ಪಪಂ ಚುನಾವಣೆ: ಕಾಂಗ್ರೆಸ್‌ಗೆ ಮುಖಭಂಗ
ತುರುವೇಕೆರೆ: ಪಪಂ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ತಲಾ 7 ಸ್ಥಾನ ಗಳಿಸಿದ್ದು ಸಮಬಲದ ಹೋರಾಟ ಎಂದು ಎಲ್ಲರೂ ನಂಬಿದ್ದರು. ಆದರೆ ಕಾಂಗ್ರೆಸ್ ಪರ ಇದ್ದ ಏಕೈಕ ಅಭ್ಯರ್ಥಿ ಲೀಲಾ ರಂಗಸ್ವಾಮಿ ನಾಮಪತ್ರ ಸಲ್ಲಿಸಲು ಆಗಮಿಸಲೇ ಇಲ್ಲ!
ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಜೆಡಿಎಸ್ ವತಿಯಿಂದ ನೇತ್ರಾವತಿ ರಂಗಸ್ವಾಮಿ, ಕಾಂಗ್ರೆಸ್‌ನಿಂದ ಲೀಲಾ ರಂಗಸ್ವಾಮಿ ಸ್ಪರ್ಧಿಸುವುದು ಎಂದು ನಿರ್ಧರಿಸಲಾಗಿತ್ತು. ಬಲಾ ಬಲ ಸಮವಿರುವುದರಿಂದ ಲಾಟರಿ ಮೂಲಕ ಅಧ್ಯಕ್ಷ ಆಯ್ಕೆ ಆಗಲಿದೆ ಎಂದು ಊಹಿಸಲಾಗಿತ್ತು. ಆದರೆ ಕಾಂಗ್ರೆಸ್ ಪರ ಅಭ್ಯರ್ಥಿ ಕಳೆದ ಮೂರು ದಿನಗಳಿಂದ ಪಟ್ಟಣದಲ್ಲಿ ಇಲ್ಲವೆಂದೂ, ಅವರ ಬಳಿ ಇದ್ದ ಎಲ್ಲಾ ಮೊಬೈಲ್‌ಗಳು ಸ್ಥಬ್ದಗೊಂಡಿದ್ದವು. ಕೊನೇ ಕ್ಷಣದವರೆಗೂ ಅಧ್ಯಕ್ಷಾಂಕ್ಷಿಯಾಗಿದ್ದ ಲೀಲಾ ರಂಗಸ್ವಾಮಿ ನಾಮಪತ್ರ ಸಲ್ಲಿಸಲು ಬಾರಲೇ ಇಲ್ಲ. ತಮ್ಮ ಪಕ್ಷದ ಪರ ಇದ್ದ ಅಭ್ಯರ್ಥಿ ನಾಪತ್ತೆಯಾಗಿದ್ದರಿಂದ ಕಾಂಗ್ರೆಸ್ ಸದಸ್ಯರು ಪಪಂ ಚುನಾವಣಾ ಪ್ರಕ್ರಿಯೆ ಸ್ಥಳಕ್ಕೆ ಸುಳಿಯದೆ ಸೋಲಿಗೆ ಶರಣಾದರು.
ಅಧ್ಯಕ್ಷರಾಗಿ ನೇತ್ರಾವತಿ ರಂಗಸ್ವಾಮಿ, ಉಪಾಧ್ಯಕ್ಷರಾಗಿ ವಿಜಯೇಂದ್ರ: ನಿರೀಕ್ಷೆಯಂತೆ ಜೆಡಿಎಸ್‌ನಿಂದ ನೇತ್ರಾವತಿ ರಂಗಸ್ವಾಮಿ ಅಧ್ಯಕ್ಷ ಗಾದಿಗೆ, ಉಪಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ನಾಮಪತ್ರ ಸಲ್ಲಿಸಿದ್ದರು. ಇವರ ವಿರುದ್ಧ ಯಾವೊಬ್ಬ ಸದಸ್ಯರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾದರು. ತೀವ್ರ ಜಟಾಪಟಿ ಇದ್ದ ಈ ಚುನಾವಣೆಯಲ್ಲಿ ಪ್ರಮುಖ ಸೂತ್ರದಾರರಾಗಿದ್ದ ಶಾಸಕ ಎಂ.ಟಿ. ಕೃಷ್ಣಪ್ಪ ಸಹ ಮತದಾರರಾಗಿದ್ದರು. ಅವರೇ ಖುದ್ದು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಇತ್ತೀಗಷ್ಟೆ ಕೆಜೆಪಿಯಿಂದ ಕಾಂಗ್ರೆಸ್ ಸೇರ್ಪಡೆಯಾಗಿದ್ದ ವಿಧಾನ ಪರಿಷತ್ ಸದಸ್ಯ ಎಂ.ಡಿ. ಲಕ್ಷ್ಮೀನಾರಾಯಣ್ ಆಗಲೀ ಮಸಾಲಾ ಜಯರಾ ಆಗಲೀ, ಕಾಂಗ್ರೆಸ್ ಸದಸ್ಯರಾಗಲೀ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಲೀ ಇತರೆ ಕಾಂಗ್ರೆಸ್ ನಾಯಕರು ಇತ್ತ ಸುಳಿಯಲೇ ಇಲ್ಲ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಜೆಡಿಎಸ್ ಪಾಲಾಗುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂತಸ ಪಟ್ಟರು. ಜಿಪಂ ಸದಸ್ಯ ಎ.ಬಿ. ಜಗದೀಶ್, ತಾಪಂ ಅಧ್ಯಕ್ಷ ಕೋಳಾಲ ಗಂಗಾಧರ್, ಜೆಡಿಎಸ್ ಅಧ್ಯಕ್ಷ ಸ್ವಾಮಿ, ಎನ್.ಆರ್. ಸುರೇಶ್, ಆರ್. ಮಲ್ಲಿಕಾರ್ಜುನ್, ಶರತ್, ಪರಮೇಶ್ವರ್ ಇದ್ದರು. ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಮಾರೇಗೌಡ ಕರ್ತವ್ಯ ನಿರ್ವಹಿಸಿದರು. ಮುಖ್ಯಾಧಿಕಾರಿ ಕುಮಾರ್ ಉಪಸ್ಥಿತರಿದ್ದರು.