ಕುರಿ ಮಂದೆ ಮೇಲೆ ಚಿರತೆ ದಾಳಿ
ಕುಣಿಗಲ್: ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ಕೊಡವತ್ತಿ ಗ್ರಾಮದ ಮರಿಯಣ್ಣ ಎಂಬುವರಿಗೆ ಸೇರಿದ ಕುರಿ ಮಂದೆ ಮೇಲೆ ಚಿರತೆ ದಾಳಿ ಮಾಡಿದ ಪರಿಣಾಮ ಆರು ಕುರಿಗಳು ಮೃತಪಟ್ಟಿವೆ. ಜಾನುವಾರು ಭಕ್ಷಕ ಚಿರತೆ ಹಿಡಿಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಅರಣ್ಯಾಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಅರಣ್ಯ, ಕಂದಾಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಹುತಾತ್ಮ
ದಿನಾಚರಣೆ
ತಿಪಟೂರು: ಪಟ್ಟಣದ ಶ್ರೀ ಗುರುಕುಲ ವಿದ್ಯಾರ್ಥಿನಿಲಯದಲ್ಲಿ ನಡೆದ ಭಗತ್ಸಿಂಗ್, ರಾಜ್ಗುರು, ಸುಖದೇವ್ರವರ ಹುತಾತ್ಮ ದಿನಾಚರಣೆಯನ್ನು ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ವಿಶ್ವನಾಥಯ್ಯ ಉದ್ಘಾಟಿಸಿದರು. ಉಪನ್ಯಾಸಕ ಜಿ.ಎಸ್. ರಘು ಮಾತನಾಡಿ, ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಭಗತ್ಸಿಂಗ್, ಸುಖದೇವ, ರಾಜ್ಗುರು ಅವರಲ್ಲಿದ್ದ ಅಪ್ರತಿಮ ರಾಷ್ಟ್ರಭಕ್ತಿಯನ್ನು ಇಂದಿನ ಯುವ ಪೀಳಿಗೆ ಮೈಗೂಡಿಸಿಕೊಂಡು ಸದೃಢ ಭಾರತ ನಿರ್ಮಾಣ ಮಾಡಬೇಕೆಂದು ಕರೆ ನೀಡಿದರು. ಸಿಇಒ ಹರಿಪ್ರಸಾದ್, ವ್ಯವಸ್ಥಾಪಕ ದಕ್ಷಿಣಾಮೂರ್ತಿ, ಸಿದ್ದಲಿಂಗಮೂರ್ತಿ ಇದ್ದರು. ನಂತರ ಲೆಜೆಂಡ್ ಆಫ್ ಭಗತ್ ಸಿಂಗ್ ಚಲನಚಿತ್ರ ಪ್ರದರ್ಶಿಸಲಾಯಿತು.
ಚುನಾವಣೆ ದೇಶದ ದಿಕ್ಕು ಬದಲಿಸಲಿದೆ
ತುಮಕೂರು: ಏ.17 ರಂದು ನಡೆಯಲಿರುವ ಲೋಕಸಭಾ ಚುನಾವಣೆ ದೇಶದ ದಿಕ್ಕನ್ನೇ ಬದಲಾಯಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ತಿಳಿಸಿದರು.
ಕಾಂಗ್ರೆಸ್ ಹಲವಾರು ಕ್ರಾಂತಿಕಾರಿ ಯೋಜನೆಗಳನ್ನು ತನ್ನ ಅಧಿಕಾರದ ಅವಧಿಯಲ್ಲಿ ನೀಡಿದೆ. ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ರಮ್ಯಾ ಬಳಿ ರು. 2.20 ಕೋಟಿ ಚರ, ಸ್ಥಿರಾಸ್ತಿ
ಮಂಡ್ಯ: ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಕಳೆದ ಆರು ತಿಂಗಳಲ್ಲಿ 45 ಲಕ್ಷ ರು. ಆದಾಯ ಗಳಿಸಿರುವುದಾಗಿ ಚುನಾವಣಾಧಿಕಾರಿಗಳಿಗೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ತಿಳಿಸಿದ್ದಾರೆ. ಕಳೆದ ಉಪ ಚುನಾವಣೆ ಸಮಯದಲ್ಲಿ ಅವರ ಚರಾಸ್ತಿ ಕೇವಲ 15,92,976 ರು. ಮಾತ್ರ ಇತ್ತು. ಅದು ಪ್ರಸಕ್ತ ಸಾರ್ವತ್ರಿಕ ಚುನಾವಣೆ ವೇಳೆಗೆ 60,43,931 ರು.ಗಳಿಗೆ ಏರಿಕೆಯಾಗಿದೆ. ಈಗ ಒಟ್ಟಾರೆ 2.80 ಕೋಟಿ ರು. ಮೌಲ್ಯದ ಚರ ಮತ್ತು ಸ್ಥಿರಾಸ್ತಿ ಹೊಂದಿದ್ದಾರೆ.
ಇದರಲ್ಲಿ 60,43,931 ರು. ಚರಾಸ್ತಿಯಾಗಿದ್ದರೆ, 2.20 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಅವರ ಬಳಿ ಇದೆ. ಒಟ್ಟು ಆಸ್ತಿಯಲ್ಲಿ 55,30,653 ರು. ಹಣವನ್ನು ಬ್ಯಾಂಕಿನಿಂದ ಸಾಲ ಪಡೆದಿದ್ದಾರೆ. ರಮ್ಯಾ ಹೆಸರಿನಲ್ಲಿ ಯಾವುದೇ ವಾಹನಗಳಿಲ್ಲದಿರುವುದು ಅಚ್ಚರಿಯ ಸಂಗತಿಯಾಗಿದೆ.