ಕಾಂಗ್ರೆಸ್ ತಿರಸ್ಕರಿಸಿ: ನಟಿ ರಕ್ಷಿತಾ ಕರೆ
ಕುಣಿಗಲ್: ಮಹಿಳೆಯರಿಗೆ ಸೂಕ್ತ ರಕ್ಷಣೆ, ಭದ್ರತೆ ಕಲ್ಪಿಸದ ಕಾಂಗ್ರೆಸ್ ಪಕ್ಷಕ್ಕೆ ದೇಶದ ಜನತೆಯ ಮತ ಕೇಳುವ ಹಕ್ಕಿಲ್ಲ. ಅದರಲ್ಲೂ ಮಹಿಳೆಯರಿಂದ ಮತ ಕೇಳುವ ಯಾವುದೇ ನೈತಿಕತೆ ಉಳಿಸಿಕೊಂಡಿಲ್ಲ. ಮಹಿಳೆಯರಿಗೆ ರಕ್ಷಣೆ ನೀಡದ ಕಾಂಗ್ರೆಸ್ ತಿರಸ್ಕರಿಸಿ ಬಿಜೆಪಿಯನ್ನು ಬೆಂಬಲಿಸುವಂತೆ ಇತ್ತೀಚೆಗೆ ಜೆಡಿಎಸ್ ತೊರೆದು ಬಿಜೆಪಿ ಸೇರಿದ ಚಿತ್ರನಟಿ ರಕ್ಷಿತಾ ತಿಳಿಸಿದರು.
ಭಾನುವಾರ, ತಾಲೂಕಿನ ಗವಿಮಠ ಗ್ರಾಮದಲ್ಲಿ ಹಮ್ಮಿಕೊಳ್ಳಲಾದ ಬಿಜೆಪಿ ಕಾರ್ಯಕರ್ತರ ಬೂತ್ ಮಟ್ಟದ ಸಮಾವೇಶದಲ್ಲಿ ಮಾತನಾಡಿ, ದೇಶವನ್ನು 6 ದಶಕಗಳ ಕಾಲ ಆಳಿದ ಕಾಂಗ್ರೆಸ್ ಪಕ್ಷ, ಮಹಿಳೆಯರಿಗೆ ಶೇ.33 ಮೀಸಲು ಕಲ್ಪಿಸುವ ಬಗ್ಗೆ ಕೇವಲ ಬಾಯಿಮಾತಿನಲ್ಲೆ ಹೇಳಿಕೊಂಡು ಬಂದಿದೆ.
ಅನುಷ್ಠಾನಕ್ಕೆ ತರಲಿಲ್ಲ. ರಾಷ್ಚ್ರ ಮತ್ತು ರಾಜ್ಯದಲ್ಲಿ ದಿನಂಪ್ರತಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಕಾಂಗ್ರೆಸ್ ಸರ್ಕಾರ ಸಾಕಷ್ಚು ಹಗರಣದಲ್ಲಿ ಮುಳುಗಿ ಮಹಿಳೆಯರ ಅಭಿವೃದ್ಧಿಗೆ ಕ್ರಮಕೈಗೊಂಡಿಲ್ಲ, ಮಹಿಳೆಯರ ಸಬಲೀಕರಣ ಬಿಜೆಪಿಯಿಂದ ಮಾತ್ರ ಸಾಧ್ಯವಾಗಿದ್ದು, ಕಾರ್ಯಕರ್ತರು ಇದನ್ನೆಲ್ಲ ಜನತೆ ಮುಂದಿಟ್ಟು ಬಿಜೆಪಿ ಅಭ್ಯರ್ಥಿ ಬೆಂಬಲಿಸುವಂತೆ ಕರೆ ನೀಡಿದರು.
ಬೆದರಿದ ಕಾಂಗ್ರೆಸ್: ಮಾಜಿ ಡಿಸಿಎಂ ಆರ್. ಅಶೋಕ್ ಮಾತನಾಡಿ, ನರೇಂದ್ರ ಮೋದಿಯವರ ಜನಪ್ರಿಯತೆಗೆ ಬೆದರಿರುವ ಕಾಂಗ್ರೆಸ್ ಮುಖಂಡರು, ದಿನಂಪ್ರತಿ ತಮ್ಮ ಭಾಷಣದಲ್ಲಿ ನಮೋ ಬಗ್ಗೆ ಬಿಜೆಪಿಯವರಿಗಿಂತ ಹೆಚ್ಚು ಪ್ರಚಾರಕೊಡುತ್ತಿದ್ದಾರೆ. ವಾಜಪೇಯಿ ಆಡಳಿತದಲ್ಲಿ 2 ವರ್ಷಕ್ಕೊಮ್ಮ ಮಾತ್ರ ಪೆಟ್ರೋಲ್ ಉತ್ಪನ್ನಗಳ ಬೆಲೆಏರಿಕೆಯಾಗುತ್ತಿದ್ದು, ಮಹಾಸುಳ್ಳುಗಾರ ವೀರಪ್ಪ ಮೊಯ್ಲಿ ಕೃಪೆಯಿಂದ ತಿಂಗಳಿಗೆ ಹಲವು ಬಾರಿದರ ಏರಿಕೆಯಿಂದ ನಾಗರಿಕರು ಪರದಾಡುವಂತಾಗಿದೆ. ದೇಶದ ಜನತೆಗೆ ಬೆಲೆ ಏರಿಕೆಯ ಹೊರೆ ಹಾಕಿ, ಸಾಮಾನ್ಯ ಜನತೆಯನ್ನು ಸಂಕಷ್ಟಕ್ಕೀಡು ಮಾಡಿದ್ದೆ ಸಾಧನೆಯಾಗಿದೆ ಎಂದರು.
ಜೆಡಿಎಸ್‌ನಿಂದ ಏನು ಸಾಧ್ಯ: 2 ಸ್ಥಾನ ಸಿಕ್ಕರೆ ಜೆಡಿಎಸ್‌ನಿಂದ ಜನತೆ ಏನನ್ನು ನಿರೀಕ್ಷಿಸಲು ಸಾಧ್ಯವಿಲ್ಲ, ಸದಾ ಸ್ವಾರ್ಥಪರ ಸಾಧನೆಯಲ್ಲಿ ಮುಳುಗಿರುವ ಜೆಡಿಎಸ್, ಹಾಗೂ ಹಗರಣಗಳಲ್ಲಿ ಮುಳುಗಿ, ದೇಶವನ್ನು ಮಾರಲು ಹೊರಟಿರುವ ಕಾಂಗ್ರೆಸ್ ತಿರಸ್ಕರಿಸಿ, ದೇಶದ ಭದ್ರತೆ, ಸಂಪೂರ್ಣ ಅಭಿವೃದ್ಧಿಗೆ ನಮೋ ನೇತೃತ್ವದ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಲು ಮತದಾರರಲ್ಲಿ ಜಾಗೃತಿ ಮೂಡಿಸಲು ಕಾರ್ಯಕರ್ತರು ಶ್ರಮಿಸಬೇಕೆಂದರು.
ಮಾಜಿ ಸಚಿವ ರಾಮಚಂದ್ರಗೌಡ ಮಾತನಾಡಿ, ದೇಶದ ಜನತೆ ವಾರ್ಷಿಕವಾಗಿ ಏಳುವರೆಲಕ್ಷ ಕೋಟಿ ರು. ತೆರಿಗೆ ನೀಡುತ್ತಿದ್ದಾರೆ. ಪ್ರತಿಯೊಬ್ಬ ಸಾಮಾನ್ಯ ನಾಗರೀಕರ ಮೇಲೆ ತೆರಿಗೆ ಹೇರಿರುವ ಕಾಂಗ್ರೆಸ್, ಅಂಬಾನಿ ಸೇರಿದಂತೆ ಇತರೆ ಕೈಗಾರಿಕೋದ್ಯಮಿಗಳಿಗೆ ತೆರಿಗೆಯಿಂದ ಮುಕ್ತಿ ನೀಡಿ ಸಾಮಾನ್ಯ ಜನತೆಯ ಮೇಲೆ ತೆರೆಗೆಹೊರೆ ಹಾಕಿ ತೆರಿಗೆ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ ಎಂದರು.