ಮಾನವ ಹಕ್ಕುಗಳ ರಕ್ಷಣೆ ಅಗತ್ಯ
ತುಮಕೂರು: ಸ್ಥಳೀಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನವ ಹಕ್ಕುಗಳನ್ನು ಗುರುತಿಸಿ ರಕ್ಷಿಸುವ ಕಾರ್ಯವಾಗಬೇಕಿದೆ ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರೊ. ಮೀನಾ ದೇಶಪಾಂಡೆ ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರದ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಹಾಗೂ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ, ಬೆಂಗಳೂರು ಆಶ್ರಯದಲ್ಲಿ ವಿಶ್ವವಿದ್ಯಾನಿಲಯದ ಸರ್.ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆದ ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯ ಒಂದು ದಿನದ ವಿಚಾರ ಸಂಕಿರಣದ ದಿಕ್ಸೂಚಿ ಭಾಷಣ ಮಾಡಿದರು.
ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಕುಲಪತಿ ಪ್ರೊ. ಎ.ಎಚ್. ರಾಜಾಸಾಬ್ ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯದ ಚಿಂತನೆ ಅತ್ಯಂತ ಪ್ರಸ್ತುತವಾಗಿದ್ದು, ಇಂತಹ ವಿಚಾರ ಸಂಕಿರಣಗಳು ಮೇಲಿಂದ ಮೇಲೆ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಬೇಕಿದೆ ಎಂದರು. ಮೊದಲ ವಿಚಾರಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಜೆ. ಸುರೇಶ್ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಈ ಹಕ್ಕುಗಳ ಪ್ರಾಮಾಣಿಕ ರಕ್ಷಣೆಯ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಮ್ಮ ಅಭಿಪ್ರಾಯಪಟ್ಟರು.
ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ. ಸೋಮಶೇಖರ್ ಮಾತನಾಡಿ, ವಿಶ್ವವಿದ್ಯಾನಿಲಯಗಳು ಯುವಶಕ್ತಿಯನ್ನು ತರಬೇತಿಗೊಳಿಸುವ ಸಂದರ್ಭದಲ್ಲಿ ಮಾನವ ಹಕ್ಕುಗಳ ಬಗ್ಗೆ ಮನವರಿಕೆ ಮಾಡಿಸಿಕೊಡಬೇಕು ಎಂದು ಹೇಳಿದರು. ಕುವೆಂಪು ವಿ.ವಿ. ಯ ಪ್ರೊ. ಸದಾನಂದ ಜೆ.ಎಸ್. ಮಾತನಾಡಿ, ಮಾನವ ಹಕ್ಕುಗಳು ಕಟ್ಟುನಿಟ್ಟಾಗಿ ಜಾರಿಯಾದರೆ ಭಾರತದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ದೊರಕುತ್ತವೆ ಎಂದರು. ಕುವೆಂಪು ವಿ.ವಿ. ಯ ಪ್ರಾಧ್ಯಾಪಕ ಮೋಹನ್ರಾಮ್ ಮಾತನಾಡಿ, ನಗರಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಾಗುತ್ತಿವೆ ಎಂದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ತುಮಕೂರು ವಿ.ವಿ. ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಮೀನಾಕ್ಷಿ ಖಂಡಿಮಠ್, ರಂಜನೆಗೆ ಒಳಗಾದ ಮನಸ್ಸನ್ನು ಚಿಂತನೆಗೆ ಒಳಪಡಿಸುವುದು ಕಷ್ಟಸಾಧ್ಯ. ಪಾಶ್ಚಾತ್ಯರಂತೆ ತಮ್ಮ ಸಂಸ್ಕೃತಿಯನ್ನು ಪ್ರತಿಷ್ಠಾಪಿಸುವ ಜಾಣ್ಮೆಯಲ್ಲಿ ಭಾರತೀಯರು ಸೋತಿದ್ದಾರೆ. ಭಾರತದ ಮೂಲ ಸಿದ್ಧಾಂತವನ್ನು ಪ್ರತಿಷ್ಠಾಪಿಸುವಂತಾಗಬೇಕು. ಮಾನವ ಹಕ್ಕುಗಳಿಗೆ ಅರ್ಥ ಬರುವಂತೆ ಮಾಡುವುದು ನಮ್ಮ ಸ್ವಯಂ ಬದ್ಧತೆ ಮತ್ತು ಜವಾಬ್ದಾರಿಯಾಗಿದೆ ಎಂದರು.
ಕುವೆಂಪು ವಿ.ವಿ. ಯ ಪ್ರೊ.ಜೆ.ಎಸ್. ಸದಾನಂದ್, ಸಮಾರೋಪ ಭಾಷಣ ಮಾಡಿದರು. ಕರ್ನಾಟಕ ಕಾನೂನು ಸಂಸದೀಯ ಸಂಸ್ಥೆಯ ಮುಖ್ಯಸ್ಥ ಡಾ. ರಾಜಯ್ಯ ಒಡೆಯರ್ ಇದ್ದರು. ಕಾರ್ಯಕ್ರಮದಲ್ಲಿ ಪ್ರೊ. ಹೇಮಲತಾ ಜಯರಾಜ್, ಡಾ. ಬಸವರಾಜು, ಡಾ. ಮಹಲಿಂಗಪ್ಪ, ಡಾ. ಉದ್ದಗಟ್ಟಿ ವೆಂಕಟೇಶ್, ವಿವಿಧ ವಿಭಾಗಗಳ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.