ಸಂಸದರೇ 2 ದೋಣಿ ಪ್ರಯಾಣ ಸುರಕ್ಷಿತವಲ್ಲ: ಸುರೇಶ್‌ಗೌಡ
ಚಿಕ್ಕನಾಯಕನಹಳ್ಳಿ: ಮನೆಯ ಮಕ್ಕಳನ್ನು ನಿರ್ಲಕ್ಷಿಸಿ ನೆರೆಮನೆಯ ಮಕ್ಕಳನ್ನು ಪ್ರೀತಿಸುವ ಸಂಸದರ ನಡವಳಿಕೆ ಸರಿಯಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹಾಗು ಶಾಸಕ ಬಿ. ಸುರೇಶ್‌ಗೌಡ ಆಕ್ಷೇಪಿಸಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಲೋಕಸಭಾ ಚುನಾವಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕಳೆದ ಅವಧಿಯಲ್ಲಿ ಪಕ್ಷದ ಸೂಚನೆಯಂತೆ ಪಕ್ಷದ ಪ್ರಾಥಮಿಕ ಸದಸ್ಯರಲ್ಲದ ನಿಮ್ಮನ್ನು ಅಭ್ಯರ್ಥಿಯನ್ನಾಗಿ ಮಾಡಿದರು. ಕಾರ್ಯಕರ್ತರು ಚಕಾರವೆತ್ತದೆ ಚುನಾವಣೆಯಲ್ಲಿ ದುಡಿದು ಗೆಲ್ಲಿಸಿದರು.
ಆದರೆ ನೀವು ಮಾಡಿದ್ದೇನು, 25 ವರ್ಷಗಳಿಂದ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದ ಕಾರ್ಯಕರ್ತರನ್ನು ಕಡೆಗಣಿಸಿ, ಬಾಯಿಗೆ ಬಂದಂತೆ ಮಾತನಾಡಿದ್ದಲ್ಲದೆ, ಪಕ್ಷವಿರೋಧಿ ಚಟುವಟಿಕೆ ಮಾಡಿದಿರಿ. ಕೆಜೆಪಿ ಸೇರಿ ಜಿಲ್ಲೆಯಲ್ಲಿ ಬಿಜೆಪಿ ಸೋಲಿಗೆ ಕಾರಣರಾದಿರಿ, ನಮ್ಮನ್ನು ಜಿಲ್ಲೆಯಲ್ಲಿ ಮೂಲೆಗುಂಪು ಮಾಡಿದವರು ಕೆಜೆಪಿಯವರು.
ಆದರು ಪುನಃ ನಿಮ್ಮನ್ನು ಪಕ್ಷ ಅಭ್ಯರ್ಥಿಯನ್ನಾಗಿ ಮಾಡಿದೆ. ನಮ್ಮ ಪಕ್ಷದ ತಪ್ಪು ನಿರ್ಧಾರದಿಂದಾಗಿ ಕಾರ್ಯಕರ್ತರಿಗೆ ತೊಂದರೆಯಾಗಿದೆ. ಬೇರೆ ಪಕ್ಷದವರನ್ನು ಓಲೈಸುವ ಭರದಲ್ಲಿ ನಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಮೂಲೆಗುಂಪಾಗದಂತೆ ಎಚ್ಚರ ವಹಿಸುವುದು ಅಗತ್ಯ. ಜಿಲ್ಲೆಯಲ್ಲಿ ಪಕ್ಷದ ಮುಖಂಡರಲ್ಲಿ ಒಗ್ಗಟ್ಟಿಲ್ಲದ್ದರಿಂದ ಹೈಕಮಾಂಡ್ ನಮ್ಮ ಮೇಲೆ ಸವಾರಿ ಮಡುತ್ತಿದೆ. ಓಟುಗಳಿರುವುದು ನಾಯಕನ ಹಿಂದಲ್ಲ, ಕಾರ್ಯಕರ್ತನ ಹಿಂದೆ ಎಂಬುದನ್ನು ಮರೆಯ ಬಾರದು ಎಂದು ಜಿ.ಎಸ್.ಬಸವರಾಜುರವರಿಗೆ ಚಾಟಿಯೇಟು ನೀಡಿದರು. ಕ್ಷೇತ್ರದ ಮಾಜಿ ಶಾಸಕ ಕೆ.ಎಸ್. ಕಿರಣ್‌ಕುಮಾರ್ ಮಾತನಾಡಿದರು.