ದೇವೇಗೌಡ, ಸಿಎಂಗೆ ತುಮಕೂರೇ ಪ್ರತಿಷ್ಠೆ
ಉಗಮ ಶ್ರೀನಿವಾಸ್
ಕನ್ನಡಪ್ರಭ ವಾರ್ತ್ಣೆ ತುಮಕೂರ್ಣುಮಾ.25
ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತುಮಕೂರು ಕ್ಷೇತ್ರವೇ ಪ್ರತಿಷ್ಠಿತವಾಗಿದೆ.
ಮೊನ್ನೆಯಷ್ಟೆ ಜೆಡಿಎಸ್ ರಾಜ್ಯಾಧ್ಯಕ್ಷ ಎ. ಕೃಷ್ಣಪ್ಪ ಅವರು ನಾಮಪತ್ರ ಸಲ್ಲಿಸಿದಾಗ ಖುದ್ದು ಮಾಜಿ ಪ್ರಧಾನಿಯೇ ಬಂದು ಹೋಗಿದ್ದರು. ಬಂದು ಹೋಗಿದಷ್ಟೆ ಅಲ್ಲ. ಕಾರ್ಯಕರ್ತರನ್ನು ಹುರಿದುಂಬಿಸಿದ್ದರು. ಈಗ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡರು ಬುಧವಾರ ನಾಮಪತ್ರ ಸಲ್ಲಿಸುವಾಗ ಖುದ್ದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೇ ಹಾಜರಿರುತ್ತಾರೆ.
ಮೊನ್ನೆ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ತುಮಕೂರು ಲೋಕಸಭೆ ಅಭ್ಯರ್ಥಿ ಎ. ಕೃಷ್ಣಪ್ಪ ಅವರು ನಾಮಪತ್ರ ಸಲ್ಲಿಕೆ ಸಮಯದಲ್ಲಿ ದೇವೇಗೌಡರು ಈ ಬಾರಿ ಹಿಂದುಳಿದ ವರ್ಗದವರಿಗೆ ಟಿಕೆಟ್ ನೀಡಿದ್ದು ಅಹಿಂದ ವರ್ಗದ ಬಂಧುಗಳು ಜೆಡಿಎಸ್ಗೆ ಆಶೀರ್ವಾದ ಮಾಡಬೇಕು ಎಂದು ವಿನಂತಿಸಿಕೊಂಡಿದ್ದರು. 1996 ರಲ್ಲಿ ದೇವೇಗೌಡರು ಹಿಂದುಳಿದ ವರ್ಗಕ್ಕೆ ಸೇರಿದ್ದ ಸಿ.ಎನ್. ಭಾಸ್ಕರಪ್ಪ ಅವರಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡರು. ಈ ಬಾರಿಯೂ ಅದೇ ಸೂತ್ರದ ಆಧಾರದ ಮೇಲೆ ಗೊಲ್ಲ ಸಮುದಾಯದ ಎ. ಕೃಷ್ಣಪ್ಪ ಅವರಿಗೆ ಟಿಕೆಟ್ ನೀಡಿದ್ದಾರೆ.
ಅಹಿಂದ ವರ್ಗಗಳ ಮತಗಳೇ ಹೆಚ್ಚು ಇರುವ ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್ ಮತ್ತು ಕಾಂಗ್ರೆಸ್ಗೆ ಪ್ರತಿಷ್ಠೆಯ ಕಣವಾಗಿದೆ. ಇದಕ್ಕೆ ಇಂಬು ಕೊಡುವಂತೆ ಖುದ್ದು ಮಾಜಿ ಪ್ರಧಾನಿ ದೇವೇಗೌಡರೇ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಬಂದು ಹೋಗಿದ್ದರು. ಈಗ ಮುಖ್ಯಮಂತ್ರಿಗಳು ಬರುತ್ತಿರುವುದು ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಿದೆ.
ಈ ಹಿಂದೆ ಸಿದ್ದರಾಮಯ್ಯ ಅವರು ತುಮಕೂರಿನಲ್ಲಿ ದೊಡ್ಡ ಮಟ್ಟದಲ್ಲಿ ಅಹಿಂದ ಸಮಾವೇಶ ಮಾಡಿಸಿದ್ದರು. ಶೇ.60 ಕ್ಕೂ ಹೆಚ್ಚು ಅಹಿಂದ ವರ್ಗದ ಮತದಾರರು ಇಲ್ಲಿರುವುದರಿಂದ ಹೇಗಾದರೂ ಈ ಕ್ಷೇತ್ರವನ್ನು ಗೆಲ್ಲಿಸಿಕೊಳ್ಳಬೇಕೆಂಬುದು ಈ ಎರಡೂ ಪಕ್ಷಗಳ ಆಶಯವಾಗಿದೆ.
ಪ್ರತಿಷ್ಠೆಗೆ ಕಾರಣವೂ ಇದೆ: ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರ ತವರು ಕ್ಷೇತ್ರವಾಗಿರುವ ತುಮಕೂರಿನಲ್ಲಿ ಮುದ್ದಹನುಮೇಗೌಡರಿಗೆ ಟಿಕೆಟ್ ನೀಡಿರುವುದು ಪರಮೇಶ್ವರ್ ಅವರ ಒತ್ತಾಯದಿಂದ. ಕಳೆದ ವಿಧಾನಸಭೆಯಲ್ಲಿ ಸೋತಿರುವ ಪರಮೇಶ್ವರ್ ಅವರಿಗೆ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಅಲ್ಲದೇ ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಪರಮೇಶ್ವರ್ ಪರ ಚುನಾವಣಾ ಪ್ರಚಾರಕ್ಕೆ ಬಾರದೇ ಇರುವುದು ಕೂಡ ಅಸಮಾಧಾನಕ್ಕೆ ಕಾರಣವಾಗಿತ್ತು.
ಈಗ ಖುದ್ದು ಮುಖ್ಯಮಂತ್ರಿಗಳೇ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಪಾಲ್ಗೊಳ್ಳುತ್ತಿರುವುದು ಕೆಪಿಸಿಸಿ ಅಧ್ಯಕ್ಷರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವೆ ಭಿನ್ನಾಭಿಪ್ರಾಯ ಇದೆ ಎಂಬ ಗೊಂದಲಕ್ಕೆ ತೆರೆ ಬೀಳಲಿದೆ ಎನ್ನಲಾಗಿದೆ.
ಬಿಸಿಲನ್ನು ಲೆಕ್ಕಿಸದ ಗೌಡರು: ದೇವೇಗೌಡರು ತುಮಕೂರು ಕ್ಷೇತ್ರವನ್ನು ಪ್ರತಿಷ್ಠಿತ ಕ್ಷೇತ್ರವಾಗಿ ಪರಿಗಣಿಸಿದ್ದಾರೆ. ಅವತ್ತು ಎ. ಕೃಷ್ಣಪ್ಪ ಪರ ನಾಮಪತ್ರ ಸಲ್ಲಿಕೆಗೆ ಬಂದಾಗ ಅವರು ಬಿಸಿಲನ್ನು ಲೆಕ್ಕಿಸಲಿಲ್ಲ. ಜಿಲ್ಲಾಧಿಕಾರಿಗಳ ಮೊದಲ ಅಂತಸ್ತಿನ ಕಟ್ಟಡಕ್ಕೆ ಹೋಗಿ ಬಂದಿದ್ದರು. ಬಿಸಿಲಿನ ಝಳದಲ್ಲೇ ನಿರರ್ಗಳವಾಗಿ ಮಾತನಾಡಿದ್ದರು. ಅಲ್ಲದೇ ಮೊನ್ನೆಯಷ್ಟೆ ತಡ ರಾತ್ರಿ ತುಮಕೂರಿಗೆ ಬಂದು ಜೆಡಿಎಸ್ ಶಾಸಕರೊಂದಿಗೆ ಕಾರ್ಯತಂತ್ರ ರೂಪಿಸಿ ಹೋಗಿದ್ದರು ಎನ್ನಲಾಗಿದೆ. ಒಟ್ಟಾರೆಯಾಗಿ ತುಮಕೂರು ಕ್ಷೇತ್ರ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಜಿದ್ದಾಜಿದ್ದಿಗೆ ವೇದಿಕೆ ಒದಗಿಸಲಿದೆ.