ಹೆಚ್ಚಿನ ವಿದ್ಯುತ್ ಪ್ರವಹಿಸಿ ಯುವಕ ಸಾವು
ಕುಣಿಗಲ್: ಬೆಸ್ಕಾಂ ಇಲಾಖೆ ನಿರ್ಲಕ್ಷ್ಯದಿಂದಾಗಿ, ಇಡೀ ಗ್ರಾಮದಲ್ಲೆಲ್ಲಾ ಹೆಚ್ಚಿನ ವಿದ್ಯುತ್ ಪ್ರವಹಿಸಿ, ಯುವಕನೊರ್ವ ಮೃತಪಟ್ಟು, ಇಬ್ಬರು ಮಹಿಳೆಯರು ಗಾಯಗೊಂಡು, ಬೆಸ್ಕಾಂ ಸಿಬ್ಬಂದಿ ರಾತ್ರಿಯಿಡಿ ಸಮಸ್ಯೆಗೆ ಸ್ಪಂದಿಸದ ಕಾರಣ ಬೇಸತ್ತ ಗ್ರಾಮಸ್ಥರು, ತಪಾಸಣೆಗೆ ಆಗಮಿಸಿದ್ದ ಕಿರಿಯ ಅಭಿಯಂತರಿಗೆ ಧರ್ಮದೇಟು ನೀಡಿ, ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ ಘಟನೆ ಶುಕ್ರವಾರ ತಾಲೂಕಿನ ಹೆಡ್ಡಿಗೆರೆ ಗ್ರಾಮದಲ್ಲಿ ನಡೆದಿದೆ.
ಎಡೆಯೂರು ಹೋಬಳಿಯ ಹೆಡ್ಡಿಗೆರೆ ಗ್ರಾಮದಲ್ಲಿ ಕಳೆದೊಂದು ತಿಂಗಳಿನಿಂದಲೂ ತ್ರಿಫೇಸ್ ವಿದ್ಯುತ್ ಇರಲಿಲ್ಲ. ಶುಕ್ರವಾರ ಗ್ರಾಮದಲ್ಲಿ ಗ್ರಾಮದೇವತೆ ಹುಚ್ಚಮ್ಮದೇವಿಯ ಹಬ್ಬವಿರುವಕಾರಣ, ಒತ್ತಾಯದ ಮೇರೆಗೆ ಗುರುವಾರಸಂಜೆ, ಬೆಸ್ಕಾಂ ಸಿಬ್ಬಂದಿ 25ಕೆವಿಯ ಪರಿವರ್ತಕ (ಟಿಸಿ) ಅಳವಡಿಸಿದ್ದರು. ರಾತ್ರಿ 9 ಗಂಟೆ ವೇಳೆಗೆ ವಿದ್ಯುತ್ ಸಂಪರ್ಕಕ್ಕೆ ಚಾಲನೆ ನೀಡಿದಾಗ, ಗ್ರಾಮದಲ್ಲಿನ ಮನೆಗೆಲ್ಲಾ ಹೆಚ್ಚಿನ ವಿದ್ಯುತ್ ಪ್ರವಹಿಸಿ, ಮನೆ, ರಸ್ತೆಯಲ್ಲೆಲ್ಲಾ ವಿದ್ಯುತ್ ಹರಿಯಲು ಆರಂಭಿಸಿ (ಗ್ರೌಂಡಿಂಗ್) ಜನತೆ ಭಯಭೀತರಾದರು. ಎಚ್ಚೆತ್ತೆ ಗ್ರಾಮದ ಕೆಲಯುವಕರು ಒಣಬಿದಿರಿನಿಂದ ಪರಿವರ್ತಕದ ಸಂಪರ್ಕಕ್ಕೆ ಬಡಿದು, ವಿದ್ಯುತ್ ಪೂರೈಕೆ ಕಡಿತಗೊಳಿಸಿದರು. ವಿದ್ಯುತ್ ಹೆಚ್ಚಾಗಿ ಪ್ರವಹಿಸುತ್ತಿರುವ ವೇಳೆಯಲ್ಲೆ ಗ್ರಾಮದ ಹುಚ್ಚೇಗೌಡ ಎಂಬಾತ ತಮ್ಮ ಮೊಬೈಲ್ ಚಾರ್ಜ್ ಮಾಡಲು ಹೋದಾಗ, ವಿದ್ಯುತ್ ಅಘಾತಕ್ಕೆಸಿಕ್ಕು, ದೂರಕ್ಕೆ ಎಸೆಯಲ್ಪಟ್ಟು ಕುಸಿದು ಬಿದ್ದ. ಗ್ರಾಮಸ್ಥರು ಆತನನ್ನು ಆಸ್ಪತ್ರೆಗೆ ಸಾಗಿಸಲು ಮುಂದಾದರು. ಆದರೆ ಮಾರ್ಗ ಮಧ್ಯೆ ಆತ ಮೃತಪಟ್ಟನು. ಮೃತ ಹುಚ್ಚೆಗೌಡನ ಮನೆ ಸಮೀಪವೇ ರತ್ನಮ್ಮ, ಲಕ್ಷ್ಮಮ್ಮ ಎಂಬುವರಿಗೂ ಸುಟ್ಟ ಗಾಯವಾಗಿದೆ.
ಒಬ್ಬನೇ ಮಗ: ಹೆಡ್ಡಿಗೆರೆಗ್ರಾಮದ ರೈತ ಗಂಗಾಧರ, ಗೌರಮ್ಮ ದಂಪತಿಗೆ ಏಕೈಕ ಗಂಡುಮಗನಾಗಿದ್ದ 21 ವರ್ಷದ ಹುಚ್ಚೇಗೌಡ, ವಿದ್ಯುತ್ ಆಘಾತದಿಂದ ತನ್ನದಲ್ಲದ ತಪ್ಪಿಗೆ ಮೃತಪಟ್ಟಿದ್ದು ಕುಟುಂಬದ ಪಾಲಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ. ಹಬ್ಬ ಮಾಡುವ ಸಂಭ್ರಮದಲ್ಲಿದ್ದ ಕುಟುಂಬದವರು, ಬಂಧು, ಬಳಗದವರು ಬೆಸ್ಕಾಂ ಇಲಾಖೆಗೆ ಹಿಡಿಶಾಪ ಹಾಕಿದರೆ, ಹೆತ್ತ ತಂದೆ, ತಾಯಿ ತಮ್ಮ ಕಣ್ಣ ಮುಂದೆಯೆ ಮಗ ಮೃತಪಟ್ಟಿದ್ದರಿಂದ ದಿಕ್ಕೆ ತೋಚದಂತಾಗಿ ಕಣ್ಣೀರಿಡುತ್ತಿದ್ದಾರೆ.
ರಾತ್ರಿ ಇಡೀ ಕರೆ ಮಾಡಿದರೂ ಸ್ಪಂದಿಸದ ಬೆಸ್ಕಾಂ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ ಮುಗಿಲುಮುಟ್ಟಿತು. ಬೆಳಗ್ಗೆ ತಾಪಂ ಸ್ಥಾಯಿಸಮಿತಿ ಅಧ್ಯಕ್ಷ ಜಗದೀಶ್ ಮತ್ತು ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ಗ್ರಾಮಕ್ಕೆ ಆಗಮಿಸಿದಾಗ, ಜನಪ್ರತಿನಿಧಿಗಳ ಮುಂದೆ ಗ್ರಾಮಸ್ಥರ ಆಕ್ರೋಶದ ಕಟ್ಟೆ ಒಡೆಯಿತು.
ಮುಖಂಡರು, ಬೆಸ್ಕಾಂ ಇಲಾಖೆಯ ಮೇಲಾಧಿಕಾರಿಗಳಿಗೆ ಕರೆ ಮಾಡಿ, ಇಲಾಖಾಧಿಕಾರಿಗಳು ಸ್ಥಳಕ್ಕೆ ಆಗಮಿಸದಿದ್ದಲ್ಲಿ ಶವವನ್ನು ಬೆಸ್ಕಾಂ ಕಚೇರಿ ಮುಂದಿಟ್ಟು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ ಮೇರೆಗೆ, ಶುಕ್ರವಾರ ಹತ್ತೂವರೆಗಂಟೆಗೆ ಜೆಇ ತಿಪ್ಪೆಸ್ವಾಮಿ ಸ್ಥಳಕ್ಕಾಗಮಿಸಿದರು. ಜೆಇಯವರನ್ನು ಮುಖಂಡರು ಸೇರಿದಂತೆ ಗ್ರಾಮಸ್ಥರು ಅವಾಚ್ಯಶಬ್ದಗಳಿಂದ ನಿಂದಿಸಿದರಲ್ಲದೆ, ರಾತ್ರಿ ಗ್ರಾಮಸ್ಥರ ಕರೆಗೆ ಸ್ಪಂದಿಸದಿರುವ ಬಗ್ಗೆ ಜೆಇ ಸಮರ್ಪಕವಾಗಿ ಉತ್ತರಿಸದ ಕಾರಣ, ಧರ್ಮದೇಟು ನೀಡಿದರು. ಸ್ಥಳದಲ್ಲಿದ್ದ ಜಗದೀಶ್, ಡಿ.ಕೃಷ್ಣಕುಮಾರ್ ಮಧ್ಯಪ್ರವೇಶಿಸಿ, ಸಮಾಧಾನ ಗೊಳಿಸಿದರು.
ಸ್ಥಳಕ್ಕಾಗಮಿಸಿದ ಕಾರ್ಯನಿರ್ವಾಹಕ ಅಭಿಯಂತರ ನಟರಾಜ್ ಅವರೊಂದಿಗೆ ಚರ್ಚಿಸಿದ ಮುಖಂಡರು,ನಿರ್ಲಕ್ಷ್ಯವಹಿಸಿರುವ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡು, ಸೂಕ್ತಪರಿಹಾರ ನೀಡುವಂತೆ ಒತ್ತಾಯಿಸಿದ ಮೇರೆಗೆ, ಮೃತನಿಗೆ ಇಲಾಖೆ ವತಿಯಿಂದ 3.44ಲಕ್ಷ ರು.ಪರಿಹಾರದ ಭರವಸೆ ಮೇರೆಗೆ ಪ್ರತಿಭಟನೆ ಹಿಂಪಡೆದರು.