ಕಾಂಗ್ರೆಸ್ ಅಧಿಕ ಸ್ಥಾನ ಗೆಲ್ಲುವುದು ಖಚಿತ
ಕುಣಿಗಲ್: ರಾಜ್ಯ ಮತ್ತು ಕೇಂದ್ರದಲ್ಲಿನ ಕಾಂಗ್ರೆಸ್ ಸರ್ಕಾರದ ಸಾಧನೆಗಳಿಂದ ಈ ಬಾರಿ ಅಧಿಕ ಸ್ಥಾನಗಳನ್ನು ಗೆಲ್ಲುವುದರಲ್ಲಿ ಅನುಮಾನವಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಮಚಂದ್ರಯ್ಯ ತಿಳಿಸಿದರು. ಶನಿವಾರ, ತಾಲೂಕಿನ ಸಿದ್ದೇಮಣ್ಣಿನಪಾಳ್ಯದ ಕೋದಂಡರಾಮಸ್ವಾಮಿ ದೇವಾಲಯದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್, ತುಮಕೂರು ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡರು ಪ್ರಸಕ್ತ ಚುನಾವಣೆಯಲ್ಲಿ ಜಯಶಾಲಿಗಳಾಗಲೆಂದು ಹಾರೈಸಿ, ಕಾಂಗ್ರೆಸ್ ಕಾರ್ಯಕರ್ತರ ಪರವಾಗಿ ವಿಶೇಷ ಅಭಿಷೇಕ, ಪೂಜೆ ಕಾರ್ಯಕ್ರಮಗಳನ್ನು ನೆರವೇರಿಸಿದ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದರು. ಎಸ್.ಪಿ.ಮುದ್ದಹನುಮೇಗೌಡರ ಸರಳ, ಸಜ್ಜನ ವ್ಯಕ್ತಿತ್ವ. ಜೊತೆಯಲ್ಲಿ ಅವರು ಶಾಸಕರಾಗಿ ಮಾಡಿದ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ ಎಂದರು.
ಬಿಎಸ್ಪಿ ಅಭ್ಯರ್ಥಿಯಾಗಿ ಮಹಿಳೆ ಕಣಕ್ಕೆ....
ತುಮಕೂರು: ಬಹುಜನ ಸಮಾಜವಾದಿ ಪಕ್ಷದ ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಿಲೂಪರ್ ಜಮೀನಾ ಅಹ್ಮದ್ ಕಣಕ್ಕೆ ಇಳಿಯಲಿದ್ದಾರೆ. ಶನಿವಾರ ತುಮಕೂರಿನ ವೈಶಾಲಿ ಕಂಫಟ್ನಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ಬಿಎಸ್ಪಿ ಕರ್ನಾಟಕ ಉಸ್ತುವಾರಿ ಅಶೋಕ್ ಸಿದ್ದಾರ್ಥ ಅವರು ನಿಲೂಪ್ ಅವರಿಗೆ ಪಕ್ಷದ ಬಾವುಟ ಕೊಟ್ಟು ಸ್ವಾಗತಿಸಿದರು. ಮಾ. 24 ರಂದು ನಿಲೂಪ್ ಜಮೀನಾ ಅಹಮದ್ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿಲೂಪ್ ಅವರು ತಾವು ಇದೇ ಜಿಲ್ಲೆಯವರು. ಹೆಗ್ಗೆರೆ ಗ್ರಾಮದವರು. ತಮಗೆ ತುಮಕೂರು ಜಿಲ್ಲೆಯ ಪರಿಚಯವಿದೆ. ಮೊದಲಿನಿಂದಲೂ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದೇನೆ. ಈ ಸಂಬಂಧ ಪ್ರತಿ ತಾಲೂಕು ಮತ್ತು ಗ್ರಾಮಗಳಿಗೆ ಭೇಟಿ ನೀಡಿದ್ದೇನೆ. ಈ ಬಾರಿ ಬಿಎಸ್ಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದಾಗಿ ಅವರು ತಿಳಿಸಿದರು.
ಕಾಸಿಗಾಗಿ ಸುದ್ದಿ ಪ್ರಕರಣಗಳ ಬಗ್ಗೆ ತೀವ್ರ ನಿಗಾ: ಜಿಲ್ಲಾಧಿಕಾರಿ
ತುಮಕೂರು: ವಿದ್ಯುನ್ಮಾನ ಮಾಧ್ಯಮಗಳಲ್ಲಿ ಚುನಾವಣಾ ಜಾಹೀರಾತುಗಳನ್ನು ಪ್ರಸಾರ ಮಾಡುವ ಮೊದಲು ಕಡ್ಡಾಯವಾಗಿ ಜಿಲ್ಲಾ ಮಾಧ್ಯಮ ಪ್ರಾಮಾಣೀಕರಣ ಹಾಗೂ ಕಣ್ಗಾವಲು ಸಮಿತಿಯಿಂದ ಅನುಮೋದನೆ ಪಡೆಯುವುದು ಅತ್ಯಗತ್ಯ ಎಂದು ಜಿಲ್ಲಾ ಚುನಾವಣಾಧಿಕಾರಿ ಕೆ.ಎಸ್. ಸತ್ಯಮೂರ್ತಿ ತಿಳಿಸಿದ್ದಾರೆ.
ರೇಡಿಯೋ, ದೂರದರ್ಶನ, ಕೇಬಲ್ ಟೆಲಿವಿಷನ್ ಮುಂತಾದ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ಪ್ರಸಾರ ಮಾಡುವ ಮೊದಲು ಜಿಲ್ಲಾ ಎಂಸಿಎಂಸಿ ಸಮಿತಿಯಿಂದ ಕಡ್ಡಾಯವಾಗಿ ಅನುಮೋದನೆ ಪಡೆದುಕೊಳ್ಳಬೇಕು. ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಸಮಿತಿಯ ವತಿಯಿಂದ ನಿಗದಿತ ನಮೂನೆಗಳನ್ನು ಪಡೆದು ಭರ್ತಿ ಮಾಡಿ, ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.
ಎನ್ಎಸ್ಎಸ್ ಶಿಬಿರ ಬದುಕಿಗೆ ಸಹಾಯ
ಮಧುಗಿರಿ: ಎನ್ಎಸ್ಎಸ್ ಶಿಬಿರಗಳು ಜ್ಞಾನರ್ಜನೆ ತಾಣಗಳಾಗಿ ಕ್ರಿಯಾಶೀಲ ಬದುಕು ಕಟ್ಟಿಕೊಳ್ಳಲು ಸಹಕಾರಿ ಎಂದು ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಡಿ.ಎಸ್.ಮುನಿಂದ್ರ ಕುಮಾರ್ ತಿಳಿಸಿದರು.
ತಾಲೂಕಿನ ಐ.ಡಿ.ಹಳ್ಳಿಯಲ್ಲಿ ಮಧುಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಏರ್ಪಟಾಗಿದ್ದ ಎನ್ಎಸ್ಎಸ್ ಘಟಕದ ವಿಶೇಷ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಬಿರಗಳಲ್ಲಿ ಪಾಲ್ಗೊಳ್ಳುವ ಮೂಲಕ ಮನೋಧರ್ಮ ಬದಲಾವಣೆಗೆ ಆದ್ಯತೆ ನೀಡಿ ತಮ್ಮಲ್ಲಿರುವ ದುಶ್ಚಟ ತ್ಯಜಿಸುವ ಸಂಕಲ್ಪ ಮಾಡಬೇಕು. ಯುವ ಜನಾಂಗ ಹೊಸ ಅಲೋಚನೆಗಳಿಗೆ ಎಡೆ ಮಾಡಿ ಕೊಟ್ಟಾಗ ಕನಸುಗಳು ಸಕಾರಗೊಂಡು ಭವ್ಯ ಭಾರತ ನಿರ್ಮಾಣಕ್ಕೆ ಬುನಾದಿಯಾಗಬೇಕು ಎಂದರು. ಮುಖ್ಯ ಅತಿಥಿ ಪ್ರಾಧ್ಯಾಪಕ ಪುಟ್ಟರಾಜು ಶಿಬಿರಗಳಲ್ಲಿ ಕಲಿತ ಶಿಸ್ತು, ಜ್ಞಾನ ನಿಜ ಜೀವನದಲ್ಲಿ ಪಾಲಿಸಿ ತಮ್ಮ ವ್ಯಕ್ತಿತ್ವ ವಿಕಸನ ಮಾಡಿಕೊಂಡು ಆರೋಗ್ಯವಂತ ಸಮಾಜ ಕಟ್ಟಬೇಕು ಎಂದರು.
ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟಾಪುರ ಎ. ಶ್ರೀನಿವಾಸಲು
ಪಾವಗಡ: ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಶಿಕ್ಷಕ ವೆಂಕಟಾಪುರ ಎ. ಶ್ರೀನಿವಾಸಲು ಅವಿರೋಧ ಆಯ್ಕೆಯಾಗಿದ್ದಾರೆ.
ಈ ಹಿಂದೆ ತಾ.ಪ್ರಾಥಮಿಕಾ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿದ್ದ ತಿಪ್ಪಣ್ಣ ಇತ್ತೀಚಿಗೆ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರ ಆಯ್ಕೆ ಚುನಾವಣೆ ನಡೆದಿದು, ಚುನಾವಣೆಯಲ್ಲಿ ಸಂಘದ ಶಿಕ್ಷಕರೆಲ್ಲ ಸೇರಿ ತೀರ್ಮಾನಿಸಿ ಒಮ್ಮತವಾಗಿ ಬೆಂಬಲಿಸಿದ ಪ್ರಯುಕ್ತ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾಗಿ ನೇರಳಗುಂಟೆ ಸರ್ಕಾರಿ ಎಚ್ಪಿಎಸ್ ಶಾಲೆಯ ಶಿಕ್ಷಕ ಎ.ಶ್ರೀನಿವಾಸಲು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ನೂತನ ಅಧ್ಯಕ್ಷ ಎ.ಶ್ರೀನಿವಾಸಲು ಅವರು ಈ ಹಿಂದೆ ನಡೆದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗಳಲ್ಲಿ ಮೂರು ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿ ಸಂಘದ ಖಜಾಂಚಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಕರ್ತವ್ಯ ಲೋಪ: ಪಿಎಸ್ಐ ಅಶೋಕ್ಕುಮಾರ್ ಅಮಾನತು
ಪಾವಗಡ: ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಪಾವಗಡ ಠಾಣೆಯ ಪಿಎಸ್ಐ ಅಶೋಕ್ಕುಮಾರ್ ಅವರನ್ನು ಜಿಲ್ಲಾ ಎಸ್ಪಿ ಅಮಾನತು ಪಡಿಸಿ ಆದೇಶ ಹೊರಡಿಸಿದ್ದಾರೆ.
ಕಳೆದ ಒಂದು ವರ್ಷದ ಹಿಂದೆ ಪಾವಗಡ ಪೊಲೀಸ್ ಠಾಣೆಗೆ ಪಿಎಸ್ಐ ಆಗಿ ನಿಯೋಜಿತರಾದ ಅಶೋಕ್ ಕುಮಾರ್ ಎಂಬುವರು ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕರ ವಿಶ್ವಾಸ ಪಡೆಯುವಲ್ಲಿ ವಿಫಲರಾಗಿದ್ದರು.
ಸಮಸ್ಯೆಗಳ ಪರಿಹಾರಕ್ಕೆ ಠಾಣೆಗೆ ಬಂದ ಜನಸಾಮಾನ್ಯರೊಂದಿಗೆ ಅನುಚಿತ ವರ್ತನೆ ಕುರಿತು ಪಿಎಸ್ಐ ಬಗ್ಗೆ ಅನೇಕ ಆರೋಪಗಳಿದ್ದವು. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಮಟ್ಕಾ,ಇಸ್ಪೀಟ್ ದಂಧೆ ನಿಯಂತ್ರಿಸುವಲ್ಲಿ ಅಶೋಕ್ಕುಮಾರ್ ವಿಫಲರಾದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ.
ಕವಿತಾಕೃಷ್ಣರ ಕೃತಿ ಲೋಕಾರ್ಪಣೆ ಇಂದು
ತುಮಕೂರು: ಮಹಿಳಾ ಮತ್ತು ಮಕ್ಕಳ ಕೂಟದ ವತಿಯಿಂದ ತುಮಕೂರು ಸಮೀಪದ ಕ್ಯಾತ್ಸಂದ್ರದ ಕವಿತಾಕೃಷ್ಣ ಸಾಹಿತ್ಯಮಂದಿರದಲ್ಲಿ ಕವಿತಾಕೃಷ್ಣರವರಿಗೆ ಅಭಿನಂದನಾ ಸಮಾರಂಭ ಹಾಗೂ ಪದ್ಮಾಕೃಷ್ಣಮೂರ್ತಿ ಅವರ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಮಾ. 23 ರಂದು ಬೆಳಿಗ್ಗೆ 10-30 ಕ್ಕೆ ಏರ್ಪಾಟಾಗಿದೆ. ಸಮಾರಂಭವನ್ನು ಸಮಾಜ ಸೇವಕಿ ಸುನಿತಾ ಮೂರ್ತಿ ಉದ್ಘಾಟಿಸಲಿದ್ದಾರೆ. ಕೃತಿಯನ್ನು ಲೇಖಕಿ ಪದ್ಮಾ ಕೃಷ್ಣಮೂರ್ತಿ ಅರ್ಪಿಸಲಿದ್ದಾರೆ. ನಾಟ್ಯಾಚಾರ್ಯ ಕೆ.ಎಂ. ರಾಮನ್ ಕವಿತಾಕೃಷ್ಣ ಅವರನ್ನು ಸನ್ಮಾನಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊರಟಗೆರೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಬಿ. ಇಂದಿರಾಬಾಯಿ, ಹೆಬ್ಬಾಕ ಪ್ರಕಾಶನದ ಸತೀಶ್ ಹೆಬ್ಬಾಕ, ಲೇಖಕ ಸುಮ ಶ್ರೀಹರ್ಷ ಪಾಲ್ಗೊಳ್ಳಲ್ಲಿದ್ದಾರೆ. ಅಧ್ಯಕ್ಷತೆಯನ್ನು ಮಹಿಳಾ ಮತ್ತು ಮಕ್ಕಳ ಒಕ್ಕೂಟದ ಕಮಲಾ ಬಡ್ಡಿಹಳ್ಳಿ ವಹಿಸಲಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಪಂಗಡಗಳ ವಿಭಾಗಕ್ಕೆ ನೇಮಕ
ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಪಂಗಡಗಳ ವಿಭಾಗದ ಜಿಲ್ಲಾಧ್ಯಕ್ಷ ಟಿ.ಬಿ. ಮಲ್ಲೇಶ್ ಅವರು ಈ ಕೆಳಕಂಡವರನ್ನು ಪರಿಶಿಷ್ಟ ಪಂಗಡಗಳ ವಿಭಾಗಕ್ಕೆ ನೇಮಕ ಮಾಡಿಕೊಂಡಿದ್ದಾರೆ. ಜಿಲ್ಲಾ ಉಪಾಧ್ಯಕ್ಷರಾಗಿ ಮರಳೂರು ನಾಗರಾಜ್, ಬುಕ್ಕಪಟ್ಟಣ ಬಿ.ಆರ್. ಕಿರಣ್, ಪಿ.ಎನ್.ಆರ್. ಪಾಳ್ಯ ಮಂಜುಳಮ್ಮ, ಕಾರ್ಯದರ್ಶಿಟಿ.ಹೆಚ್. ಭೀಮಾನಾಯಕ್, ಕೊರಟಗೆರೆ ನಗರ ಬ್ಲಾಕ್ ಅಧ್ಯಕ್ಷ ಕೆ.ಆರ್. ಓಬಳರಾಜು, ಗ್ರಾಮಾಂತರ ಗೊಂದಿಹಳ್ಳಿ ಗಂಗರಾಜು, ಕಾರ್ಯದರ್ಶಿಯಾಗಿ ಹನುಮಂತರಾಜು, ತುಮಕೂರು ತಾಲೂಕು ಗ್ರಾಮಾಂತರಕ್ಕೆ ಊರುಕೆರೆ ರಂಗನಾಥ್, ನಾಗವಲ್ಲಿ ಪ್ರಹ್ಲಾದ್ ನಾಯಕ್, ಬೆಳ್ಳಾವಿ ದೇವರು, ತಿಪಟೂರು ನಗರ ಸಂಜೀವಯ್ಯ, ಗ್ರಾಮಾಂತರ ಕಲ್ಕೆರೆ ಚಿಕ್ಕಯ್ಯ, ತುರುವೇಕೆರೆಗೆ ಆರ್. ಕೃಷ್ಣಪ್ಪ, ಗ್ರಾಮಾಂತರ ಲಕ್ಷ್ಮೀನಾರಾಯಣ, ಸಿ.ಎನ್.ಹಳ್ಳಿಗೆ ಶ್ರೀನಿವಾಸಮೂರ್ತಿ, ಗ್ರಾಮಾಂತರಕ್ಕೆ ಜಗನ್ನಾಥ್, ಶಿರಾ ತಾಲೂಕು ಅಧ್ಯಕ್ಷರಾಗಿ ರಾಕೇಶ್, ಗ್ರಾಮಾಂತರ ಕಡವಿಗೆರೆ ಜಗನ್ನಾಥ್, ಕಾರ್ಯದರ್ಶಿಯಾಗಿ ಅಜಯಕುಮಾರ್, ಪಾವಗಡ ಅಧ್ಯಕ್ಷರಾಗಿ ರಾಜೇಶ್, ಮಧುಗಿರಿ ಗ್ರಾ. ವೀರಣ್ಣನಹಳ್ಳಇ ರಾಜಣ್ಣ, ಗುಬ್ಬಿಗೆ ಹೇರೂರು ನಾಗರಾಜು, ಗ್ರಾಮಾಂತರ ಕೃಷ್ಣಮೂರ್ತಿ ನೇಮಕಗೊಂಡಿದ್ದಾರೆ.
ಡೆಂಘೀ ಕುರಿತು ಅರಿವು ಆಂದೋಲನ
ಹುಳಿಯಾರು: ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು, ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಡೆಂಘೀ ಜ್ವರದ ಬಗ್ಗೆ ಅರಿವು ಅಂದೋಲನ ಜಾಥಾ ನಡೆಸಿದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಹಿರಿಯ ಸಹಾಯಕ ಬಸವರಾಜು ಡೆಂಘೀ ಜ್ವರ ಹರಡುವ ಬಗ್ಗೆ ಹಾಗೂ ಇದನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಅರಿವು ಮೂಡಿಸಿದರು. ನಿಂತ ನೀರಿನಲ್ಲಿ ಸೊಳ್ಳೆಮರಿ ಉತ್ಪತ್ತಿಯಾಗಿ ವೃದ್ಧಿಸುವ ಬಗ್ಗೆ ಮಾಹಿತಿ ನೀಡಿದ ಅವರು ಈ ಬಗ್ಗೆ ಸಾರ್ವಜನಿಕ ಸ್ಥಳ, ಚರಂಡಿಗಳಲ್ಲಿ ನೀರು ನಿಲ್ಲದಂತೆ ಮುಂಜಾಗ್ರತಾ ಕ್ರಮವಹಿಸಬೇಕೆಂದು ಮನವಿ ಮಾಡಿದರು. ಈ ನಿಟ್ಟಿನಲ್ಲಿ ಶಾಲಾ ಮಕ್ಕಳ ಜಾಥಾದ ಮೂಲಕ ಗ್ರಾಮಸ್ಥರಲ್ಲಿ ಡೆಂಘೀ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ದೊಡ್ಡಬಿದರೆ ಕರಿಯಮ್ಮದೇವಿಯ ಜಾತ್ರಾ ಮಹೋತ್ಸವ
ಹುಳಿಯಾರು: ಹೋಬಳಿ ದೊಡ್ಡಬಿದರೆ ಗ್ರಾಮದೇವತೆ ಶ್ರೀಕರಿಯಮ್ಮದೇವಿ ಹಾಗೂ ಬೇವಿನಳ್ಳಿ ದೇವಿಯವರ ಜಾತ್ರಾ ಮಹೋತ್ಸವದ ಅಂಗವಾಗಿ ಕೆಂಡ ಮತ್ತು ಸಿಡಿ ಉತ್ಸವ ಶನಿವಾರ ನಡೆಯಿತು. ಮಧುವಣಗಿತ್ತಿ, ಮಡಲಕ್ಕಿಸೇವೆಯೊಂದಿಗೆ ಜಾತ್ರೆ ಆರಂಭಗೊಂಡಿದ್ದು, ಶನಿವಾರದಂದು ನೂರಾರು ಭಕ್ತರ ಹಾಗೂ ಚಿಕ್ಕಬಿದರೆ ಕರಿಯಮ್ಮ, ಹುಳಿಯಾರಿನ ಹುಳಿಯಾರಮ್ಮ ದೇವತೆಗಳ ಸಮ್ಮುಖದಲ್ಲಿ ಸಿಡಿ ಉತ್ಸವ ನಡೆಯಿತು. ಗ್ರಾಮದ ಮೂಲಸ್ಥಾನದಿಂದ ಬಾರೆಯಮೇಲಿರುವ ಬೇವಿನಳ್ಳಿ ದೇವಿಯವರ ದೇವಾಲಯದವರೆಗೂ ಅಮ್ಮನವರನ್ನು ನಡೆಮುಡಿಯೊಂದಿಗೆ ಮೆರವಣಿಗೆ ಮೂಲಕ ಕರೆತರಲಾಯಿತು. ನಂತರ ಆಗಮಿಸಿದ್ದ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಕರಿಯಮ್ಮದೇವಿ ಕಮಿಟಿ, ಪಾತಲಿಂಗೇಶ್ವರಸ್ವಾಮಿ ಟ್ರಸ್ಟ್ನ ಸದಸ್ಯರು, ಕೋಡಿಹಳ್ಳಿ,ದಾಸೇಗೌಡನಹಟ್ಟಿ ಗ್ರಾಮಗಳ ಭಕ್ತಾಧಿಗಳು ಆಗಮಿಸಿದ್ದರು.
ಡಿಎಸ್ಎಸ್ನಿಂದ ಮತದಾನ ಜಾಗೃತಿ
ತುಮಕೂರು: ತುಮಕೂರು ಜಿಲ್ಲಾ ದಲಿತ ಸಂಘರ್ಷ ಸಮಿತಿ (ಮೂರ್ತಿ ಬಣ) ವತಿಯಿಂದ ತುಮಕೂರು ಲೋಕಸಭಾ
ಕ್ಷೇತ್ರದ ಮಾದಿಗ ಜನಾಂಗದ ಮುಖಂಡರಿಗೆ ರಾಜಕೀಯ ಸವಾಲು ಮತ್ತು ಮತದಾನ ಜಾಗೃತಿ ಎಂಬ ಕಾರ್ಯಕ್ರಮವನ್ನು ಜಿಲ್ಲಾಧ್ಯಕ್ಷ ಪಿ.ಎನ್. ರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಮತಹಾಕಿ ಗೆಲ್ಲಿಸಿರುವ ರಾಜಕೀಯ ಮುಖಂಡರಿಂದ ಮೋಸ ಹೋಗಿದ್ದೀರಿ. ಮಾದಿಗ ಜನಾಂಗ ರಾಜಕೀಯ ಕ್ಷೇತ್ರದಲ್ಲಿ ಬೆಳೆಯಲು ಬಿಟ್ಟಿಲ್ಲ. ಲೋಕಸಭಾ ಕ್ಷೇತ್ರದ ವಿಶೇಷ ನಿಧಿಯಲ್ಲಿ ಶೇ. 22.75 ಅಡಿಯಲ್ಲಿ ಮಾದಿಗ ಜನಾಂಗ ಅಭಿವೃದ್ಧಿ ಕಾಲೋನಿಗೆ, ಭವನಕ್ಕೆ, ರಸ್ತೆ ಚರಂಡಿಗಳ ಅಭಿವೃದ್ಧಿಗೆ ಅನುದಾನ ಕೊಡದೆ ಮಾದಿಗ ಕಾಲೋನಿಗಳ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದಿದ್ದಾರೆ.
ಮಣ್ಣಮ್ಮ ದೇವಿ ಅದ್ಧೂರಿ ರಥೋತ್ಸವ ಸಂಪನ್ನ
ಗುಬ್ಬಿ: ತಾಲೂಕಿನ ಮಾದಾಪುರ ಬಳಿ ಇರುವ ಮಣ್ಣೆಮಾರಿ ಕಾವಲ್ ಗ್ರಾಮದ ಮಣ್ಣಮ್ಮ ದೇವಿಯ ರಥೋತ್ಸವ ಅದ್ಧೂರಿಯಾಗಿ ನೆರವೇರಿತು.
ರಥೋತ್ಸವದ ಪ್ರಯುಕ್ತ ವಿವಿಧ ಪೂಜಾ ಕೈಂಕರ್ಯಗಳಲ್ಲಿ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಮಂದಿ ಪಾಲ್ಗೊಂಡು ಪೂಜೆ ನೆರವೇರಿಸಿದರು.
ಬ್ರಹ್ಮರಥೋತ್ಸದ ಅಂಗವಾಗಿ ಕಳೆದ ಐದು ದಿನಗಳಿಂದ ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ, ಮಡೆ, ಯಾದವರ ಆರತಿ, ಆರತಿ ಮತ್ತು ಅಗ್ನಿಕುಂಡ ನಡೆಸಿ ತೀರ್ಥ ಪ್ರಸಾದ ವಿನಿಯೋಗಿಸಲಾಯಿತು.
ಜೆಡಿಎಸ್ ಅಭ್ಯರ್ಥಿ ಪುಟ್ಟರಾಜು ನಾಮಪತ್ರ ನಾಳೆ
ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿ.ಎಸ್. ಪುಟ್ಟರಾಜು ಅವರು ಮಾ.24ರಂದು ನಾಮಪತ್ರ ಸಲ್ಲಿಸಲಿದ್ದಾರೆ.
24ರ ಬೆಳಗ್ಗೆ 10ಗಂಟೆಗೆ ನಗರದ ಕಾಳಿಕಾಂಬ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ನಾಮಪತ್ರ ಸಲ್ಲಿಸಲಿದ್ದಾರೆ.
ಅಭ್ಯರ್ಥಿ ಪುಟ್ಟರಾಜು ಅವರೊಂದಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಶಾಸಕರು, ಮಾಜಿ ಶಾಸಕರು ಹಾಗೂ ಪಕ್ಷದ ಮುಖಂಡರು ಭಾಗವಹಿಸುವರು. ನಾಮಪತ್ರ ಸಲ್ಲಿಕೆ ನಂತರ ಕುಮಾರಸ್ವಾಮಿ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ರಮೇಶ್ ತಿಳಿಸಿದ್ದಾರೆ.
ಅನನ್ಯ ಪ್ರಕಾಶನದದಿಂದ ಯುಗಾದಿ ಕಥಾಸ್ಪರ್ಧೆ
ತುಮಕೂರು: ತುಮಕೂರು ನಗರ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಅನನ್ಯ ಪ್ರಕಾಶನದ ವತಿಯಿಂದ ಯುಗಾಧಿ ಕಥಾಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಲೇಖಕಿ ಎಂ.ಸಿ. ಲಲಿತಾ ತಿಳಿಸಿದ್ದಾರೆ.
ನಗದು ಬಹುಮಾನ ಹಾಗೂ ಪ್ರಶಸ್ತಿಯನ್ನು ವಿಜೇತರಿಗೆ ನೀಡಲಾಗುವುದು. ವಯೋವುತಿ ಇರುವುದಿಲ್ಲ. ಕಥಾ ಸ್ಪರ್ಧೆ ವಿಜೇತರಿಗೆ ಕ್ರಮವಾಗಿ ನಗದು ಬಹುಮಾನದ ಜತೆ ಪ್ರಶಸ್ತಿ ಪತ್ರ ನೀಡಲಾಗುವುದು.
ಆಸಕ್ತರು 4 ಪುಟಗಳಿಗೆ ಮೀರದಂತೆ ತಮ್ಮ ಕಥೆಗಳನ್ನು ಎಂ.ಸಿ. ಲಲಿತಾ ಅಧ್ಯಕ್ಷರು, ಅನನ್ಯ ಪ್ರಕಾಶನ, ನಿಸರ್ಗ, ಮುನಿಸಿಪಲ್ ಲೇಔಟ್, ಸಿದ್ಧಗಂಗಾ ಬಡಾವಣೆ, ತುಮಕೂರು, ಇಲ್ಲಿಗೆ ಮಾ. 24 ರೊಳಗೆ ಕಳುಹಿಸುವಂತೆ ಕೋರಲಾಗಿದೆ. ಹೆಚ್ಚಿನ ವಿವರಗಳಿಗೆ 9880113462 ಸಂಪರ್ಕಿಸುವಂತೆ ಕೋರಲಾಗಿದೆ.