ಒಂದೇ ಹಂತದ ಚುನಾವಣೆ: ರಾಜ್ಯದ ಕಾನೂನು ಸುವ್ಯವಸ್ಥೆಯ ದ್ಯೋತಕ
ಕ.ಪ್ರ.ವಾರ್ತೆ ತುಮಕೂರು ಮಾ.26
ಈ ಬಾರಿ ಲೋಕಸಭಾ ಚುನಾವಣೆ ಒಂದೇ ಹಂತದಲ್ಲಿ ನಡೆಯುತ್ತಿರುವುದು ರಾಜ್ಯ ಸರ್ಕಾರದ ಹೆಗ್ಗಳಿಕೆ. ಕಾನೂನು ಸುವ್ಯವಸ್ಥೆ ಸರಿಯಾಗಿರುವುದರ ದ್ಯೋತಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.
ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದಲ್ಲಿ 9 ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ. ಯಾವ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದೆಯೋ, ಅಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಸಲು ಚುನಾವಣಾ ಆಯೋಗ ತೀರ್ಮಾನಿಸಿದೆ. ಇದು ಚುನಾವಣಾ ಆಯೋಗವೇ ನೀಡಿರುವ ತೀರ್ಮಾನ. ಹೀಗಾಗಿ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆ ಎಂದರ್ಥ ಎಂದು ಸಿದ್ದರಾಮಯ್ಯ ವಿಶ್ಲೇಷಿಸಿದರು.
ಬಿಜೆಪಿ ಬೇರೆ-ಬೇರೆ ಮಾಧ್ಯಮಗಳಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ ಕುಸಿದಿದೆ. ಜನ ನೆಮ್ಮದಿಯಿಂದ ಬದುಕಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆಯೆಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ ಚುನಾವಣಾ ಆಯೋಗವೇ ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಪರೋಕ್ಷವಾಗಿ ಸರ್ಟಿಪಿಕೇಟ್ ನೀಡಿದೆ. ನಿಜಕ್ಕೂ ಕಾನೂನು ಸುವ್ಯವಸ್ಥೆ ಸರಿದಾರಿಗೆ ಬಂದಿದ್ದೇ ಕಳದ ವರ್ಷ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ. ಕೆಪಿಸಿಸಿ ಅಧ್ಯಕ್ಷರು ಹಾಗೂ ತಾವು ಈ ಲೋಕಸಭಾ ಚುನಾವಣೆಯ ಫಲಿತಾಂಶದ ಜಂಟಿ ಹೊಣೆಗಾರರು ಎಂದು ಘೋಷಿಸಿದ ಸಿದ್ದರಾಮಯ್ಯ, ಈ ಬಾರಿ ರಾಜ್ಯದಲ್ಲಿ 20 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. 3 ನೇ ಬಾರಿಗೆ ಕೇಂದ್ರದಲ್ಲಿ ಯುಪಿಎ ಸರ್ಕಾರ ರಚಿಸುವುದು ಖಚಿತ ಎಂದರು.
ಬಿಜೆಪಿ, ಕಾಂಗ್ರೆಸ್ ಏಕ ವ್ಯಕ್ತಿ ಕೇಂದ್ರೀತ: ಬಿಜೆಪಿ, ಜೆಡಿಎಸ್ ಏಕವ್ಯಕ್ತಿ ಪಕ್ಷಗಳಾಗಿವೆ. ನರೇಂದ್ರ ಮೋದಿಯವರನ್ನು ದೇವತಾ ಮನುಷ್ಯನೆಂಬಂತೆ ಬಿಂಬಿಸಲಾಗುತ್ತಿದೆ. ಚುನಾವಣೆಗಿಂತಲೂ ಮುಂಚೆಯೇ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಇನ್ನು ಮಾಜಿ ಪ್ರಧಾನಿ ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರದ್ದು ಬಿಜೆಪಿಗಿಂತ ಬಿನ್ನವಲ್ಲದ ಕಥೆ. ಆದರೆ ಕಾಂಗ್ರೆಸ್ ಜನತಂತ್ರ ವ್ಯವಸ್ಥೆ, ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇಟ್ಟಂತಹ ಪಕ್ಷ. ಅದೇ ಹಾದಿಯಲ್ಲಿ ಚುನಾವಣೆಯನ್ನು ಎದುರಿಸಿದವರು ನಾವು. ಚುನಾಯಿತ ಪ್ರತಿನಿಧಿಗಳು ನಾಯಕನನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಿರುವ ಪಕ್ಷ ಕಾಂಗ್ರೆಸ್. ಇಲ್ಲದ ಮೋದಿ ಅಲೆಯನ್ನು ಇದೆಯೆಂದು ಸುಳ್ಳು-ಸುಳ್ಳೇ ಬಿಂಬಿಸಲಾಗುತ್ತಿದೆ. ತಾವು ರಾಜ್ಯವನ್ನು ಸುತ್ತುತ್ತಿದ್ದು, ಮೋದಿ ಅಲೆಯೆಂಬುದು ಇಲ್ಲವೇ ಇಲ್ಲ ಎಂದರು. ಇನ್ನು ಸಂಘ-ಪರಿವಾರದ, ಬಿಜೆಪಿ ಭದ್ರ ಕೋಟೆಯೆಂದೇ ಹೆಸರಾಗಿರುವ ಕರಾವಳಿಯ ಉಡುಪಿ- ಮಂಗಳೂರು ಕಡೆ ಕಾಂಗ್ರೆಸ್ಪಕ್ಷದ 7 ಎಂಎಲ್ಎಗಳಿದ್ದಾರೆ. ಇಲ್ಲೂ ಕಾಂಗ್ರೆಸ್ ಹಿಡಿತ ಸಾಧಿಸಿದೆ ಎಂಬುದನ್ನು ಮರೆಯಲಾಗದು ಎಂದರು.
ಕಣ್ಣೀರಿಡುವ ಅಪ್ಪ-ಮಗ: ಅಧಿಕಾರ ದಾಹಿಗಳಾಗಿರುವ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಅವರ ಪುತ್ರ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರದ್ದು ಫ್ಯೂಡಲ್ ಕ್ಯಾರೆಕ್ಟರ್. ಆದರೆ ಪ್ರಜಾತಂತ್ರದಲ್ಲಿ ನಂಬಿಕೆ ಇರೋನು ನಾನು. ತಾವು ಜೆಡಿಎಸ್ ಸೇರಿದಂತೆ ಯಾವೊಂದು ಪಕ್ಷವನ್ನು ನಾಶ ಮಾಡಿದ ವ್ಯಕ್ತಿಯಲ್ಲ. ದ್ವೇಷ ರಾಜಕಾರಣ ಮಾಡಿದವನೂ ಅಲ್ಲ. ಆದರೆ ವಿನಾಕಾರಣ ಅಪ್ಪ-ಮಕ್ಕಳಿಬ್ಬರೂ ತಮ್ಮನ್ನು ಟೀಕಿಸುತ್ತಾರೆ. ಜೆಡಿಎಸ್ನ್ನು ಜನತೆ ತಿರಸ್ಕರಿಸುತ್ತಾರೆ. ಈ ಅಪ್ಪ-ಮಕ್ಕಳಿಬ್ಬರಿಗೂ ಚುನಾವಣೆ ಬಂತೆಂದರೆ ವೇದಿಕೆ ಒಮೇಲೆ ಕಣ್ಣೀರು ಧಾರಾಕಾರವಾಗಿ ಸುರಿಯಲಾರಂಭಿಸುತ್ತದೆ. ಆದರೆ ಮಿಕ್ಕಂತೆ ಕಣ್ಣೀರು ಎಲ್ಲಿರುತ್ತೆ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. ಸಾರ್ವಜನಿಕವಾಗಿ ಅಳೋ ಗಂಡಸರನ್ನು ನಂಬಬಾರದು ಎಂಬ ಗಾದೆ ಮಾತನ್ನು ದೇವೆಗೌಡರು, ಕುಮಾರಸ್ವಾಮಿ ಕುರಿತಂತೆ ತಾವು ನೆನಪಿಸಿದ್ದೇನೆ ಅಷ್ಟೆ ಎಂದರು.
ಈ ಮಾಧ್ಯಮ ಸಂವಾದದ ವೇಳೆ ಸಿಎಂ ಮಾಧ್ಯಮ ಸಮನ್ವಯಾಧಿಕಾರಿ ಕೆ.ವಿ. ಪ್ರಭಾಕರ್, ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ, ಸಿ.ಎಂ. ಇಬ್ರಾಹಿಂ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸೊಗಡು ವೆಂಕಟೇಶ್, ಹಿರಿಯ ಪತ್ರಕರ್ತ ಟಿ.ಎಸ್. ಗಟ್ಟಿ ಇತರರು ಉಪಸ್ಥಿತರಿದ್ದರು.
ಮೋದಿ ಹೊಣೆ, ಕಾನ್ಸ್ಟೇಬಲ್ಗಳಲ್ಲ!
ಸಿಖ್ ನರಮೇಧಕ್ಕೆ 2002 ರ ಗುಜರಾತ್ ಹತ್ಯಾಕಾಂಡವನ್ನು ಹೋಲಿಸಲಾಗದು. ಅವರು ಮಾಡಿದರು ಅಂತ ಇವರು ಮಾಡಲಾಗದು. ಮಾಡಬಾರದು. ಅದೂ ಸಮರ್ಥನೆಯಲ್ಲ. ಅದೇನು ಆದರ್ಶದ ಕೆಲಸವಲ್ಲ. ಗುಜರಾತ್ ನರಮೇಧಕ್ಕೆ ನೇರ ಹೊಣೆ ಅಲ್ಲಿನ ಆಡಳಿತದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ನರೇಂದ್ರ ಮೋದಿ ನೇರ ಹೊಣೆಯೇ ಹೊರತು, ಆ ರಾಜ್ಯದ ಪೊಲೀಸ್ ಕಾನ್ಸ್ಟೇಬಲ್ಗಳಲ್ಲ ಎಂದರು.