ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜಿಲ್ಲೆಯಲ್ಲಿ ಸಂಚರಿಸಲಿದೆ ವೀಡಿಯೋ ರಥ

Mainashree
Updated On : 21 Mar 2014, 11:34 am

ತುಮಕೂರು: ಎನ್‌ಡಿಎ ಸಾಧನೆ, ಯುಪಿಎ ವೈಫಲ್ಯ ಹಾಗೂ ಮೋದಿ ಅಭಿವೃದ್ಧಿ ಕಾರ್ಯಗಳ ಕುರಿತ ವಿಡಿಯೋ
ಚಿತ್ರಣವುಳ್ಳ ವೀಡಿಯೋ ರಥ ತುಮಕೂರು ಜಿಲ್ಲೆಯಾದ್ಯಂತ ಸಂಚರಿಸಲಿದೆ. ತುಮಕೂರು ಲೋಕಸಭಾ ವ್ಯಾಪ್ತಿಗೆ ಬರುವ ತುಮಕೂರು ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಈ ರಥ ಸಂಚರಿಸಲಿದೆ ಎಂದು ಬಿಜೆಪಿ ಕಾರ್ಯದರ್ಶಿ ನಂದೀಶ್ ತಿಳಿಸಿದರು.
ನಗರದ ಎಂ.ಜಿ.ರಸ್ತೆಯ 2ನೇ ಕ್ರಾಸ್‌ನಲ್ಲಿ ತುಮಕೂರು ಲೋಕಸಭಾ ಚುನಾವಣೆ ಬಿಜೆಪಿ ಕಾರ್ಯಾಲಯ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್‌ಡಿಎ ಸಾಧನೆ, ಯುಪಿಎ ವೈಫಲ್ಯ ಹಾಗೂ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಗಳ ಕುರಿತು ವೀಡಿಯೋ ಚಿತ್ರಣವನ್ನು ಜನತೆಗೆ ವಿವರಿಸಲಾಗುವುದು ವಿವಿಧ ಮುಖಂಡರುಗಳು ಭಾಷಣದ ತುಣಕು ಇದರಲ್ಲಿ ಒಳಗೊಂಡಿದೆ ಎಂದವರು ವಿವರಿಸಿದರು. ಪಕ್ಷದ ಮುಖಂಡರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಒಮ್ಮತದೊಂದಿಗೆ ಒಗ್ಗೂಡಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಎಲ್ಲರೂ ಹೋರಾಡುವುದಾಗಿ  ತಿಳಿಸಿದರು.
ಭೇದ-ಭಾವ ಇಲ್ಲ: ನಮ್ಮಲ್ಲಿ ಯಾವುದೇ ಭೇದ-ಭಾವ ಇಲ್ಲ. ಜಿಲ್ಲೆಯಲ್ಲಿ 16 ಲಕ್ಷ ಮತದಾರರಿದ್ದು, 1600  ಬೂತ್‌ಗಳನ್ನು ಗುರುತಿಸಲಾಗಿದ್ದು, ಅಲ್ಲೆಲ್ಲಾ ಬಿಎಲ್‌ಓಗಳನ್ನು ಪಕ್ಷದಿಂದ ನೇಮಕ ಮಾಡಲಾಗಿದೆ. ಪ್ರತಿಯೊಂದಕ್ಕೂ ನಿರ್ವಹಣಾ ತಂಡ ಉಸ್ತುವಾರಿ ನೋಡಿಕೊಳ್ಳಲಿದ್ದು, ಈ ತಂಡಕ್ಕೆ ಕಾರ್ಯಾಗಾರ ನಡೆಸಲಾಗಿದೆ. ಎಲ್ಲಾ ಕಡೆ ಪಕ್ಷದ ಕಾರ್ಯಕರ್ತರು ಸುವ್ಯವಸ್ಥಿತವಾಗಿ ಪ್ರಚಾರ ಕಾರ್ಯಗಳನ್ನು ನಡೆಸಲಿದ್ದಾರೆ ಎಂದರು. ಈ ಹಿಂದೆ ಪಕ್ಷದಲ್ಲಿ ಕೆಲವೊಂದು ವಿದ್ಯಮಾನಗಳಿಗಾಗಿ ಬೇಸರ ಆಗಿದ್ದು ಸಹಜ. ಈಗ ಅಂತಹ ಯಾವುದೇ ವಾತಾವರಣವಿಲ್ಲ. ರಾಜ್ಯ ನಾಯಕರ ಆದೇಶದಂತೆ ಪಕ್ಷಕ್ಕೆ ಕೆಲಸ ಮಾಡುತ್ತೇವೆ. ಮೋದಿ ಪ್ರಧಾನಿಯಾಗಬೇಕು ಎಂಬುದು ನಮ್ಮ ದೃಷ್ಟಿ. ಪಕ್ಷಕ್ಕಾಗಿ ನಾವೆಲ್ಲರೂ ಬದ್ಧರಾಗಿ ಕೆಲಸ ಮಾಡುತ್ತೇವೆ. ಎಲ್ಲಾ ಕಡೆ ಮೋದಿಯ ಹವಾ ಇದೆ. ಪ್ರಚಾರ ಕಾರ್ಯಗಳಿಗೆ ಜಿಲ್ಲೆಗೆ ನರೇಂದ್ರ ಮೋದಿಯವರನ್ನು ಕರೆಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ತಿಳಿಸಿದರು.
23ರಂದು ಸಭೆ: ಮಾ.23 ರಂದು ಗುಬ್ಬಿಯಲ್ಲಿ ಕಾರ್ಯಕರ್ತರ ಸಭೆ ಆಯೋಜಿಸಲಾಗಿದೆ. ಆನಂತರ ವಿವಿಧ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಸಭೆ ಆಯೋಜಿಸಲಾಗುವುದು. ಪ್ರತಿ ವಿಧಾನ ಸಭಾ ಕ್ಷೇತ್ರಗಳಲ್ಲಿಯೂ ಈ ಸಭೆ ನಡೆಯಲಿದ್ದು, ಅಲ್ಲಿನ ಪಕ್ಷದ ಮುಖಂಡರು ಈ ಬಗ್ಗೆ ಮುತುವರ್ಜಿ ವಹಿಸಲಿದ್ದಾರೆ ಎಂದರು. ಎಂ.ಡಿ.ಲಕ್ಷ್ಮೀನಾರಾಯಣ ಹಾಗೂ ಮಸಾಲೆ ಜಯರಾಂ ಕಾಂಗ್ರೆಸ್ ಸೇರ್ಪಡೆಯಾಗಿರುವುದರಿಂದ ಪಕ್ಷಕ್ಕೇನೂ ಹಾನಿ ಇಲ್ಲ. ವ್ಯಕ್ತಿ ಬದಲಾವಣೆಯಾಗಬಹುದು. ಆದರೆ ಮತ ಬದಲಾಗುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸಂಸದ ಜಿ.ಎಸ್. ಬಸವರಾಜು ಮಾ.24 ರಂದು ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆಂದೂ ತಿಳಿಸಿದರು.
24ರಂದು ಬಸವರಾಜು ನಾಮಪತ್ರ: ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಗೌಡ ಮಾತನಾಡಿ ತುಮಕೂರು ಲೋಕಸಭಾ ಕ್ಷೇತ್ರ ಪ್ರತಿಷ್ಠೆಯ ಕಣವಾಗಿದೆ. ಜೆಡಿಎಸ್ ರಾಜ್ಯಾಧ್ಯಕ್ಷರು ಇಲ್ಲಿ ಸ್ಪರ್ಧಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಅಭ್ಯರ್ಥಿ ಸ್ಪರ್ಧೆ ಇದೆ. ಹೀಗಾಗಿ ಸವಾಲು ಎದುರಾಗಲಿದ್ದು, ಈ ಸವಾಲಿನಲ್ಲಿ ನಾವು 100ಕ್ಕೆ 100 ರಷ್ಟು ಗೆಲವು ಸಾಧಿಸುತ್ತೇವೆ ಎಂದರು. ನಮ್ಮಲ್ಲಿ ಯಾವುದೇ ಆಂತರಿಕ ಕಚ್ಚಾಟವಿಲ್ಲ. ಮೋದಿಗಾಗಿ, ದೇಶಕ್ಕಾಗಿ, ಪಕ್ಷಕ್ಕಾಗಿ ನಮ್ಮ ನೋವನ್ನು ನುಂಗಿಕೊಂಡಿದ್ದೇವೆ ಎಂದು ಇದೇ ಸಂದರ್ಭದಲ್ಲಿ ಹೇಳಿಕೊಂಡರು.  ಪತ್ರಿಕಾಗೋಷ್ಠಿಯಲ್ಲಿ ಜಿ.ಬಿ.ಜ್ಯೋತಿಗಣೇಶ್, ಹೆಬ್ಬಾಕ ರವಿ, ಬಿ.ಸಿ.ನಾಗೇಶ್, ಶಿವಪ್ರಸಾದ್, ಸಿ.ವಿ. ಮಹದೇವಯ್ಯ, ಬಿ.ಕೆ. ಮಂಜುನಾಥ್, ಪೆದ್ದರಾಜು, ಸುಮಿತ್ರಾದೇವಿ, ಬಾವಿಕಟ್ಟೆ ನಾಗಣ್ಣ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement