ರೈತರ ಮೇಲೆ ಹಲ್ಲೆ: ಕ್ರಮಕ್ಕೆ ಆಗ್ರಹ
ಗುಬ್ಬಿ: ರೈತರಿಗೆ ಸಾಲ ನೀಡಿದ ಬ್ಯಾಂಕುಗಳು ರೈತರ ಮನೆ ಜಪ್ತಿ ಮಾಡುವುದು, ಏಕಾಏಕಿ ರೈತರ ಮೇಲೆ ದೌರ್ಜನ್ಯ ನಡೆಸುವುದು ಕಾನೂನು ಬಾಹಿರವಾಗಿದ್ದು, ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ರೈತ ಸಂಘದ ಜಿಲ್ಲಾಧ್ಯಕ್ಷ ಎ. ಗೋವಿಂದರಾಜು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುರುವೇಕೆರೆ ತಾಲೂಕು ದೊಡ್ಡಗೊರಾಘಟ್ಟ ಗ್ರಾಮದ ರೈತ ಶ್ರೀಧರ್ ಡಿ. ಕಲ್ಕೆರೆ ವ್ಯವಸಾಯೋತ್ಪನ್ನ ಸಹಕಾರ ಸಂಘದಲ್ಲಿ ಕೃಷಿ ಸಾಲ ಪಡೆದಿದ್ದು ಕಳೆದ ಕೆಲವು ದಿನಗಳ ಹಿಂದೆ ಸಾಲ ಪಾವತಿಸುವಂತೆ ರೈತರ ಮನೆಗೆ ಬಂದ ಸಹಕಾರ ಸಂಘದ ಪದಾಧಿಕಾರಿಗಳು ಹಲ್ಲೆ ನಡೆಸುತ್ತಿದ್ದ ಸಂದರ್ಭದಲ್ಲಿ ಆತನ ರಕ್ಷಣೆಗೆ ಬಂದ ಗರ್ಭಿಣಿ ಪತ್ನಿ ಮೇಲೆಯೂ ಹಲ್ಲೆ ನಡೆಸಿದ ಪರಿಣಾಮ ಆಕೆಯ ಹೊಟ್ಟೆಯಲ್ಲಿದ್ದ ಮಗು ಮೃತಪಟ್ಟಿದೆ. ಈಹಿನ್ನೆಲೆಯಲ್ಲಿ ಸಹಕಾರ ಸಂಘದ ಪದಾಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಘಟನೆಗೆ ಕಾರಣರಾದವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ರೈತ ಕುಟುಂಬಕ್ಕೆ ರು. 5 ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ರೈತರ ಮೇಲೆ ನಡೆದ ಹಲ್ಲೆಯ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಹಲವು ದಿನಗಳೇ ಕಳೆದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮಾ.29 ರಂದು ತುರುವೇಕೆರೆ ತಾಲೂಕು ಕಚೇರಿ ಮುಂಭಾಗ ರೈತ ಸಂಘದವತಿಯಿಂದ ಪ್ರತಿಭಟನೆ ನಡೆಸಲಾಗುವುದೆಂದು ತಿಳಿಸಿದರು.
ಗೋಷ್ಠಿಯಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಎಂ. ನಿಜಾನಂದಮೂರ್ತಿ, ಕಾರ್ಯದರ್ಶಿ ವೆಂಕಟೇಗೌಡ, ಖಜಾಂಚಿ ವೆಂಕಟೇಶ್ ಇದ್ದರು.