ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನೈಜ ಸಮಸ್ಯೆ ಮರೆ ಮಾಚುವ ಕಾಂಗ್ರೆಸ್, ಬಿಜೆಪಿ

Vishwanath S
Updated On : 23 Mar 2014, 12:49 pm

ತುಮಕೂರು: ಕಾಂಗ್ರೆಸ್-ಬಿಜೆಪಿ ದೇಶದ ನೈಜ ಸಮಸ್ಯೆಗಳನ್ನು ಮರೆಮಾಚಿ ರಾಜಕಾರಣ ಮಾಡುತ್ತಿವೆ ಎಂದು ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಿ. ರಾಜಶೇಖರಮೂರ್ತಿ ಆರೋಪಿಸಿದರು.
ಅವರು ತುಮಕೂರಿನಲ್ಲಿ ನಾವೆಲ್ಲಾ ಚೆನ್ನಾಗಿರಲು ಮೂವತ್ತು ನಿಮಿಷ ಮೀಸಲಿಡಿ ಪ್ಲೀಸ್ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ಮುಂಬರುವ 16ನೇ ಲೋಕಸಭಾ ಚುನಾವಣೆಯಲ್ಲಿ ಯುವಜನತೆಯನ್ನು ಆಕರ್ಷಿಸಲು ಬಿಜೆಪಿ-ಕಾಂಗ್ರೆಸ್ ಪೈಪೋಟಿಗೆ ಬಿದ್ದಿದ್ದು, ಯುವಜನತೆಯ ನೈಜ ಸಮಸ್ಯೆಗಳನ್ನು  ಮರೆ ಮಾಚುತ್ತಿವೆ. ಈ ಎರಡೂ ರಾಷ್ಟ್ರೀಯ ಪಕ್ಷಗಳು ಐಎಂಎಫ್, ವಿಶ್ವಬ್ಯಾಂಕ್ ಮತ್ತು ದೇಶದ 100 ಕಾರ್ಪೋರೇಟ್ ಕಂಪನಿಗಳ ನಿರ್ದೇಶನದಂತೆ ನಡೆದುಕೊಳ್ಳುತ್ತಿವೆ. ದೇಶದಲ್ಲಿನ 100 ಜನರ ಆಸ್ತಿ ದೇಶದ ಒಟ್ಟು ಉತ್ಪನ್ನದಲ್ಲಿ ಶೇ. 25 ರಷ್ಟಿದೆ. ಕಳೆದ 10 ವರ್ಷಗಳಲ್ಲಿ 120 ಕ್ಕೂ ಬಿಲಿಯನೇರ್‌ಗಳು (6000 ಕೋಟಿ ರು. ಗಿಂತ ಹೆಚ್ಚು) ಮತ್ತು ಒಂದು ಲಕ್ಷಕ್ಕೂ ಹೆಚ್ಚು ಮಿಲಿಯನೇರ್‌ಗಳು (6 ಕೋಟಿ ರು. ಗಳಿಗಿಂತ ಹೆಚ್ಚು) ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಬೆಳೆಸಿದೆ. ಹೀಗೆ ಕೆಲವೇ ಶ್ರೀಮಂತರ ಬಳಿ ಸಂಪತ್ತು ಕ್ರೋಢೀಕರಣವಾಗುತ್ತಿದೆ. ನವ ಉದಾರೀಕರಣ ನೀತಿಗಳ ಪರಿಣಾಮವಾಗಿ, ಖಾಸಗಿ ಕಂಪನಿಗಳು ದೇಶದ ನೈಸರ್ಗಿಕ ಸಂಪತ್ತನ್ನು ಲೂಟಿ ಹೊಡೆಯುತ್ತಿವೆ.
2ಜಿ, ಕಲ್ಲಿದ್ದಲು, ಆದರ್ಶ ಹಗರಣ, ಕಾಮನ್‌ವೆಲ್ತ್ ಕ್ರೀಡಾ ಕೂಟ ಹಗರಣ, ಅಂತರಿಕ್ಷ ಹಗರಣ, ವಿಐಪಿ ಹೆಲಿಕಾಪ್ಟರ್ ಹಗರಣ ಇತ್ಯಾದಿ ಹಲ ಹಗರಣಗಳಲ್ಲಿ ಸಚಿವರು, ಅಧಿಕಾರಿಗಳು, ಸಂಸದರು ಆಪಾದನೆಗಳನ್ನು ಎದುರಿಸುತ್ತಿದ್ದು, ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲಷ್ಟೆ ಬಿಡುಗಡೆ ಹೊಂದಿದ್ದಾರೆ.
ಸಂಶಯವಿಲ್ಲ: ಕಾಂಗ್ರೆಸ್ ಆರ್ಥಿಕ ನೀತಿಯನ್ನೇ ಅನುಸರಿಸುವ ಬಿಜೆಪಿ ಕೂಡ ಈ ಹಿಂದೆ ಅಧಿಕಾರ ನಡೆಸಿದ್ದು, ನವ ಉದಾರವಾದಿ ಆರ್ಥಿಕ ನೀತಿಯನ್ನೇ ಮುಂದುವರೆಸುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.
ಜತೆಗೆ ಕೋಮುವಾದಿ ಹಣೆಪಟ್ಟಿ ಹೊತ್ತಿರುವ ಬಿಜೆಪಿ, ಕೋಮುಸಾಮರಸ್ಯ ಹೊಂದಿರುವ ಭಾರತೀಯ ಸಂಸ್ಕೃತಿಗೆ ತಕ್ಕ ಪಕ್ಷವಲ್ಲ ಎಂದು ಡಿವೈಎಫ್‌ಐ ಅಭಿಪ್ರಾಯಪಟ್ಟಿದೆ.
ಹೀಗಾಗಿ ರಾಷ್ಟ್ರೀಯ ಪಕ್ಷಗಳಿಗೆ ದೇಶದ ಬಗ್ಗೆ ಕಾಳಜಿ ಹಾಗೂ ಬದ್ಧತೆಯಿಲ್ಲ.  ಬಿಜೆಪಿ-ಕಾಂಗ್ರೆಸ್ ಹೊರತು ಪಡಿಸಿ, ಜಾತ್ಯತೀತ, ಜನಪರ ಪಕ್ಷವನ್ನು ಬೆಂಬಲಿಸುವಂತೆ ರಾಜಶೇಖರಮೂರ್ತಿ ಮನವಿ ಮಾಡಿದರು.
ಜನಪರ ಧೋರಣೆಗಳೇ ದಾರಿದೀಪ: ಬಗಲಾಗಬೇಕಿರುವುದು ವ್ಯಕ್ತಿಗಳಲ್ಲ, ಧೋರಣೆಗಳು. ಜನಪರ ಧೋರಣೆಗಳೇ ನಮಗೆ ದಾರಿದೀಪ. ಹೀಗಾಗಿ ಭ್ರಷ್ಟಾಚಾರ, ಮತಾಂಧತೆ, ನಿರುದ್ಯೋಗ ಹೋಗಲಾಡಿಸುವ ರಾಜಕೀಯ ಧೋರಣೆಗಳನ್ನು ಹೊಂದಿರುವ ರಾಜಕೀಯ ಶಕ್ತಿಗಳನ್ನು ಬೆಂಬಲಿಸುವಂತೆ ಡಿವೈಎಫ್‌ಐ ಮನವಿ ಮಾಡುತ್ತದೆ ಎಂದು ತಿಳಿಸಿದರು.
ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಯ ದೂರದೃಷ್ಟಿಯಿರುವ, ಅದನ್ನು ಜಾರಿಗೊಳಿಸುವ ಇಚ್ಛಾಶಕ್ತಿಯಿರುವ, ಕಾಂಗ್ರೆಸ್, ಬಿಜೆಪಿ ಹೊರತಾದ, ಜಾತ್ಯತೀತ ಪರ್ಯಾಯ ರಾಜಕೀಯ ಶಕ್ತಿಯನ್ನು ಬೆಂಬಲಿಸುವಂತೆ ಕರೆ ನೀಡಿದರು.
ತುಮಕೂರು ಜಿಲ್ಲೆಯಲ್ಲಿನ ಯುವ ರೈತರ, ವಿದ್ಯಾವಂತ-ಅರೆ ವಿದ್ಯಾವಂತ ಯುವಜನತೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರಿ ಶಿಕ್ಷಣ, ಆರೋಗ್ಯ ಮುಂತಾದ ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕು. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಖಾಸಗೀಕರಣ ತಡೆಯಬೇಕು. ಜಿಲ್ಲೆಯ ನೈಸರ್ಗಿಕ ಸಂಪನ್ಮೂಲವನ್ನು ಬಳಸಿಕೊಂಡು ಸಾರ್ವಜನಿಕ ಕಂಪನಿಗಳನ್ನು ಸ್ಥಾಪಿಸದ ಹೊರತು, ಜಿಲ್ಲೆಯಲ್ಲಿರುವ ನಿರುದ್ಯೋಗ ಸಮಸ್ಯೆಗಳಿಗೆ ಅನ್ಯಮಾರ್ಗವಿಲ್ಲ. ಹೀಗಾಗಿ ಕೃಷಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಬೇಕು.
ಇದಕ್ಕಾಗಿ ಕುಡಿಯುವ ನೀರಿಗಾಗೇ ಇರುವ ಡಾ. ಪರಮಶಿವಯ್ಯನವರ ವರದಿಯನ್ನು ಜಾರಿಗೊಳಿಸಬೇಕು. ಇಂತಹ ಜನಾಭಿವೃದ್ಧಿ ಯೋಜನೆಗಳನ್ನು ಕಾಂಗ್ರೆಸ್-ಬಿಜೆಪಿಯಿಂದ ನಿರೀಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ ಜನತೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬೇಕಿದೆ ಎಂದರು.
 ಡಿವೈಎಫ್‌ಐ ಜಿಲ್ಲಾಧ್ಯಕ್ಷ ಎಸ್. ರಾಘವೇಂದ್ರ, ಜಿಲ್ಲಾ ಉಪಾಧ್ಯಕ್ಷ ಎಂ.ಜಿ.ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಆರ್. ನಾಗರಾಜು ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement