ಪುರಸಭೆ: ಜೆಡಿಎಸ್ ಅಧಿಪತ್ಯ
ಕ.ಪ್ರ.ವಾರ್ತೆ ಕುಣಿಗಲ್ ಮಾ.24
ಸೋಮವಾರ ನಡೆದ ಪುರಸಭೆ ಅಧ್ಯಕ್ಷ,ಉಪಾಧ್ಯಕ್ಷ ಚುನಾವಣೆಯ ಅಂತಿಮ ಕ್ಷಣದಲ್ಲಿ ಕೈಪಾಳೆಯ ಸದಸ್ಯೆಯೊಬ್ಬರನ್ನು ತಮ್ಮಪಾಳೆಯಕ್ಕೆ ಸೆಳೆಯುವಲ್ಲಿ ಯಶಸ್ವಿಯಾದ ಜೆಡಿಎಸ್ ಮುಖಂಡರು, ಕಾಂಗ್ರೆಸ್ ಪಕ್ಷಕ್ಕೆ ಮರ್ಮಾಘಾತ ನೀಡುವ ಮೂಲಕ, ಪುರಸಭೆ ಅಧಿಕಾರ ಗದ್ದುಗೆ ಜೆಡಿಎಸ್ ಪಡೆಯುವಲ್ಲಿ ಯಶಸ್ವಿಯಾದರು. ಕೆ.ಎಲ್. ಹರೀಶ್ 3ನೇ ಬಾರಿಗೆ ಅಧ್ಯಕ್ಷರಾಗಿ ಹ್ಯಾಟ್ರಿಕ್ ಸಾಧನೆ ಮಾಡಿದರು.
ವಿಜಯಮ್ಮ ಉಪಾಧ್ಯಕ್ಷರಾಗಿ ಆಯ್ಕೆ ಆದರು. ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ತೀವ್ರ ಕುತೂಹಲ ಕೆರಳಿಸಿತ್ತು. ಒಟ್ಟೂ 25 ಸದಸ್ಯರಿದ್ದು (ಒಬ್ಬ ಸಂಸದ, ಶಾಸಕ ಸೇರಿ) ವಿಜಯೀ ಅಭ್ಯರ್ಥಿಗಳು ತಲಾ 13 ಮತ ಪಡೆದರೆ, ಪರಾಜಿತ ಅಭ್ಯರ್ಥಿಗಳು 12 ಮತ ಪಡೆದರು.
ವಿವಿಧ ಪಕ್ಷದ ಸದಸ್ಯರು ಚುನಾವಣೆಯಲ್ಲಿ ತಮ್ಮ ಪಕ್ಷಗಳಿಂದ ಸ್ಪರ್ಧಿಸಿ ಗೆದ್ದಿದ್ದರೂ, ಅಧಿಕಾರ ಹಿಡಿಯುವ ಹಪಾಹಪಿಗೆ ಬಿದ್ದ ಕಾರಣ ಪಕ್ಷಗಳ ತತ್ವಸಿದ್ಧಾಂತ ಗಾಳಿಗೆ ತೂರಿ ಅಧಿಕಾರ ಪಡೆಯಲು ಯತ್ನಿಸಿದ್ದು ಸಾರ್ವಜನಿಕರ ಗಮನ ಸೆಳೆಯಿತು.
ಜೆಡಿಎಸ್ ನೇತೃತ್ವವನ್ನು ಶಾಸಕ ಡಿ.ನಾಗರಾಜಯ್ಯ ವಹಿಸಿದ್ದರೆ, ಕಾಂಗ್ರೆಸ್ ಮುಖಂಡತ್ವವನ್ನು ಸಂಸದ ಡಿ.ಕೆ. ಸುರೇಶ್ ವಹಿಸುವ ಮೂಲಕ ತಮ್ಮ ಶಕ್ತಿಯನ್ನೇ ಪಣಕ್ಕಿಟ್ಟಿದ್ದರು.
ಬೆಳಗ್ಗೆ ಹತ್ತುಗಂಟೆಗೆ ಬೆಂಗಳೂರಿನಿಂದ ಸಂಸದರ ಜೊತೆಯಲ್ಲಿ ಆಗಮಿಸಿದ ಕಾಂಗ್ರೆಸ್ ಬೆಂಬಲಿಗರ ಗುಂಪು, ಕಾಂಗ್ರೆಸ್ ಕಾರ್ಯಾಲಯದಲ್ಲಿ ಸೇರಿದರೆ, ಜೆಡಿಎಸ್ ಗುಂಪು ಶಾಸಕ ಡಿ.ನಾಗರಾಜಯ್ಯನವರ ಮನೆಯಲ್ಲಿ ಜಮಾವಣೆಗೊಂಡು ಪ್ರತ್ಯೇಕ ವಾಹನಗಳಲ್ಲಿ ಪುರಸಭೆ ಕಾರ್ಯಾಲಯಕ್ಕೆ ಆಗಮಿಸಿದರು.
ನುಂಗಲಾರದ ತುತ್ತು: ಬೆಳಗ್ಗೆ ಜೆಡಿಎಸ್ ಮುಖಂಡರು, ಕೈಪಾಳೆಯದ ಸದಸ್ಯೆ ವಿಜಯಮ್ಮನವರನ್ನು ತಮ್ಮೆಡೆಗೆ ಸೆಳೆದುಕೊಂಡಿದ್ದು ಕಾಂಗ್ರೆಸ್ ಗುಂಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು.
ಇಲ್ಲಿನ ಪುರಸಭೆ ಇತಿಹಾಸದಲ್ಲೆ ಮೊಟ್ಟಮೊದಲ ಬಾರಿಗೆ ಸಂಸದರು ಬಂದು ತಮ್ಮ ಪಕ್ಷದ ಸದಸ್ಯರು ಅಧ್ಯಕ್ಷಗಾದಿಗೇರಲಿ ಎಂಬ ಆಶಯದಿಂದ ಮತಚಲಾವಣೆ ಮಾಡಿದ್ದು ವಿಶೇಷ ಸಂಗತಿ ಎನಿಸಿತು. ಕಾಂಗ್ರೆಸ್
ಬೆಂಬಲಿತ ಗುಂಪಿನಿಂದ ಅಧ್ಯಕ್ಷ ಸ್ಥಾನಕ್ಕೆ ಚಂದ್ರಶೇಖರ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ರಾಮು ನಾಮಪತ್ರ ಸಲ್ಲಿಸಿದರೆ, ಜೆಡಿಎಸ್ ಗುಂಪಿನಿಂದ ಕೆ.ಎಲ್. ಹರೀಶ್ ಅಧ್ಯಕ್ಷ ಸ್ಥಾನಕ್ಕೆ, ವಿಜಯಮ್ಮ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.
ಆಯ್ಕೆ ಪ್ರಕ್ರಿಯೆಯಲ್ಲಿ ಕೈ ಎತ್ತುವ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆದಿದ್ದು, ಹರೀಶ್, ವಿಜಯಮ್ಮ ತಲಾ 13 ಮತ ಪಡೆದು ಕೇವಲ ಒಂದು ಮತದ ಅಂತರದಿಂದ ವಿಜಯಿಯಾಗುವ ಮೂಲಕ ಕಳೆದೊಂದು ವಾರದಿಂದ ಕೈಚಳಕ ತೋರಿಸಿ, ಪುರಸಭೆ ಕೈವಶ ಮಾಡಿಕೊಳ್ಳಲು ತೀವ್ರ ಪ್ರಯತ್ನ ನಡೆಸಿದ್ದ ಕೈಪಾಳೆಯಕ್ಕೆ ಆಘಾತ ನೀಡಿದರು.
ಚುನಾವಣೆ ಅಧಿಕಾರಿಯಾಗಿ ಪ್ರಭಾರ ತಹಸೀಲ್ದಾರ್ ತಮ್ಮಯ್ಯ ಕಾರ್ಯನಿರ್ವಹಿಸಿದ್ದು, ಮುಖ್ಯಾಧಿಕಾರಿ ಅನ್ನದಾನಿ ಉಪಸ್ಥಿತರಿದ್ದರು. ಪುರಸಭೆಯ 23ನೇ ವಾರ್ಡ್‌ನಿಂದ ಆಯ್ಕೆಯಾಗಿರುವ ಕೆ.ಎಲ್. ಹರೀಶ್ ಪುರಸಭೆಗೆ ನಾಲ್ಕು ಬಾರಿ ಆಯ್ಕೆಯಾಗಿದ್ದು, ಇದೀಗ ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಸಾಧಿಸಿದ್ದಾರೆ.