ಕೋಳಿನಾದ್ರು ಕುಯ್ರಿ, ಹೋಳಿಗೆನಾದ್ರು ಮಾಡಿ, ಒಗ್ಗೂಡಿ: ಸೋಮಣ್ಣ
ತುಮಕೂರು: ಹಿಂದಿನ ಭಿನ್ನಾಭಿಪ್ರಾಯವನ್ನೆಲ್ಲಾ ಮರೆಯಿರಿ. ಜಗಳ ಮಾಡ್ಕೋಬೇಡಿ. ಏ. 17 ದೇಶದ ಹಬ್ಬದ ದಿನ. ಕೋಳಿನಾದ್ರು ಕುಯ್ರಿ, ಹೋಳಿಗೆನಾದ್ರು ಮಾಡಿ. ಎಲ್ಲರೂ ಒಗ್ಗೂಡಿ. ಬಿಜೆಪಿಗೆ ಮತಚಲಾಯಿಸಿ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ವಿ. ಸೋಮಣ್ಣ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾರ್ಮಿಕವಾಗಿ ನುಡಿದರು.
ಅವರು ತುಮಕೂರು ಬಿಜೆಪಿ ಲೋಕಸಭಾ ಅಭ್ಯರ್ಥಿ ಜಿ.ಎಸ್. ಬಸವರಾಜು ನಾಮಪತ್ರ ಸಲ್ಲಿಸಿದ ನಂತರ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ಈ ಲೋಕಸಭಾ ಚುನಾವಣೆ ಐತಿಹಾಸಿಕ ಚುನಾವಣೆ. ಅರಾಜಕತೆ ಹೋಗಲಾಡಿಸಲು, ಸಾರ್ವಭೌಮತೆ ಎತ್ತಿಹಿಡಿಯಲು, ದೇಶವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯಲು, ವಿಚ್ಛಿದ್ರಕಾರಿ ಶಕ್ತಿಗಳನ್ನು ಬಗ್ಗು ಬಡಿಯಲು, ಬಿಜೆಪಿಗೆ ಮತ ಚಲಾಯಿಸಿ, ಮೋದಿ ಪ್ರಧಾನಿಯಾಗಲು ಸಹಕರಿಸಿ. ಇದು ಜಿಪಂ, ತಾಪಂ, ವಿಧಾಸಸಭೆ ಚುನಾವಣೆಯಲ್ಲ ಎಂಬುದನ್ನು ನೆನಪಿನಲ್ಲಿಡಿ. ಕಾಂಗ್ರೆಸ್ ಪಕ್ಷದಿಂದ ದೇಶ ಅರಾಜಕತೆಯತ್ತ ಸಾಗಿದೆ. ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಕೇಂದ್ರ ಸಚಿವ ಚಿದಂಬರಂ ಅಂತವರು ಹೆದರಿ ಚುನಾವಣಾ ಕಣದಿಂದಲೇ ಓಡಿ ಹೋಗುತ್ತಿದ್ದಾರೆ. ಇದೀಗ ಬದಲಾವಣೆ ಪರ್ವ ಬಂದೊದಗಿದೆ. ಇದು ಭಾರತ ಗೆಲ್ಲಿಸಿ ಚುನಾವಣೆ. ಸವಾಲಾಗಿ ಸ್ವೀಕರಿಸಿ. ಹಳಿ ತಪ್ಪಿರುವ ದೇಶಕ್ಕೆ ಮೋದಿ ಎಂಬ ದಂಡನಾಯಕೊಬ್ಬನ ಅವಶ್ಯಕತೆಯಿದೆ. ಮೋದಿ ಗೆಲ್ಲಿಸಿ. ದೇಶವನ್ನು ಸರಿದಾರಿಯತ್ತ ಕೊಂಡೊಯ್ಯಿರಿ ಎಂದು ಸೋಮಣ್ಣ ಬಿಜೆಪಿ ಕಾರ್ಯಕರ್ತರಿಗೆ ಕಳಕಳಿಯ ಮನವಿ ಮಾಡಿದರು.