ತಿಪಟೂರು ಮತದಾರರ ಮರೆಯಲಾರೆ: ಜಿಎಸ್ಬಿ
ತಿಪಟೂರು: ತುಮಕೂರು ಕ್ಷೇತ್ರದಿಂದ ನಾನು ಐದಾರೂ ಬಾರಿ ಚುನಾವಣೆಯಲ್ಲಿ ನಿಂತಿದ್ದು, ತಿಪಟೂರು ಮತದಾರರು ನನಗೆ ಎಂದೂ ಮೋಸ ಮಾಡಿಲ್ಲ. ಪ್ರತಿ ಬಾರಿಯೂ ನನ್ನ ನಿರೀಕ್ಷೆ ಮೀರಿ ಮತ ನೀಡಿದ್ದು ನಾನೆಂದೂ ತಿಪಟೂರಿನ ಜನತೆಯನ್ನು ಮರೆಯುವುದಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜು ತಿಳಿಸಿದರು.
ಪಟ್ಟಣದ ಗುರುಕುಲಾ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, 'ನರೇಂದ್ರ ಮೋದಿ ಅವರು ಗುಜರಾತ್ನಲ್ಲಿ ಹಮ್ಮಿಕೊಂಡಿದ್ದ ಕೆಲವು ಸಭೆಗಳಲ್ಲಿ ನಾನು ಪಾಲ್ಗೊಂಡಿದ್ದು, ಅಲ್ಲಿನ ಜನರ ಪ್ರೋತ್ಸಾಹ, ಅಭಿಮಾನ ಮತ್ತು ಮೋದಿಯವರು ಮಾಡಿರುವ ಜನಪರ ಕೆಲಸಗಳನ್ನು ಗಮನಿಸಿದರೆ ಅವರೇ ಜಯಶಾಲಿಯಾಗಲಿದ್ದಾರೆ. ಬಿಜೆಪಿ ಅಧಿಕಾರಾವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಿದ್ದು, ಗುಜರಾತ್ ಶೈಲಿಯಲ್ಲಿ ನಮ್ಮ ಕರ್ನಾಟಕವನ್ನು ಅಭಿವೃದ್ಧಿಪಡಿಸಿದರೆ ರಾಮರಾಜ್ಯವಾಗುತ್ತದೆ ಎಂದರು.
ಜಿಲ್ಲಾಧ್ಯಕ್ಷ ಸುರೇಶ್ ಗೌಡ ಮಾತನಾಡಿ, 'ಕಾಂಗ್ರೆಸ್ ಮೋದಿಯವರನ್ನು ವಿರೋಧ ಮಾಡಿದರೆ ಮುಂದೊಂದು ದಿನ ದೊಡ್ಡ ದುರಂತವನ್ನು ಎದುರಿಸಬೇಕಾಗುತ್ತಿದೆ.
ಇಡೀ ದೇಶಕ್ಕೆ ಕೇಂದ್ರ ಬಿಂದು ಮೋದಿ. ಇಂದು ಪೆಟ್ರೋಲ್, ಅಡುಗೆ ಅನಿಲ, ಸೀಮೆಎಣ್ಣೆ ಬೆಲೆಗಳು ಗಗನಕ್ಕೇರುತ್ತಿದ್ದು, ಇದರಿಂದ ಜನಸಾಮಾನ್ಯರ ಸ್ಥಿತಿ ಅತಂತ್ರವಾಗಿದೆ. ಜೆಡಿಎಸ್ನಲ್ಲಿ ಅಳುವ ನಾಯಕರೇ ಹೆಚ್ಚಾಗಿದ್ದು, ಚುನಾವಣಾ ಪ್ರಚಾರದಲ್ಲಿ ಕಣ್ಣೀರಿಟ್ಟರೆ ಗೆಲ್ಲುತ್ತಾರೆಯೇ? ಜನಪರ ಕಾರ್ಯಗಳು ಮುಖ್ಯ. ನಮಗೆ ಅಳುವ ನಾಯಕರು ಬೇಡ. ನಮ್ಮ ನಾಯಕರಾದ ಜಿ.ಎಸ್.ಬಿಯವರಿಗೆ ಮತ ನೀಡುವ ಮೂಲಕ ಅವರನ್ನು ಜಯಶೀಲರನ್ನಾಗಿ ಮಾಡಬೇಕು ಎಂದರು.
ಬಿಜೆಪಿ ಮುಖಂಡ ಲೋಕೇಶ್ವರ, ಮಾಜಿ ಶಾಸಕ ಬಿ.ಸಿ. ನಾಗೇಶ್ ಮಾತನಾಡಿದರು.
ರಾಜ್ಯ ಬಿಜೆಪಿ ಕಾರ್ಯದರ್ಶಿ ನಂದೀಶ್, ಮುಖಂಡರಾದ ಶಿರಾ ಮಂಜುನಾಥ್, ದಿವಾಕರ್, ಪ್ರಕಾಶ್, ಗಂಗಾಧರ್, ದೇವರಾಜು,ತೀರ್ಥಪ್ರಸಾದ್, ಶೋಭಾ, ಶಂಕರಪ್ಪ ಮತ್ತಿತರರು ಮಾತನಾಡಿದರು.