2ನೇ ಹಂತದ ಪ್ರಚಾರಕ್ಕೆ ಸಿದ್ಧತೆ ಶುರು
ಕುಣಿಗಲ್: ಪ್ರಸಕ್ತ ಲೋಕಸಭೆ ಚುವಾವಣೆಗೆ ತಾಲೂಕಿನಾದ್ಯಂತ ಪ್ರಮುಖ ಪಕ್ಷಗಳ ಮುಖಂಡರು, ಈಗಾಗಲೆ ಒಂದು ಹಂತದ ಚುನಾವಣೆ ಪ್ರಚಾರ ಸಭೆಗಳನ್ನು ಸದ್ದಿಲ್ಲದೆ ಪೂರ್ಣಗೊಳಿಸಿದ್ದು ಈಗ ಎರಡನೇ ಹಂತದ ಪ್ರಚಾರ ಕಾರ್ಯಕ್ಕೆ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಲೋಕಸಭೆ ಚುನಾವಣೆ ಘೋಷಣೆಯಾಗುವುದನ್ನು ಮೊದಲೆ ಮನಗಂಡಿದ್ದ ಪ್ರಮುಖ ಪಕ್ಷಗಳ ಮುಖಂಡರು ಚುನಾವಣೆ ಪೂರ್ವಭಾವಿಯಾಗಿ ಪ್ರಚಾರಕ್ಕಾಗಿ ತಾಲೂಕಿನ ವಿವಿಧ ಹೋಬಳಿಗಳ ಗ್ರಾಮಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರಚಾರ ಕಾರ್ಯಕ್ಕಾಗಿ ಬಳಸಿಕೊಂಡರು.
ಕಾಂಗ್ರೆಸ್ನ ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಡಿ.ಕೆ.ಸುರೇಶ್, ಸಂಸದರಾಗಿದ್ದ ಕಾರಣ ಸಂಸದರ ನಿಧಿ ಸೇರಿದಂತೆ ತಮ್ಮ ಸಹೋದರ ಡಿ.ಕೆ.ಶಿವಕುಮಾರ್ ಚಾರಿಟೆಬಲ್ ಟ್ರಸ್ಟ್ ಮೂಲಕ ಕಡಿಮೆ ದರದಲ್ಲಿ ಶುದ್ಧ ಕುಡಿಯುವ ನೀರು ಘಟಕಗಳನ್ನು ಸ್ಥಾಪಿಸಿ ಅವುಗಳಿಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಂದ ಉದ್ಘಾಟಿಸಿ ಗಮನ ಸೆಳೆದರು.
ಹುತ್ರಿದುರ್ಗ ಹೋಬಳಿಗೆ ಕುಡಿಯುವ ನೀರು ಪೂರೈಕೆ ಯೋಜನೆಯಾದ ಹೇಮಾವತಿ ನಾಲಾವಲಯದ ಏತನೀರಾವರಿ ಕಾಮಗಾರಿಗೆ ಮಾಗಡಿಯಲ್ಲಿ ಶಂಕುಸ್ಥಾಪನೆ ನೆರವೇರಿಸಿ ನೀರಾವರಿ ಕಾಮಗಾರಿ ಸೇರಿದಂತೆ ನೀರಿನ ವಿಷಯದ ರಾಜಕಾರಣವನ್ನು ಪರಿಣಾಮಕಾರಿಯಾಗಿ ಬಳಸಿ ತಾಲೂಕಿನ ಆರು ಹೋಬಳಿಗಳಲ್ಲಿ ಯಶಸ್ವಿ ಪ್ರವಾಸ ಪೂರ್ಣಗೊಳಿಸಿದ್ದು, ಪಟ್ಟಣಕ್ಕೆ ಮಾತ್ರ ತಲೆಹಾಕಲಿಲ್ಲ.
ಕಾಮಗಾರಿಗೆ ಚಾಲನೆ: ಇನ್ನು ಸ್ಥಳೀಯವಾಗಿ ಆಡಳಿತ ಚುಕ್ಕಾಣಿ ಹಿಡಿದಿರುವ ಜೆಡಿಎಸ್ ಶಾಸಕ ಡಿ.ನಾಗರಾಜಯ್ಯ, ತಾಲೂಕಿನ ಅಮೃತೂರು, ಹುತ್ರಿದುರ್ಗ, ಕೊತ್ತಗೆರೆ, ಹುಲಿಯೂರುದುರ್ಗ, ಕಸಬಾ ಹೋಬಳಿಗಳಲ್ಲಿ ಜಿಪಂ ಮತ್ತು ಶಾಸಕರ ಅನುದಾನದಡಿಯಲ್ಲಿ ಸರಿಸುಮಾರು 150 ಕೋಟಿಗೂ ಹೆಚ್ಚಿನ ಅನುದಾನದಲ್ಲಿನ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು. ಆಯಾ ಗ್ರಾಮಗಳಿಗೆ ತೆರಳಿ ಜನತೆಯನ್ನುದ್ದೇಶಿಸಿ ಮಾತನಾಡಿ, ಪಕ್ಷದ ಅಭ್ಯರ್ಥಿ ಘೊಷಣೆಯಾಗದಿದ್ದರೂ ಮುಖಂಡರು, ಆಯಾ ಭಾಗದ ಕಾರ್ಯಕರ್ತರು ಚುರುಕಾಗುವಂತೆ ಮಾಡಿ ಲೋಕಸಭೆ ಚುನಾವಣೆಗೆ ಸಿದ್ಧಗೊಳಿಸಿದರು.
ಸದ್ದಿಲ್ಲದೇ ಸಿದ್ಧತೆ: ಬಿಜೆಪಿ ಕಾರ್ಯಕರ್ತರು ಮುಖಂಡರು, ಕಾಂಗ್ರೆಸ್ನ ನೀರಿನ ರಾಜಕಾರಣ, ಜೆಡಿಎಸ್ನ ಅಭಿವೃದ್ಧಿ ನೆಪದ ರಾಜಕಾರಣ ಕುರಿತು ಟೀಕಿಸಿದರು. ಕ್ಷೇತ್ರದಲ್ಲಿ ಪಕ್ಷದ ವರ್ಚಸ್ಸು ಮರುಗಳಿಸಲು ಎಡೆಯೂರು, ಹುಲಿಯೂರುದುರ್ಗ, ಕುಣಿಗಲ್ ಪಟ್ಟಣದಲ್ಲಿ ನಮೋ ಟೀ ಸ್ಟಾಲ್ ಪ್ರಾರಂಭಿಸಿ, ಪೈಪೋಟಿ ಮೇಲೆ ಸಂತೇ ದಿನದಲ್ಲೂ ಬೆಳಗಿನಿಂದ ಸಂಜವರೆಗೂ ಗ್ರಾಮಾಂತರ ಪ್ರದೇಶದ ಜನತೆಗೆ ಉಚಿತ ಚಹಾ ವಿತರಿಸುವ ಮೂಲಕ ಪಕ್ಷದ ಪ್ರಚಾರ ಕಾರ್ಯ ಕೈಗೊಂಡಿದ್ದು, ಪಕ್ಷದ ಅಭ್ಯರ್ಥಿ ಮುನಿರಾಜುಗೌಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಕಾರ್ಯಕರ್ತರಲ್ಲಿ ಸಂಚಲನ ಮೂಡಿಸಿತು. ಮುಖಂಡ ಡಿ.ಕೃಷ್ಣಕುಮಾರ್ ನೇತೃತ್ವದಲ್ಲಿ ಎರಡನೆ ಹಂತದ ಪ್ರಚಾರ ಕಾರ್ಯಗಳಿಗೆ ಸದ್ದಿಲ್ಲದೆ ಸಿದ್ಧತೆ ನಡೆಸುತ್ತಿದ್ದಾರೆ.