ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ತುರುವೇಕೆರೆ ಪಟ್ಟಣ ಅಧ್ಯಕ್ಷೀಯ ಆಯ್ಕೆ 26ಕ್ಕೆ

Mainashree
Updated On : 21 Mar 2014, 11:30 am

ತುರುವೇಕೆರೆ: ಅಂತೂ ಕಳೆದ ಒಂದು ವರ್ಷದಿಂದ ಪಟ್ಟಣದ ಜನತೆಯಿಂದ ಚುನಾಯಿತರಾಗಿದ್ದರೂ ಅಧಿಕಾರ ಇಲ್ಲದೇ ಇದ್ದ ಸ್ಥಳೀಯ ಪಟ್ಟಣ ಪಂಚಾಯ್ತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಸಮಯ ನಿಗದಿಯಾಗಿದೆ.
ಮಾ.26 ರಂದು ಪಟ್ಟಣ ಪಂಚಾಯ್ತಿಯ ಆಯ್ಕೆ ನಡೆಯಲಿದೆ. 14 ಸ್ಥಾನಗಳ ಪೈಕಿ ಜೆಡಿಎಸ್ 7 ಸ್ಥಾನಗಳನ್ನು ಗಳಿಸಿದೆ. ಕಾಂಗ್ರೆಸ್ 4 ಮತ್ತು ಕೆಜೆಪಿ 3 ಸ್ಥಾನಗಳನ್ನು ಗಳಿಸಿದೆ.
 ಈಗ ಮಸಾಲಾ ಜಯರಾಂ ಹಾಗೂ ಎಂ.ಡಿ.ಎಲ್. ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವುದರಿಂದ ಕೆಜೆಪಿಯ 3 ಮಂದಿ ಸದಸ್ಯರೂ ಕಾಂಗ್ರೆಸ್ ಎಂದೇ ಗುರುತಿಸಿಕೊಂಡಿದ್ದಾರೆ. ಹಾಗಾಗಿ ಕಾಂಗ್ರೆಸ್ 7 ಸ್ಥಾನಗಳನ್ನು ಗಳಿಸಿದ ಹಾಗಾಗಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ತಲಾ 7 ಸ್ಥಾನ ಪಡೆದಂತಾಗಿದೆ.
ಶಾಸಕ ಎಂ.ಟಿ. ಕೃಷ್ಣಪ್ಪನವರ ಹದ್ದಿನಕಣ್ಣಿನ ರಾಜಕಾರಣದಲ್ಲಿ ಯಾವೊಬ್ಬ ಸದಸ್ಯರೂ ಕಾಂಗ್ರೆಸ್‌ಗೆ ಹೋಗಲು ಸಾಧ್ಯವಿಲ್ಲ. ಕಾಂಗ್ರೆಸ್‌ನಿಂದ ಗೆದ್ದವರೆಲ್ಲರೂ ಎಂ.ಟಿ.ಕೃಷ್ಣಪ್ಪ ನವರ ವಿರೋಧಿ ಗುಂಪೇ. ಹಾಗಾಗಿ ಇಲ್ಲೂ ಪಕ್ಷಾಂತರದ ಮಾತು ಇಲ್ಲ. ಎಂ.ಟಿ.ಕೃಷ್ಣಪ್ಪನವರು ಜೆಡಿಎಸ್ ಸದಸ್ಯರ ಪರ ಮತ ಚಲಾಯಿಸಿದರೆ, ವಿಧಾನ ಪರಿಷತ್ ಸದಸ್ಯ ಎಂ.ಡಿ. ಲಕ್ಷ್ಮೀನಾರಾಯಣ್ ಸ್ಥಳೀಯ ಮನೆ ವಿಳಾಸ ನೀಡಿ ತಾವೂ ಪಟ್ಟಣದ ಪ್ರಜೆಯೇ  ಎಂದು ಬಿಂಬಿಸಿ ಪಟ್ಟಣ ಪಂಚಾಯ್ತಿಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಮತ ಚಲಾಯಿಸುವುದು ನಿಶ್ಚಿತ. ಇಬ್ಬರು ಶಾಸಕರೂ ಮತ ಚಲಾಯಿಸಿದರೂ ಎರಡೂ ಕಡೆ 8 ಮತಗಳು ಆಗಲಿವೆ. ಜಿಲ್ಲಾ ಸಂಸದ ಜಿ.ಎಸ್.ಬಸವರಾಜು ಅವರ ಮತದ ಮೇಲೆ ಎಲ್ಲರ ಚಿತ್ತ ಅಡಗಿದೆ.
ಬಿಜೆಪಿ ಸದಸ್ಯರಿಲ್ಲ: ಜಿ.ಎಸ್. ಬಸವರಾಜು ಅವರು ಬಿಜೆಪಿಯವರಾದರೂ ಇಲ್ಲಿ ಯಾವೊಬ್ಬ ಬಿಜೆಪಿಯವರು ಗೆಲವು ಸಾಧಿಸಿಲ್ಲ. ಆದರೆ ಕಾಂಗ್ರೆಸ್‌ನಲ್ಲಿರುವ ಕೆಲವು ಹಿರಿಯ ಸದಸ್ಯರೊಂದಿಗೆ ಜಿ.ಎಸ್. ಬಸವರಾಜು ಅವರ ಒಡನಾಟ ಚೆನ್ನಾಗಿದೆ. ಇದರ ಫಲವಾಗಿ ಜಿ.ಎಸ್.ಬಿ ಕಾಂಗ್ರೆಸ್ ಪರ ಮತ ಚಲಾಯಿಸುವರು ಎಂದು ಕಾಂಗ್ರೆಸ್ ನವರು ನೆಚ್ಚಿಕೊಂಡಿದ್ದಾರೆ. ಜೆಡಿಎಸ್‌ನ ಶಾಸಕ ಎಂ.ಟಿ.ಕೃಷ್ಣಪ್ಪ ಜಿ.ಎಸ್.ಬಸವರಾಜು ಜೆಡಿಎಸ್ ಪರವಾಗಿ ಮತ ಚಲಾಯಿಸುವರು ಎಂದು ನಂಬಿಕೊಂಡಿದ್ದಾರೆ.
ಅಧ್ಯಕ್ಷ ಸ್ಥಾನ: ಸ್ಥಳೀಯ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಸ್ಥಾನ ಮಹಿಳೆಗೆ ಮೀಸಲಾಗಿದೆ. ಕಾಂಗ್ರೆಸ್ ಹಾಗೂ ಕೆಜೆಪಿ ಯಲ್ಲಿ ಗೆದ್ದಿರುವುದು ಓರ್ವ ಮಹಿಳೆ ಮಾತ್ರ. 9 ನೇ ವಾರ್ಡ್ ನಿಂದ ಗೆದ್ದಿರುವ ಲೀಲಾ ರಂಗಸ್ವಾಮಿ,  ಜೆಡಿಎಸ್ ನಿಂದ 14 ನೇ ವಾರ್ಡ್‌ನಿಂದ ಗೆಲವು ಸಾಧಿಸಿದ್ದ ನೇತ್ರಾವತಿ ರಂಗಸ್ವಾಮಿ ಅವರಿಗೆ ಶಾಸಕ ಎಂ.ಟಿ.ಕೃಷ್ಣಪ್ಪನವರ ಶುಭ ಹಾರೈಕೆ ಇದೆ. ಅತ್ತ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಾಳಯದಿಂದ 1 ನೇ ವಾರ್ಡ್‌ನಿಂದ ಗೆಲವು ಸಾಧಿಸಿರುವ ಟಿ.ಪಿ.ಮಹೇಶ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಜೆಡಿಎಸ್‌ನಿಂದ ಶಾಸಕರ ಕೃಪೆ ಇರುವ ವಾರ್ಡ್ 7 ರಿಂದ ಗೆಲವು ಸಾಧಿಸಿರುವ ವಿಜಯೇಂದ್ರ  ಇದ್ದಾರೆ. ಇವರಲ್ಲಿ ಯಾರಿಗೆ ಅದೃಷ್ಣ ಲಕ್ಷ್ಮಿ ಒಲಿಯುವಳೋ ಕಾದು ನೋಡಬೇಕು.

ಎಸ್.ನಾಗಭೂಷಣ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement