ಕೋಟಿ ಆಸ್ತಿ ಒಡೆಯ ಜಿಎಸ್ಬಿ ಬಳಿ ಕಾರಿಲ್ಲ!
ತುಮಕೂರು: ತುಮಕೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದ ಜಿ.ಎಸ್.ಬಸವರಾಜು ಸೋಮವಾರ ನಾಮಪತ್ರ ಸಲ್ಲಿಸಿದ್ದು, ಆಸ್ತಿ ವಿವರ ಇಂತಿದೆ.
ಅವರು ನಾಮಪತ್ರದೊಂದಿಗೆ ಸಲ್ಲಿಸಿರುವ ಆಸ್ತಿ ಪ್ರಮಾಣ ಪತ್ರದಲ್ಲಿ ವೈಯಕ್ತಿಕವಾಗಿ 17.23 ಕೋಟಿ ಮೌಲ್ಯದ ಸ್ಥಿರಾಸ್ಥಿ ಹಾಗೂ 2.52 ಕೋಟಿ ರು. ಮೌಲ್ಯದ ಚರಾಸ್ಥಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. 19 ಕೋಟಿ ರು.ಗಳಿಗೂ ಮೀರಿದ ಆಸ್ತಿ ಹೊಂದಿದ್ದರೂ ಇವರ ಬಳಿ ಸ್ವಂತ ಕಾರಿಲ್ಲ. ಆದರೆ ಪತ್ನಿ ಎಸ್.ಶಕುಂತಲಾ ಅವರ ಬಳಿ 4 ಲಕ್ಷ ರು. ಮೌಲ್ಯದ ಟೊಯೊಟಾ ಇನ್ನೋವಾ ಕಾರು ಸೇರಿ 2.81 ಕೋಟಿ ಮೌಲ್ಯದ ಚರಾಸ್ಥಿ ಹಾಗೂ 4.99 ಕೋಟಿ ರು. ಮೌಲ್ಯದ ಸ್ಥಿರಾಸ್ಥಿತಿಯಿದೆ. ಚರಾಸ್ಥಿಯ ಪೈಕಿ ಸಂಸದರು ತುಮಕೂರು ನಗರದ ಎಸ್ಬಿಎಂ, ವೀರಶೈವ ಬ್ಯಾಂಕ್, ತುಮಕೂರು ಮರ್ಚೆಂಟ್ಸ್ ಸೌಹಾರ್ದ ಸಹಕಾರಿ ಸೇರಿ ವಿವಿಧ ಬ್ಯಾಂಕುಗಳು ಹಾಗೂ ದೆಹಲಿ ಪಾರ್ಲಿಮೆಂಟ್ನ ಎಸ್ಬಿಐ ಬ್ಯಾಂಕ್ ಖಾತೆಯಲ್ಲಿ ಸೇರಿ 2.40 ಕೋಟಿ ರು.ಗಳಷ್ಟು ನಗದು ಹಣ ಹೊಂದಿದ್ದಾರೆ. ಪತ್ನಿ ಶಂಕುತಲಾ ಅವರು 2.65 ಕೋಟಿ ರು.ಗಳಷ್ಟು ಮೊತ್ತವನ್ನು ನಗದು, ಠೇವಣಿ, ಬಾಂಡ್ ರೂಪದಲ್ಲಿ ಹೊಂದಿದ್ದಾರೆ.
ಸ್ಥಿರಾಸ್ಥಿಯ ಪೈಕಿ ಗುಬ್ಬಿ ತಾಲೂಕು ಎನ್. ಮತ್ತಿಘಟ್ಟದಲ್ಲಿ 90 ಲಕ್ಷ ರು. ಮೌಲ್ಯದ 21 ಎಕರೆ ಜಮೀನು, ಮರಳೂರಿನಲ್ಲಿ 1.85 ಕೋಟಿ ರು. ಮೌಲ್ಯದ 20 ಗುಂಟೆ ಜಮೀನು, ಹೇರೂರು ಕಸಬಾ ಹೋಬಳಿಯಲ್ಲಿ 4.38 ಲಕ್ಷ ರು. ಮೌಲ್ಯದ ಜಮೀನು, ಅಮರಜ್ಯೋತಿ ನಗರದಲ್ಲಿ 20.85 ಲಕ್ಷ ರು. ಮೌಲ್ಯದ ಬಿಡಿ ನಿವೇಶನ, ಗಂಗಸಂದ್ರದಲ್ಲಿ, 17 ಲಕ್ಷ ರು. ಮೌಲ್ಯದ ಜಾಗ, 1.71 ಕೋಟಿ ರು. ಮೌಲ್ಯದ ನಿವೇಶನಗಳು, ಬೆಂಗಳೂರಿನ ಆರ್.ಎಂ.ವಿ ಬಡಾವಣೆಯಲ್ಲಿ 4.71 ಕೋಟಿ ರು. ಮೌಲ್ಯದ ಕಟ್ಟಡ, ತುಮಕೂರಿನ ಗಾಂಧಿನಗರದಲ್ಲಿ 35.96 ರು. ಲಕ್ಷ ಮೌಲ್ಯದ ಜಾಗ ಹೊಂದಿದ್ದಾರೆ.
ಅಂತೆಯೇ ಪತ್ನಿ ಶಕುಂತಲಾ ಅವರು ಗುಬ್ಬಿ ತಾಲೂಕು ಮತ್ತಿಘಟ್ಟದಲ್ಲಿ 15 ಲಕ್ಷ ಮೌಲ್ಯದ 7.50 ಎಕರೆ ಜಮೀನು ಗಾಂಧಿನಗರದಲ್ಲಿ 42 ರು. ಲಕ್ಷ ರು. ಬೆಲೆ ಬಾಳುವ ಜಾಗ, ಶಂಕರಪುರಂ ಬಡಾವಣೆಯಲ್ಲಿ ಸುಮಾರು 50 ಲಕ್ಷ ರು. ಮೀರಿದ ನಾಲ್ಕು ನಿವೇಶನಗಳು ಸೇರಿ 4.99 ರು. ಕೋಟಿ ಮೌಲ್ಯದ ಸ್ಥಿರಾಸ್ಥಿ ಮಾಲೀಕರಾಗಿದ್ದಾರೆ.
ಚಿನ್ನ, ಬೆಳ್ಳಿ: ಸಂಸದ ಬಸವರಾಜ್, 11.20 ಲಕ್ಷ ರು.ಮೌಲ್ಯದ ಚಿನ್ನ-ಬೆಳ್ಳಿ ಆಭರಣಗಳನ್ನು ಹೊಂದಿದ್ದರೆ, ಪತ್ನಿಯ ಬಳಿ 10.70 ಲಕ್ಷ ರು. ಮೌಲ್ಯದ ಚಿನ್ನಾಭರಣಗಳಿದೆ.
ಸಂಸದರು ತಮ್ಮ ಹಾಗೂ ತಮ್ಮ ಪತ್ನಿ ಹೆಸರಲ್ಲಿ ಬ್ಯಾಂಕ್ನಲ್ಲಿ ಕೋಟ್ಯಂತರ ರು. ಸಾಲವನ್ನು ಮಾಡಿದ್ದಾರೆ. ಜಿ.ಎಸ್.ಬಸವರಾಜು ಅವರ ಹೆಸರಲ್ಲಿ 3.63 ಕೋಟಿ ರು. ಸಾಲ ವಿವಿಧ ಬ್ಯಾಂಕ್ಗಳಲ್ಲಿದೆ. ಪತ್ನಿ ಹೆಸರಲ್ಲಿ 3.8 ಕೋಟಿ ರು. ಸಾಲ ಇದೆ. ಮೈಸೂರು ವಿವಿ ಬಿಎಲ್ ಪದವೀಧರರಾದ 73 ವರ್ಷದ ಸಂಸದರ ವಾರ್ಷಿಕ ವರಮಾನ 61.59 ಲಕ್ಷ ರು. ಗಳಿದ್ದು, ಪತ್ನಿ ಶಕುಂತಲ ಅವರ ವಾರ್ಷಿಕ ವರಮಾನ 19.14 ಲಕ್ಷ ರು. ಇದೆ.