನು ಅಮಾನತುಗೊಳಿಸಿದ್ದಾರೆ. ಮುಖ್ಯ ಶಿಕ್ಷಕ ರಾಜು, ಸಹಶಿಕ್ಷಕರಾದ ಚಂದ್ರೇಗೌಡ, ಕಿರಣ್, ಸುಲೋಚನಾ, ಸುವರ್ಣ, ಸಹನಾ ಹಾಗೂ ದೈಹಿಕ ಶಿಕ್ಷಕ ಕುಮಾರ್ ಅಮಾನತುಗೊಂಡವರು.