ಸುಳ್ಳು ಆರೋಪಕ್ಕೆ ಛೀಮಾರಿ ಹಾಕಿ
ಕೊರಟಗೆರೆ: ತಮ್ಮ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವವರಿಗೆ ಬಿಜೆಪಿ ಕಾರ್ಯಕರ್ತರು ಛೀಮಾರಿ ಹಾಕಬೇಕು ಎಂದು ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜು ತಿಳಿಸಿದರು.
ಅವರು ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ವಿಧಾನ ಸಭಾ ಘಟಕ ಏರ್ಪಡಿಸಿದ್ದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 215 ಯೋಜನೆಗಳನ್ನು ಮಂಜೂರು ಮಾಡಿಸಿ ಸಾವಿರಾರು ಕೋಟಿ ರು. ಗಳ ಅಭಿವೃದ್ದಿ ಕಾರ್ಯಗಳನ್ನು ಮಾಡಿಸಿದ್ದು ನನ್ನ ಸಾಧನೆ ಪುಸ್ತಕ ರೂಪದಲ್ಲಿ ಹೊರತರುತ್ತೇನೆ. ತಪ್ಪಿದ್ದರೆ ಕೇಸು ಹಾಕಿಕೊಳ್ಳಲಿ. ನನ್ನ ವಿರುದ್ಧ ಅರೋಪ ಮಾಡುತ್ತಿರುವ ಪ್ರತಿ ಪಕ್ಷಗಳ ಅಭ್ಯರ್ಥಿಗಳ ಕೊಡುಗೆ ಜಿಲ್ಲೆಗೇನು ಎಂದು ಪ್ರಶ್ನಿಸಿದರು. ಯಾವುದೇ ಉಪಯೋಗಕ್ಕೆ ಬಾರದೆ ಸಮುದ್ರಕ್ಕೆ ಹರಿಯುತಿರುವ ನೀರನ್ನು ತಡೆದು ಇಡಿ ದೇಶಕ್ಕೆ ಹರಿಸುವ ಮಹತ್ತರ ಯೋಜನೆಯನ್ನು ಭವಿಷ್ಯದ ಪ್ರಧಾನಿ ನರೇಂದ್ರ ಮೋದಿ ರೂಪಿಸಿದ್ದು ಇದರಿಂದ ದೇಶದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವುದರೊಂದಿಗೆ ವಿದ್ಯುತ್ ಸಮಸ್ಯೆ ನಿವಾರಣೆ, ಕೈಗಾರಿಕೆಗೆ ಆದ್ಯತೆ ನೀಡಿದ್ದಾರೆ ಎಂದರು.
ಕುರುಕ್ಷೇತ್ರ: ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಸುರೇಶ್‌ಗೌಡ ಮಾತನಾಡಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಮುದ್ದಹನುಮೇಗೌಡರು ಕೆಪಿಸಿಸಿ ಅಧ್ಯಕ್ಷರ ಅಭ್ಯರ್ಥಿಯಾಗಿದ್ದು ಜೆಡಿಎಸ್‌ನಿಂದ ರಾಜ್ಯಾಧ್ಯಕ್ಷರೆ ಕಣದಲ್ಲಿರುವುದು ಹಾಗೂ ಬಿಜೆಪಿಯಿಂದ ಜಿ.ಎಸ್. ಬಸವರಾಜು ಸ್ಪರ್ಧಿಸಿರುವುದರಿಂದ ಈ ಕ್ಷೇತ್ರ ನಿಜವಾದ ಕುರುಕ್ಷೇತ್ರವಾಗಿ ಮಾರ್ಪಟ್ಟಿದೆ ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ಪವನ್ ಕುಮಾರ್, ಮಾಜಿ ಶಾಸಕ ಸಿ. ವೀರಭದ್ರಯ್ಯ, ಜಿ.ಪಂ.ಸದಸ್ಯೆ ಮಂಜುಳಾ, ತುಮಕೂರು ತಾ.ಪಂ.ಉಪಾಧ್ಯಕ್ಷ ಪ್ರಸನ್ನಕುಮಾರ್, ಜಿ.ಪಂ.ಮಾಜಿ ಸದಸ್ಯ ರುದ್ರೇಶ್, ಮುಖಂಡರಾದ ವಾಲೇ ಚಂದ್ರಯ್ಯ, ಎಪಿಎಂಸಿ ಚಂದ್ರಶೇಖರ್, ರಾಮದೇವಮ್ಮ, ವಿಜಯ್‌ಕುಮಾರ್, ನಟರಾಜು, ವಿಶ್ವನಾಥ್, ಆರ್.ಪಿ. ರವಿಶಂಕರ್, ಸಿ.ಎಸ್. ಹನುಮಂತರಾಜು, ಪ್ರದೀಪ್‌ಕುಮಾರ್, ರವಿಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಕೀಲರಾದ ದೇವರಾಜು, ಸಂತೋಷ್, ಅಗ್ರಹಾರದ ಆರಾಧ್ಯ ಮತ್ತಿತರರು ಪಕ್ಷಕ್ಕೆ ಸೇರ್ಪಡೆಯಾದರು.